Advertisement
ಸಮುದ್ರದಲ್ಲಿ ಮುಳುಗುತ್ತಿದ್ದ ಬಾರ್ಜ್‌ನಿಂದ ಶನಿವಾರ ಹಾಗೂ ರವಿವಾರ ರಕ್ಷಿಸಲಾದ 27 ಮಂದಿಯ ಪರವಾಗಿ ಜಿಲ್ಲಾಡಳಿತ ನೇತೃತ್ವದಲ್ಲಿ ಧರ್ತಿ ಕಂಪೆನಿಯ ಅಧಿಕಾರಿಗಳ ಉಪಸ್ಥಿತಿಯೊಂದಿಗೆ ಸಭೆ ನಡೆಸಿ ಕಾರ್ಮಿಕರಿಗೆ ಕಂಪೆನಿಯಿಂದ ಯಾವುದೇ ಸಮಸ್ಯೆ, ಸೌಲಭ್ಯಗಳ ಕೊರತೆ ಇದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗಿತ್ತು. ರಕ್ಷಿಸಲಾದ ಕಾರ್ಮಿಕರು ಆಘಾತದಿಂದ ಹೊರಬರಲು ಕಂಪೆನಿ 15 ದಿವಸಗಳ ರಜೆ ಹಾಗೂ ವೇತನ ನೀಡಿ, ರಜೆ ಬಳಿಕ ಅವರಿಗೆ ಪುನಃ ಕೆಲಸ ನೀಡುವುದಾಗಿ ತಿಳಿಸಿತ್ತು. ಆದರೆ, ಕಂಪೆನಿಯ ಖಾಯಂ ನೌಕರರೊಂದಿಗೆ ಗುತ್ತಿಗೆ ಆಧಾರದಲ್ಲೂ ಕಾರ್ಮಿಕರು ಈ ಬಾರ್ಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅವರಿಗೂ ರಜೆ ನೀಡಿ ಮನೆಗೆ ಕಳುಹಿಸಲಾಗಿದೆ. ಆದರೂ ಮುಂದಕ್ಕೆ ಪುನಃ ಕೆಲಸ ಒದಗಿಸುವುದಾಗಿ ತಿಳಿಸಲಾಗಿದ್ದು, ಈ ಬಗ್ಗೆ ಯಾವುದೇ ಲಿಖೀತ ದಾಖಲೆ ನೀಡಿಲ್ಲ. ಈ ಕಾರ್ಮಿಕರಿಗೆ ಇನ್ನಷ್ಟೇ 45 ದಿನಗಳ ವೇತನ ದೊರೆಯಬೇಕಿದೆ.
ಬಾರ್ಜ್‌ನ ಕ್ರೈನ್‌ನಲ್ಲಿ 3 ಜನ, ಅಡುಗೆ ಕೋಣೆಯ ಕೆಲಸಕ್ಕೆ 4 ಜನ ಸೇರಿ ಒಟ್ಟು 27 ಮಂದಿ ಕೆಲಸ ಮಾಡುತ್ತಿದ್ದರು. ಘಟನೆ ಬಳಿಕ ಕಂಪೆನಿ ರಜೆ ನೀಡಲಾಗಿದೆ ಎಂದು ಹೇಳುತ್ತಿದೆಯಾದರೂ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕರಿಗೆ ಯಾವುದೇ ಆಶ್ವಾಸನೆ ದಾಖಲೆ ನೀಡದಿರುವುದರಿಂದ ಅವರ ಜೀವನ ಮುಂದೇನು? ಎಂಬ ಪ್ರಶ್ನೆಯೂ ಮುಂದಿದೆ. ಈ ಹಿಂದೆ ರಕ್ಷಣೆ ಮಾಡಲಾದ ಕಾರ್ಮಿಕರಿಗೆ ಯಾವುದೇ ಮಾಹಿತಿ ನೀಡದೆ ಕಂಪೆನಿ ಮನೆಗೆ ಕಳುಹಿಸಿದ್ದು, ಕೆಲವರು ಸುರತ್ಕಲ್‌ನಲ್ಲಿ ಕೊಠಡಿ ಬಾಡಿಗೆ ಮಾಡಿಕೊಂಡಿದ್ದಾರೆ. ಬಳಿಕ 15-20 ದಿನ ರಜೆಯಲ್ಲಿ ಊರಿಗೆ ಹೋಗಿ, 12 ದಿನಗಳ ಅನಂತರ ವೇತನ ಹಾಕುತ್ತೇವೆ ಎಂದು ಕಂಪೆನಿ ತಿಳಿಸಿದೆ. ಆದರೆ, ರಜಾದಿನಗಳ ಬಳಿಕ ಕಂಪೆನಿ ಕೆಲಸ ನೀಡುವ ಬಗ್ಗೆ ಲಿಖೀತವಾಗಿ ಹೇಳದಿರುವುದರಿಂದ ಕಾರ್ಮಿಕರಲ್ಲೂ ಈ ಸಂಶಯ ಮೂಡುವಂತಾಗಿದೆ. ಗುತ್ತಿಗೆ ಪತ್ರವೇ ಇಲ್ಲ ?
ಬಾರ್ಜ್‌ನಿಂದ ಇತರರನ್ನು ರಕ್ಷಿಸಲು ಸಹಾಯ ಮಾಡಿ ಹೀರೋ ಎನಿಸಿಕೊಂಡಿದ್ದ ಶೋಭಿತ್ ಹೇಳುವಂತೆ, ಕೆಲಸ ಗುತ್ತಿಗೆ ಆಧಾರವಾಗಿದ್ದರೂ ಗುತ್ತಿಗೆಯ ಪತ್ರ ಮಾತ್ರ ಇರಲಿಲ್ಲ. ಏಜೆಂಟ್ ಮೂಲಕ ಕೆಲಸಕ್ಕೆ ಹೋಗಿದ್ದೇವೆ. ಆದರೂ ನಮ್ಮಲ್ಲಿ ಗುತ್ತಿಗೆ ಪತ್ರವೇ ಇಲ್ಲ. ಕೆಲಸ ಮಾಡಿದಕ್ಕೆ ಆಧಾರವೇ ಇಲ್ಲದಂತಾಗಿದೆ. 43 ದಿನಗಳ ಬಳಿಕ ಬಂದಾಗ ನಾವು ಗುತ್ತಿಗೆ ಪತ್ರ ಕೇಳಿದಾಗ ಈ ಕಂಪೆನಿ ಸಿಬಂದಿಯೋರ್ವರು ಗುತ್ತಿಗೆ ಪತ್ರ ನೀಡುವುದಿಲ್ಲ. ವೇತನ ನಿಮಗೆ ಸಮಯಕ್ಕೆ ದೊರೆಯುತ್ತದೆ ಎಂದು ಮಾತ್ರ ಹೇಳಿದ್ದರೆ. 27 ಮಂದಿಯ ಪೈಕಿ ಕೆಲವರು ಕಂಪೆನಿ ಸಿಬಂದಿಗಳಾಗಿದ್ದು, ನಾನೂ ಸೇರಿ
ಸುಮಾರು 10 ಮಂದಿಯ ಕೈಯಲ್ಲಿ ಗುತ್ತಿಗೆ ಪತ್ರವೇ ಇಲ್ಲ. ನನ್ನಂತೆ ಕೆಲವರು ಏಜೆಂಟ್ ಮೂಲಕ ಬಂದಿದ್ದು, ಅವರದ್ದೂ ನಮ್ಮದ್ದೂ ಏಜೆಂಟ್ ಮಾತ್ರ ಬೇರೆ-ಬೇರೆ. ರಜಾದಿನಗಳ ಬಳಿಕ ಕೆಲಸ ಒದಗಿಸುವುದಾಗಿ ಕಂಪೆನಿ ಕಡೆಯವರು ಏಜೆಂಟ್ ಮೂಲಕ ತಿಳಿಸಿದ್ದರಾದರೂ ಲಿಖೀತ ದಾಖಲೆ ನೀಡದಿರು ವುದರಿಂದ ಮುಂದಿನ ಭವಿಷ್ಯ ಏನು ಎಂದು ತಿಳಿಯುತ್ತಿಲ್ಲ. ಬೇರೆ ಹಡಗಿನಲ್ಲಿ ಕೆಲಸ ಹುಡುಕಬೇಕಷ್ಟೇ. ನಾನು ಊರಿನವನೇ ಆಗಿದ್ದು, ನಾನು ಹಡಗಿನ ಕೆಲಸಕ್ಕೆ ಪೂರಕವಾದ ಜಿಪಿ ರೇಟಿಂಗ್ ಕೋರ್ಸ್ ಮಾಡಿದ್ದು, ಇಂಡಿಯನ್ ಸಿಡಿಸಿ ಹೊಂದಿದ್ದೇನೆ. ಇಂಡಿಯನ್ ವಾಚ್ ಕೀಪಿಂಗ್ ಸರ್ಟಿಫಿಕೇಟ್ ಕೂಡ ಹೊಂದಿದ್ದು, ಎಬಿ ಆಗಿದ್ದೇನೆ. ಊರಿನಲ್ಲೇ ಒಂದು ಉತ್ತಮ ಕೆಲಸ ಸಿಕ್ಕಿದರೆ ಒಳ್ಳೆಯದಿತ್ತು ಎನ್ನುತ್ತಾರೆ ಶೋಭಿತ್.
Related Articles
Advertisement