ನಂಜನಗೂಡು: ಕಾರ್ತೀಕ ಮಾಸದ ಕಡೇ ಸೋಮವಾರ ಶ್ರೀಕಂಠೇಶ್ವರ ದೇವಾಲಯದ ಬಾನಂಗಳದಲ್ಲಿ ಬಣ್ಣದ ಚಿತ್ತಾರದ ಆಕರ್ಷಣೆಯ ಸೇವೆ ವಿಜೃಂಭಿಸಿತು. ಪಟ್ಟಣದ ಕಪಿಲ ನದಿಯ ಶ್ರೀಕಂಠೇಶ್ವರ ಸ್ನಾನ ಘಟ್ಟದಲ್ಲಿ ವರ್ಷವಿಡೀ ಕಾಯಕ ನಡೆಸುವ (ಮುಡಿಕಟ್ಟೆ )ನಯನಜ ಕ್ಷತ್ರಿಯ ರಿಂದ ಕಾರ್ತೀಕ ಮಾಸದ ಕಡೇ ಸೋಮವಾರ ಭಗವಂತನಿಗೆ ನಡೆಸಲಾಗುತ್ತಿರುವ ಸಿಡಿಮದ್ದಿನ ಸೇವೆಯ ಪ್ರಭಾವವೇ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಲು ಕಾರಣವಾಯಿತು.
ಬಾನಂಗಳದಲ್ಲಿ ಚಿತ್ತಾರ: ಕಡೇ ಕಾರ್ತೀಕ ಸೋಮವಾರ ದೇವಾಲಯಕ್ಕೆ ಆಗಮಿಸಿದ ಶ್ರೀ ಆನಂದಗುರೂಜಿ ಈ ಬಾಣ ಬಿರುಸಿನ ಕಾರ್ಯಕ್ರಮಕ್ಕೆ ಸಿಡಿಮದ್ದಿಗೆ ಬೆಂಕಿ ಇಡುವ ಮೂಲಕ ಚಾಲನೆ ನೀಡಿದರು. ಸೋಮವಾರ ರಾತ್ರಿ ಪ್ರಾರಂಭವಾದ ಈ ಬಾಣ ಬಿರುಸಿನ ಝೇಂಕಾರ ಮಧ್ಯರಾತ್ರಿಯವರಿಗೂ ನಡೆದು ಸುಮಾರು ಹತ್ತು ಸಹಸ್ರಕ್ಕಿಂತ ಹೆಚ್ಚು ಜನ ಬಾನಂಗಳದಲ್ಲಿ ಮೂಡಿಬರುವ ಬಣ್ಣದ ಚಿತ್ತಾರ ಕಂಡು ಪುಳಕಿತರಾದರು. ಇದಕ್ಕೂ ಮೊದಲು ಶ್ರೀಕಂಠೇಶ್ವರನ ಉತ್ಸವಮೂರ್ತಿಯ ಅಲಂಕರಿಸಿ ರಥಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ದೀಪ ಬೆಳಗುವುದು ಸರಿಯಲ್ಲ: ದಕ್ಷಿಣ ಕಾಶಿ ಎಂದು ಪ್ರಸಿದ್ಧವಾದ ಶ್ರೀ ನಂಜುಂಡೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಕಾರ್ತೀಕ ಮಾಸದ ಪ್ರಯುಕ್ತ ದೀಪ ಹಚ್ಚುವ ಪದ್ಧತಿ ಸರಿಯಲ್ಲ ಎಂದು ಆನಂದ ಗುರೂಜಿ ಅಭಿಪ್ರಾಯಪಟ್ಟರು. ದೇವಾಲಯದ ಒಳಾವರಣದಲ್ಲಿ ಸಹಸ್ರಾರು ದೀಪಗಳನ್ನು ಏಕಕಲಾಕ್ಕೆ ಬೆಳಗುವ ಪದ್ಧತಿಯಿಂದ ಸ್ವಾಮಿಯವರ ಲಿಂಗವೂ ಸೇರಿದಂತೆ ದೇವಾಲಯಕ್ಕೆ ಹಾನಿ ಖಂಡಿತವಾಗಿದ್ದು, ಈ ದೀಪ ಬೆಳಗುವ ವ್ಯವಸ್ಥೆಯನ್ನು ಹೊರಾವರಣಕ್ಕೆ ಸ್ಥಳಾಂತರಿಸಿಬೇಕು ಎಂದು ಮನವಿ ಮಾಡಿದರು.
ದೇಗುಲದ ಆಡಳಿತಕ್ಕೆ ಮನವಿ: ದೇವಾಲಯದ ನಂದಿ ಕಂಬದ ಮುಂಭಾಗ ಬಾಳೆ ಎಲೆಯಲ್ಲಿ ಅಕ್ಕಿ ಇಟ್ಟು ಒಂದೇ ಒಂದು ದೀಪವನ್ನು ಬೆಳಗುವುದು ಮಾತ್ರ ಶಾಸ್ತ್ರವಾಗಿದು,ª ದೇವಾಲಯದ ಆಡಳಿತ ಈ ನಿಟ್ಟಿನತ್ತ ಲಕ್ಷ್ಯ ವಹಿಸಬೇಕಿದೆ ಎಂದರು. ಪಟ್ಟಣದ ಪೊಲೀಸ್ ಇಲಾಖೆ ಅಧಿಕಾರಿ ಡಿವೈಎಸ್‌ಪಿ ಪ್ರಭಾಕರ್ ರಾವ್ ಸಿಂಧೆ, ಸಿಪಿಐ ರಾಜಶೇಖರ್, ಪಿಎಸ್‌ಐ ಅಸ್ಮಿನ್ ತಾಜ್, ಗ್ರಾಮಾಂತರ ಹಾಗೂ ಪೊಲೀಸ್ ಸಿಬ್ಬಂದಿ ಅವಘಡಗಳು ಜರುಗದಂತೆ ಬಿಗಿಬಂದೋಬಸ್ತ್ ಮಾಡಿದ್ದರು.