Advertisement

ಬಡ ಸಾಲಗಾರರ ಪರಿಸ್ಥಿತಿ ಆಯೋಮಯ

02:51 PM Oct 26, 2019 | Suhan S |

ಕುಮಟಾ: ಖಾಸಗಿ ಸಾಲಗಾರರಿಂದ ಸಾಲ ಪಡೆದು ಹೈರಾಣಾದ ಬಡವರನ್ನು ಋಣಮುಕ್ತರನ್ನಾಗಿಸಲು  ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಪಾರ ಕಾಳಜಿಯೊಂದಿಗೆ ಋಣಮುಕ್ತ ಯೋಜನೆ ಜಾರಿಗೆ ತಂದಿತ್ತು. ಆದರೆ ಜನರಿಗೆ ಮಾಹಿತಿ ಕೊರತೆ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ಗೊಂದಲ ಹೆಚ್ಚುತ್ತಿದ್ದು ಸಧ್ಯ ಯೋಜನೆಗೆ ಹೈಕೋರ್ಟ್‌ ತಡೆಯಾಜ್ಞೆಯೂ ಇರುವುದರಿಂದ ಬಡ ಸಾಲಗಾರರ ಪರಿಸ್ಥಿತಿ ಆಯೋಮಯವಾಗಿದೆ.

Advertisement

ಈ ಕಾಯಿದೆಯಂತೆ ಒಂದು ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ.ಗಳಿಗಿಂತ ಅಧಿಕವಿರದ ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗದರು ಖಾಸಗಿ ಲೇವಾದೇವಿದಾರರು ಹಾಗೂ ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಈ ಕಾಯಿದೆಯಡಿ ಸರ್ಕಾರದ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ.

ಆಯಾ ಭಾಗದ ಉಪವಿಭಾಗಾಧಿಕಾರಿಗಳೇ ಈ ಕಾಯಿದೆಯ ಮೇಲುಸ್ತುವಾರಿಗಳಾಗಿದ್ದು, ಅರ್ಹ ಫಲಾನುಭವಿಗಳು ಈ ಕಾಯಿದೆಯನ್ವಯ ಅವರ ಕಚೇರಿಯಲ್ಲಿ ಅಗತ್ಯ ದಾಖಲಾತಿಗಳ ಜೊತೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ತಾಲೂಕಿನ ಜನಸಾಮಾನ್ಯರು ಮಾತ್ರ ಈ ಕಾಯಿದೆ ನಿಯಮ ಹಾಗೂ ಉಪಯೋಗ ತಿಳಿದುಕೊಳ್ಳದೇ ಚಿನ್ನದ ಮೇಲಿನ ಸಾಲಗಳೂ ಮನ್ನಾ ಆಗುತ್ತದೆ ಎಂದು ನಾಮುಂದುತಾಮುಂದು ಎಂದು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈಗಾಗಲೇ 2200ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಅವುಗಳಲ್ಲಿ ಹೆಚ್ಚಾಗಿ ಚಿನ್ನದ ಮೇಲಿನ ಸಾಲದ ಕುರಿತಾದ ಅರ್ಜಿಗಳೇ ಹೆಚ್ಚು. ಅವುಗಳಲ್ಲಿ ಒಂದನ್ನು ಹೊರತುಪಡಿಸಿ ಮಿಕ್ಕೆಲ್ಲಾ ಅರ್ಜಿಗಳೂ ಅರ್ಹವಲ್ಲದ, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ನೊಂದಾಯಿತ ಕೆಲ ಬ್ಯಾಂಕುಗಳಲ್ಲಿ ಮಾಡಿರುವ ಚಿನ್ನದ ಸಾಲದ ಕುರಿತಾಗಿಯೇ ಇದೆ ಎನ್ನಲಾಗಿದೆ. ಜನರಿಗೆ ಕಾಯಿದೆಯ ಬಗ್ಗೆ ಸರಿಯಾದ ಮಾಹಿತಿ ದೊರೆತಿಲ್ಲ ಎನ್ನಲಾಗುತ್ತಿದೆ.

ಕುಮಟಾ ಉಪವಿಭಾಗಾಧಿಕಾರಿ ಕಚೇರಿ ಸೂಚನಾ ಫಲಕದಲ್ಲಿ ಈಗಾಗಲೇ ಕಾಯಿದೆಗೆ ಒಳಪಡಬಹುದಾದ ಫಲಾನುಭವಿಗಳ ಅರ್ಹತೆ ಬಗ್ಗೆ ಸೂಚನೆ ಲಗತ್ತಿಸಲಾಗಿದೆ. ಅದರೊಂದಿಗೆ ಕಾಯಿದೆ ಅನುಸಾರ ಸಾಲಮನ್ನಾ ಆಗಬಲ್ಲ ತಾಲೂಕಿನ ಒಟ್ಟೂ 11 ಲೇವಾದೇವಿ, ಗಿರವಿ ಹಾಗೂ ಹಣಕಾಸು ಸಂಸ್ಥೆಗಳ ಹೆಸರನ್ನೂ ನಮೂದಿಸಲಾಗಿದೆ. ಪಂಚಾಯತ ಮಟ್ಟದಲ್ಲಿಯೂ ಸಹ ಗ್ರಾಮೀಣ ಭಾಗದ ಜನರಿಗೆ ಕಾಯಿದೆಯ ಕುರಿತು ಸೂಕ್ತ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಎಲ್ಲ ಅಂಶಗಳನ್ನು ಒಳಗೊಂಡ ಸೂಚಕಗಳನ್ನು ಕಳುಹಿಸಲಾಗಿದೆ. ಕೆಲ ಎಜೆಂಟರು ಜನರಿಗೆ ತಪ್ಪು ಮಾಹಿತಿ ನೀಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಜನರು ಯಾರ ಮಾತಿಗೂ ಮರುಳಾಗದೆ ಸೂಕ್ತ ಸಲಹೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ಕಾಯಿದೆ ಅನುಷ್ಠಾನಕ್ಕೆ ಹೈಕೋರ್ಟ್‌ ತಡೆಯಾಜ್ಞೆ: ಸರ್ಕಾರ ಋಣಮುಕ್ತ ಕಾಯಿದೆ ಹಾಗೂ ಅದರ ನಿಯಮಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ಕೆಲವು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ  ಈ ಋಣ ಪರಿಹಾರ ಕಾಯ್ದೆ-2018ರ ಕಲಂ 4(ಇ), 5(1)(2) ಮತ್ತು (6)ರ ಅನುಷ್ಠಾನವನ್ನು ಅ.15ರ ವರೆಗೆ ಅಥವಾ ತದನಂತರ ಹೊರಡಬಹುದಾದ ಮುಂದಿನ ಆದೇಶದವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿದೆ.

Advertisement

 

-ಕೆ. ದಿನೇಶ ಗಾಂವ್ಕರ

Advertisement

Udayavani is now on Telegram. Click here to join our channel and stay updated with the latest news.

Next