ತುಮಕೂರು: ನಗರದ ಯಾವುದೇ ರಸ್ತೆಗೆ ಹೋದರೂ ಕೆಸರಿನ ದರ್ಶನ ಸಾಮಾನ್ಯವಾಗಿದೆ. ರಾಜ್ಯದ ವಿವಿಧೆಡೆ ಬಿರುಸಾಗಿ ಮಳೆ ಸುರಿದು ಅವಾಂತರ ಸೃಷ್ಟಿಸಿದ್ದರೆ ತುಮಕೂರಿನಲ್ಲಿ ಸುರಿಯುತ್ತಿರುವ ತುಂತುರು ಮಳೆಗೆ ರಸ್ತೆಗಳು ಕೆಸರುಗದ್ದೆಯಂತಾಗಿದ್ದು, ನಾಗರಿಕರು ಓಡಾಡದ ಸ್ಥಿತಿ ಉಂಟಾಗಿದೆ.
ತುಮಕೂರನ್ನು ಸ್ಮಾರ್ಟ್‌ಸಿಟಿಯಾಗಿಸುವ ನಿಟ್ಟಿನಲ್ಲಿ ಹಲವಾರು ಕಾಮಗಾರಿ ಕೈಗೊಳ್ಳ ಲಾಗಿದೆ. ಪ್ರಮುಖ ರಸ್ತೆಗಳ ನಿರ್ಮಾಣಕ್ಕೆ ಮುಂದಾಗಿರುವ ಅಧಿಕಾರಿಗಳು ನಿಗದಿತ ಅವಧಿಗೆ ಕಾಮಗಾರಿ ಪೂರ್ಣಗೊಳಿಸಲು ವಿಫಲರಾಗಿದ್ದಾರೆ. ನಗರದ ಬಿ.ಎಚ್ ರಸ್ತೆ, ಅಶೋಕ ರಸ್ತೆ, ಕೆ.ಆರ್. ಬಡಾವಣೆ ರಸ್ತೆ ಸೇರಿ ದಂತೆ ವಿವಿಧೆಡೆ ಸಂಚಾರ ಹೆಚ್ಚಾ ಗಿರುತ್ತದೆ. ಈ ರಸ್ತೆಗಳಲ್ಲಿ ಕಾಮಗಾರಿ ಮಾಡಲು ಗುಂಡಿ ಅಗೆದು ತಿಂಗಳುಗಟ್ಟಲೆ ತೆರವು ಮಾಡದಿರು ವುದರಿಂದ ಮಣ್ಣು ಮಳೆ ನೀರಿನೊಂದಿಗೆ ಸೇರಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಕೆಲವು ರಸ್ತೆಗಳ ಕಾಮಗಾರಿ ಮುಗಿದಿದ್ದರೂ ಓಡಾಡಲಾಗದ ಸ್ಥಿತಿಯಲ್ಲಿ ಇನ್ನೂ ಇದೆ.
ಕೆಸರುಮಯ ರಸ್ತೆ: ಇದಲ್ಲದೇ ನಗರದ ಬಹುತೇಕ ಕಡೆ ಗ್ಯಾಸ್ ಪೈಪ್‌ಲೈನ್ ಮತ್ತು 24×7 ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿವೆ. ಕಾರ್ಮಿಕರು ಗುಂಡಿ ಅಗೆದು ರಸ್ತೆ ಮೇಲೆಯೇ ಬೇಕಾಬಿಟ್ಟಿ ಮಣ್ಣು ಸುರಿಯುತ್ತಿದ್ದಾರೆ. ಜೊತೆಗೆ ಪೈಪ್‌ಲೈನ್ ಅಳವಡಿಸಿದ ಮೇಲೆ ಸರಿಯಾಗಿ ಮುಚ್ಚುತ್ತಿಲ್ಲ. ಇದರಿಂದ ಜಿಟಿಜಿಟಿ ಮಳೆಗೆ ಮಣ್ಣು ರಸ್ತೆಯನ್ನು ಕೆಸರುಮಯವನ್ನಾಗಿಸುತ್ತದೆ. ಈ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿರುವುದು ಇದೆ. ನಗರ ಪಾಲಿಕೆ, ಜನಪ್ರತಿನಿಧಿ ಗಳನ್ನು ದಿನನಿತ್ಯ ಜನರು ಶಪಿಸುವಂತಾಗಿದೆ. ಕಾಮಗಾರಿಗಳು ಮುಗಿದ ಮೇಲೆ ಸರಿಯಾದ ರೀತಿಯಲ್ಲಿ ಮಣ್ಣುಹಾಕಿ ಗುಂಡಿ ಮುಚ್ಚದಿರುವುದ ರಿಂದ ಮಕ್ಕಳು, ಜಾನುವಾರುಗಳು ಬೀಳುವ ಅಪಾಯವಿದೆ.
ರಸ್ತೆಗಳ ದುರಸ್ತಿಯಾಗಿಲ್ಲ: ಯಾವುದೆ ತೊಂದರೆ ಇಲ್ಲದೆ ಸಂಚರಿಸಲು ಯೋಗ್ಯವಾಗಿದ್ದ ಉತ್ತಮ ರಸ್ತೆಗಳನ್ನು ಕಾಮಗಾರಿಗಳ ಹೆಸರಿನಲ್ಲಿ ಹಾಳು ಮಾಡಲಾಗಿದೆ. ಇತ್ತೀಚಿಗಷ್ಟೇ ಡಾಂಬರೀಕರಣ ಮಾಡಿ ರುವ ರಸ್ತೆ ಹಾಳು ಮಾಡಲಾಗಿದೆ.
ಈ ಕಾಮಗಾರಿಗಳು ಮುಗಿದು ಹಲವು ತಿಂಗಳು ಕಳೆದಿದ್ದರೂ, ಈ ರಸ್ತೆಗಳ ದುರಸ್ತಿಯಾಗಿಲ್ಲ. ನಿಯಮದ ಪ್ರಕಾರ ರಸ್ತೆ ಹಾಳು ಮಾಡಿದರೆ ಸರಿಪಡಿಸಬೇಕು. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆ ನಿವಾರಿಸ ಬೇಕು ಎಂಬುದು ನಾಗರಿಕರ ಒತ್ತಾಯ.
ಇದಲ್ಲದೇ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಹಲವು ತಿಂಗಳು ಕಳೆದಿವೆ. ಕನಿಷ್ಠ ಈ ಗುಂಡಿ ಮುಚ್ಚುವ ಕೆಲಸ ಅಧಿಕಾರಿಗಳು ಮಾಡುತ್ತಿಲ್ಲ.
ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಗುಂಡಿಗಳಲ್ಲಿ ನೀರು ತುಂಬಿ, ಸಂಚಾರರಿಗೆ ಗುಂಡಿಗಳು ಕಾಣದಂತಾಗಿ ಅಪಘಾತ ಗಳು ಸಂಭವಿಸುತ್ತಿವೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನಹರಿಸಿ ಕೆಸರುಗದ್ದೆಗಳಾಗಿರುವ ರಸ್ತೆ ಸರಿಪಡಿಸಿ ಪ್ರಮುಖ ರಸ್ತೆಗಳಲ್ಲಿರುವ ಗುಂಡಿ ಮುಚ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
● ಚಿ. ನಿ. ಪುರುಷೋತ್ತಮ್