Advertisement

Karnataka ಬಿಜೆಪಿಯನ್ನು ಟಾರ್ಚ್‌ ಹಿಡಿದು ಹುಡುಕುವ ಪರಿಸ್ಥಿತಿ:ಹರೀಶ್‌ ಕುಮಾರ್‌

12:03 AM Sep 03, 2023 | Team Udayavani |

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಟಾರ್ಚ್‌ ಹಿಡಿದು ಹುಡುಕುವ ಪರಿಸ್ಥಿತಿ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳುತ್ತಿದ್ದರು, ಈಗ ಬಿಜೆಪಿ ಅದೇ ಸ್ಥಿತಿ ಎದುರಿಸುತ್ತಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Advertisement

ಹೊಸ ಸರಕಾರ ಬಂದು 100 ದಿನ ಕಳೆದರೂ ವಿಪಕ್ಷ ನಾಯಕರ ನೇಮಕ ಬಿಜೆಪಿಗೆ ಸಾಧ್ಯವಾಗಿಲ್ಲ, ನೂತನ ರಾಜ್ಯಾಧ್ಯಕ್ಷರ ನೇಮಕವೂ ಆಗಿಲ್ಲ. ರಾಜ್ಯದ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿ ಗಣನೆಗೇ ತೆಗೆದುಕೊಳ್ಳುವುದಿಲ್ಲ, ಇಸ್ರೋಗೆ ಪ್ರಧಾನಿ ಭೇಟಿ ವೇಳೆ ಬೇಲಿಯಾಚೆ ನಿಂತು ಕೈ ಬೀಸಿದ ನಾಯಕರನ್ನು ನೋಡಿದಾಗ ಅದು ವೇದ್ಯವಾಗುತ್ತದೆ ಎಂದರು.

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ಗ್ಯಾರಂಟಿಗಳನ್ನು ವಿರೋಧಿಸಿದ್ದಲ್ಲದೆ ಅದರಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದ ಬಿಜೆಪಿ ಈಗ ಮಧ್ಯಪ್ರದೇಶ, ಛತ್ತೀಸ್‌ಗಢ ಮುಂತಾದ ರಾಜ್ಯಗಳ ಚುನಾವಣೆಗೆ ಉಚಿತ ಯೋಜನೆಗಳನ್ನು ಘೋಷಿಸಿರುವುದು ಯಾಕಾಗಿ ಎಂದು ಪ್ರಶ್ನಿಸಿದರು.

ಅಡುಗೆ ಅನಿಲ ಬೆಲೆಯಲ್ಲಿ 200 ರೂ. ಕಡಿತಗೊಳಿಸಿರುವ ಬಗ್ಗೆ ಗ್ಯಾಸ್‌ ಕಂಪೆನಿಗಳು, ಡೀಲರ್‌ಗಳು ಪ್ರಧಾನಿಯವರ ಫೋಟೋ ಫಲಕವನ್ನು ಅಳವಡಿಸುವಂತೆ ಕೇಂದ್ರ ಸರಕಾರ ಫರ್ಮಾನು ಹೊರಡಿಸಿದೆ. ಇದು ಸರಿಯಲ್ಲ ಎಂದರು. ಲೋಕಸಭೆ, ಪಂಚರಾಜ್ಯ ಚುನಾವಣೆ ಸಮೀಪಿಸುತ್ತಿರುವಂತೆಯೇ ಅಡುಗೆ ಅನಿಲ ದರದಲ್ಲಿ 200 ರೂ. ಇಳಿಕೆ ಮಾಡಿದ್ದು ಸ್ವಾಗತಾರ್ಹ. ಈ ಹಿಂದೆ ಇಂಧನ ಬೆಲೆ ಏರಿಳಿತವಾದಾಗ ಅದು ಕಂಪೆನಿಗಳ ಕೈಯಲ್ಲಿರುವುದಾಗಿ ಪ್ರಧಾನಿ, ಪೆಟ್ರೋಲಿಯಂ ಸಚಿವರು ಹೇಳಿದ್ದರು. ಹಾಗಾದರೆ ಈಗ ಸಿಲಿಂಡರ್‌ ಬೆಲೆಯನ್ನು ಕೇಂದ್ರ ಸರಕಾರ ಕಡಿಮೆ ಮಾಡಿದ್ದು ಹೇಗೆ? ಎಂದು ಹರೀಶ್‌ ಕುಮಾರ್‌ ಪ್ರಶ್ನಿಸಿದರು.

ಮಾಹಿತಿ ಗೊತ್ತಿದ್ದೂ
ಹೇಳದಿದ್ದರೆ ಅಪರಾಧ
ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಪ್ರಕರಣ ಕುರಿತಂತೆ ಪ್ರತಿಕ್ರಿಯಿ ಸಿದ ಅವರು, ಹತ್ಯೆಯ ಮರು ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದೇ ಪಕ್ಷದ ನಿಲುವು. ಹತ್ಯೆ ಆರೋಪಿಗಳ ಬಗ್ಗೆ ತನಗೆ ಮಾಹಿತಿ ಇದೆ ಎನ್ನುವವರು ಗೊತ್ತಿದ್ದೂ ಹೇಳದಿದ್ದರೆ ಅಪರಾಧವಾಗುತ್ತದೆ. ಈ ರೀತಿ ಹೇಳುವ ಬದಲು ಅಂತಹವರು ಸಿಬಿಐ ಮುಂದೆ ಆರೋಪಿಗಳ ಬಗ್ಗೆ ಸಾಕ್ಷ್ಯ ಹೇಳಬಹುದಿತ್ತಲ್ಲ ಎಂದು ಪ್ರಶ್ನಿಸಿದರು. ಹೋರಾಟ ಹೆಸರಿನಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ, ಡಾ| ಹೆಗ್ಗಡೆ ಕುಟುಂಬಕ್ಕೆ ಕಳಂಕ ತರುತ್ತಿರುವುದು ಸರಿಯಲ್ಲ ಎಂದರು.

Advertisement

ಮುಖಂಡರಾದ ಎ.ಸಿ. ಭಂಡಾರಿ, ಅಬ್ದುಲ್‌ ಸಲೀಂ, ಸುರೇಂದ್ರ ಕಂಬಳಿ, ಪುರುಷೋತ್ತಮ ಚಿತ್ರಾಪುರ, ಸುಭಾಷ್‌ ಶೆಟ್ಟಿ ಕೊಳ್ನಾಡು, ನೀರಜ್‌ ಚಂದ್ರಪಾಲ್‌, ಸಲೀಂ ಮುಕ್ಕ, ಲಾರೆನ್ಸ್‌ ಡಿ’ಸೋಜಾ, ಜಯಶೀಲ, ವಿಕಾಸ್‌ ಶೆಟ್ಟಿ, ನಝೀರ್‌ ಬಜಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next