Advertisement

ರಾಜ್ಯ ಸರ್ಕಾರಕ್ಕೆ ನಿಧಾನಕ್ಕೆ ತಟ್ಟಿದ ನೋಟು ಅಮಾನ್ಯ ಬಿಸಿ

06:25 AM Aug 10, 2017 | Team Udayavani |

ಬೆಂಗಳೂರು: ನೋಟು ಅಮಾನ್ಯೀಕರಣದ ಪರಿಣಾಮ ನಿಧಾನವಾಗಿ ರಾಜ್ಯದ ಸಂಪನ್ಮೂಲ ಕ್ರೋಢೀಕರಣದ ಮೇಲೆ ಪರಿಣಾಮ ಬೀರುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದಲ್ಲಿ ಅಬಕಾರಿ, ಮೋಟಾರು ವಾಹನ ಹಾಗೂ ನೋಂದಣಿ ಹಾಗೂ ಮುದ್ರಾಂಕ ಆದಾಯದಲ್ಲಿ ಕುಸಿತವಾಗಿದೆ.

Advertisement

ನೋಟು ಅಮಾನ್ಯೀಕರಣದ ನಂತರ ರಿಯಲ್‌ ಎಸ್ಟೇಟ್‌ ವಹಿವಾಟು ಇಳಿಮುಖವಾಗಿರುವುದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಕುಸಿತಕ್ಕೆ ಕಾರಣವಾದರೆ, ಕಾರು, ಬೈಕ್‌ ಸೇರಿ ವಾಹ ನಗಳ ಖರೀದಿ ಕಡಿಮೆಯಾಗಿರುವುದು ಮೋಟಾರು ವಾಹನ ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗದಿರಲು ಪ್ರಮುಖ ಕಾರಣವಾಗಿದೆ.

ಅಚ್ಚರಿ ಎಂದರೆ ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅಬಕಾರಿ ವಲಯದ ತೆರಿಗೆ ಸಂಗ್ರಹವೂ ಕಡಿಮೆಯಾಗಿದೆ.

ಸಾಮಾನ್ಯವಾಗಿ ಏರುಗತಿ ಕಾಣುವ ಅಬಕಾರಿ ತೆರಿಗೆ ಇಳಿಮುಖವಾಗುತ್ತಿದೆ. ಒಟ್ಟಾರೆ ಸಂಪನ್ಮೂಲ ಕ್ರೋಢೀಕರಣ ಕುಸಿತ ಆರ್ಥಿಕ ಇಲಾಖೆಯ ಆತಂಕಕ್ಕೂ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

2017-18ನೇ ಸಾಲಿನಲ್ಲಿ ಅಬಕಾರಿ, ಮೋಟಾರು ವಾಹನ ಹಾಗೂ ನೋಂದಣಿ ಮತ್ತು ಮುದ್ರಾಂಕ ಬಾಬಿ¤ನಲ್ಲಿ 33,056 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, ಏಪ್ರಿಲ್‌ನಿಂದ ಜೂನ್‌ವರೆಗೆ 7744 ಕೋಟಿ ರೂ. (ಶೇ.23ರಷ್ಟು ) ಸಂಗ್ರಹವಾಗಿದೆ.

Advertisement

ಕಳೆದ ವರ್ಷ ಇದೇ ಅವಧಿಯಲ್ಲಿ ಮೂರೂ ವಲಯಗಳಿಂದ ಬಜೆಟ್‌ನಲ್ಲಿ ನಿರೀಕ್ಷಿಸಲಾಗಿದ್ದ 20,770 ಕೋಟಿ ರೂ. ಪೈಕಿ 7648 ಕೋಟಿ ರೂ. (ಶೇ.25 ರಷ್ಟು) ಸಂಗ್ರಹವಾಗಿತ್ತು. 2016-17ನೇ ಸಾಲಿನ ಏಪ್ರಿಲ್‌-ಜೂನ್‌ ವೇಳೆಗೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಬಕಾರಿ ತೆರಿಗೆ ಶೇ.10.9, ಮೋಟಾರು ವಾಹನ ತೆರಿಗೆ ಶೇ.23 ಹಾಗೂ ನೋಂದಣಿ ಮತ್ತು ಮುದ್ರಾಂಕ ತೆರಿಗೆ ಶೇ.39ರಷ್ಟು ಹೆಚ್ಚಳವಾಗಿತ್ತು.

ಆದರೆ, ಈ ವರ್ಷದ ಮೂರು ತಿಂಗಳಲ್ಲಿ ಅಬಕಾರಿ ವಲಯದ ತೆರಿಗೆ ಏರಿಕೆ ಪ್ರಮಾಣ ಶೇ.0.0ಗೆ ಕುಸಿದಿದ್ದರೆ, ಮೋಟಾರು ವಾಹನ ತೆರಿಗೆ ಶೇ.9.7ರಷ್ಟು ಮಾತ್ರ ಏರಿಕೆ ಕಂಡಿದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಶೇ.-1.5 ಇಳಿಕೆಯಾಗಿದೆ. 

ವಾಣಿಜ್ಯ ತೆರಿಗೆ “ಕೈ’ ಹಿಡಿದಿದೆ: ರಾಜ್ಯ ಸರ್ಕಾರದ ಖಜಾನೆ ಕೈ ಹಿಡಿದಿರುವುದು ವಾಣಿಜ್ಯ ತೆರಿಗೆ ಮಾತ್ರ. 2017-18 ನೇ ಸಾಲಿನಲ್ಲಿ 55000 ಕೋಟಿ ರೂ. ಸಂಗ್ರಹದ ಗುರಿ ಹೊಂದಿದ್ದು, ಏಪ್ರಿಲ್‌ -ಜೂನ್‌ ಅವಧಿಯಲ್ಲಿ 14,490 ಕೋಟಿ ರೂ. ಸಂಗ್ರಹದ ಮೂಲಕ ಬಜೆಟ್‌ ನಿರೀಕ್ಷೆಯ ಶೇ.26.3 ಸಾಧನೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.15.2 ಹೆಚ್ಚಳ ಕಂಡಿರುವುದು ಸಮಾಧಾನಕರ ಸಂಗತಿ. ಇದಿಷ್ಟು ತೆರಿಗೆ ಆದಾಯದ್ದಾದರೆ, ಮತ್ತೂಂದೆಡೆ ತೆರಿಗೆಯೇತರ ಆದಾಯದಲ್ಲೂ ಖೋತಾ ಆಗಿದ್ದು, ಮೂರು ತಿಂಗಳಲ್ಲಿ 6945 ಕೋಟಿ ರೂ. ಸಂಗ್ರಹದ ನೀರಿಕ್ಷೆಯ ಪೈಕಿ 1238 ಕೋಟಿ ರೂ. ಮಾತ್ರ ಸಂಗ್ರಹವಾಗಿ ಶೇ.17.8 ಸಾಧನೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.-30 ರಷ್ಟು ಇಳಿಕೆಯಾಗಿದೆ. 

ಕಳೆದ ವರ್ಷ ಇದೇ ವೇಳೆ 6220 ಕೋಟಿ ರೂ. ಸಂಗ್ರಹ ಗುರಿಯ ಪೈಕಿ 1769 ಕೋಟಿ ರೂ. ಸಂಗ್ರಹವಾಗಿ ಶೇ.28.4 ರಷ್ಟು ಸಾಧನೆ ಮಾಡಲಾಗಿತ್ತು. ಆ ಮೂಲಕ ಅದರ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ.68.2ರಷ್ಟು ಏರಿಕೆಯಾಗಿತ್ತು. 2017-18ನೇ ಸಾಲಿನ ತೆರಿಗೆ ಆದಾಯದ ಅಬಕಾರಿ, ಮೋಟಾರು ಹಾಗೂ ನೋಂದಣಿ ಮತ್ತು ಮುದ್ರಾಂಕ ಹಾಗೂ ತೆರಿಗೆಯೇತರ ಆದಾಯ ಬಾಬಿ¤ನ ಮೊದಲ ತ್ತೈಮಾಸಿಕದ ಕುಸಿತ ಎರಡನೇ ತ್ತೈಮಾಸಿಕಕ್ಕೂ ಮುಂದುವರಿದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಬಹುದು ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಅಬಕಾರಿ ಆದಾಯಕ್ಕೆ ಕತ್ತರಿ?
ಏಪ್ರಿಲ್‌ನಿಂದ ಜೂನ್‌ವರೆಗೆ ಅಬಕಾರಿ ಆದಾಯದಲ್ಲಿ ಕಡಿಮೆಯಾಗಿರುವುದು ಒಂದೆಡೆಯಾದರೆ, ಜುಲೈ 1ರಿಂದ ಹೆದ್ದಾರಿ ಅಕ್ಕಪಕ್ಕದ 3901 ಬಾರ್‌ ಅಂಡ್‌ ರೆಸ್ಟೋರೆಂಟ್‌ ಬಂದ್‌ ಮಾಡಲಾಗಿದೆ.

ನಗರ ಮಧ್ಯಭಾಗದಲ್ಲಿ ಹಾದು ಹೋಗಿರುವ ಹಳೆಯ ಹೆದ್ದಾರಿ ಬದಿಯ 741 ಮದ್ಯದ ಅಂಗಡಿಗಳು ಸೇರಿ 4642 ಅಂಗಡಿ ಮುಚ್ಚಲಾಗಿ ಅಲ್ಲಿನ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ವಿಚಾರದಲ್ಲಿ ನ್ಯಾಯಾಲಯದಿಂದ ತೀರ್ಮಾನ ಹೊರಬಿದ್ದಿಲ್ಲ. ಹೀಗಾಗಿ, ಜುಲೈ-ಸೆಪ್ಟೆಂಬರ್‌ವರೆಗಿನ ಎರಡನೇ ತ್ತೈಮಾಸಿಕ ಅವಧಿ ಅಂತ್ಯದವರೆಗೂ ಇದೇ ಸ್ಥಿತಿ ಮುಂದುವರಿದರೆ ಅಬಕಾರಿ ಆದಾಯ ಶೇ.25ರಷ್ಟು
ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

– ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next