Advertisement

ನಗರದ ನಾಗರಿಕ ಸೇವಾ ಸಂಸ್ಥೆಗಳ ‘ಸರಳ’ಸೂತ್ರ

09:17 AM Aug 23, 2019 | Team Udayavani |

ಬೆಂಗಳೂರು: ನಗರದಲ್ಲಿ ನಾಗರಿಕರಿಗೆ ಸೇವೆ ನೀಡುತ್ತಿರುವ ಬಿಎಂಟಿಸಿ, ಬಿಬಿಎಂಪಿ, ಬಿಡಬ್ಲೂಎಸ್‌ಎಸ್‌ಬಿ, ಬೆಸ್ಕಾಂ ಮತ್ತು ಬಿಡಿಎ ಸಂಸ್ಥೆಗಳು ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತವೆ. ಈ ನಾಗರಿಕ ಸೇವಾ ಸಂಸ್ಥೆಗಳು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಸುತ್ತಿದ್ದು, ಎಲ್ಲೆಡೆ ಮಣ್ಣಿನ ಗಣೇಶನನ್ನು ಪೂಜೆಗೆ ಬಳಸುತ್ತಿವೆ.

Advertisement

ಹತ್ತಾರು ವರ್ಷಗಳಿಂದ ಗಣೇಶ ಹಬ್ಬವನ್ನು ಆಚರಿಸುತ್ತಿರುವ ಈ ಸಂಸ್ಥೆಗಳು ಆಚರಣೆ ಜತೆಗೆ ಸಾರ್ವಜನಿಕರಿಗೆ ಜಾಗೃತಿ ಸಂದೇಶ ನೀಡುತ್ತಿವೆ. ಡಿಪೋ ಹಂತದಲ್ಲಿ ಗಣೇಶನ ಹಬ್ಬ ಆಚರಿಸುವ ಬಿಎಂಟಿಸಿ ಸಿಬ್ಬಂದಿ, ಈ ಬಾರಿ ರಾಜ್ಯದಲ್ಲಿ ಉಂಟಾಗಿರುವ ನೆರೆಗೆ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ನೆರವಿಗೆ ಕೈ ಜೋಡಿಸಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಣೇಶ ಹಬ್ಬದ ಆಚರಣೆಗೆ ಸಂಗ್ರಹಿಸಿರುವ ಹಣವನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡಲು ಚರ್ಚೆ ನಡೆಯುತ್ತಿದೆ.

36 ಸಾವಿರ ಸಿಬ್ಬಂದಿಯನ್ನು ಹೊಂದಿರುವ ಬಿಎಂಟಿಸಿ ಪ್ರತಿ ವರ್ಷ ವೈಭವದಿಂದ ಗಣೇಶ ಹಬ್ಬ ಆಚರಿಸುತ್ತದೆ. ಆದರೆ ಈ ಬಾರಿ ಸರಳವಾಗಿ ಆಚರಿಸಲು ಚಿಂತನೆ ನಡೆಸಿದೆ. ಬಿಎಂಟಿಸಿಯಲ್ಲಿ ಒಟ್ಟು 48 ಡಿಪೋಗಳಿದ್ದು, ಪ್ರತಿ ಡಿಪೋದಲ್ಲಿ 500ರಿಂದ 600 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಹಾಗಾಗಿ ಒಂದು ಡಿಪೋದಲ್ಲಿ 70 ಸಾವಿರದಿಂದ ಒಂದು ಲಕ್ಷ ರೂ. ಹಣ ಸಂಗ್ರಹವಾಗುತ್ತದೆ. ಇದರ ಒಟ್ಟು ಮೊತ್ತ 40 ಲಕ್ಷ ರೂ.ಗೆ ತಲುಪಲಿದ್ದು, ಅಷ್ಟೂ ಹಣವನ್ನು ನೆರೆ ಪರಿಹಾರಕ್ಕೆ ನೀಡಿ ಸರಳವಾಗಿ ಮಣ್ಣಿನ ಮೂರ್ತಿ ಇಟ್ಟು ಗಣೇಶ ಹಬ್ಬ ಆಚರಿಸಲು ಡಿಪೋ ಮ್ಯಾನೆಜರ್‌ಗಳ ಹಂತದಲ್ಲಿ ಚಿಂತನೆ ನಡೆಯುತ್ತಿದೆ.

ಉಚಿತ ಮಣ್ಣಿನ ಗಣಪ: ಪಿಒಪಿ ಗಣೇಶ ನಿಷೇಧಿಸಿರುವ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಇಲ್ಲ. ಕಾರಣ, ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಿಬಿಎಂಪಿ ನೌಕರರ ಸಂಘದಿಂದ 300 ಮಣ್ಣಿನ ಗಣೇಶ ಮೂರ್ತಿಗಳನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ. ಈ ಗಣೇಶ ಮೂರ್ತಿಗಳು ಎರಡು ಅಡಿ ಎತ್ತರ ಇರಲಿವೆ. 3,200 ನೌಕರರನ್ನು ಹೊಂದಿರುವ ಬಿಬಿಎಂಪಿ ನೌಕರರ ಸಂಘ, ಸೆ.1ರಂದು ಸರಳವಾಗಿ ಗಣೇಶ ಹಬ್ಬ ಆಚರಿಸಲಿದೆ.

ಜಲಮಂಡಳಿಯಿಂದ ರಕ್ತದಾನ ಶಿಬಿರ:

ಬೆಂಗಳೂರು ಜಲ ಮಂಡಳಿ 10 ವರ್ಷಗಳಿಂದ ಕಚೇರಿ ಆವರಣದಲ್ಲಿ ಗಣೇಶ ಹಬ್ಬ ಆಚರಿಸುತ್ತಾ ಬಂದಿದೆ. ಈ ಬಾರಿ ಹತ್ತನೇ ವರ್ಷವಾಗಿದ್ದು, ಸೆ.3ರಿಂದ 5ರವರೆಗೆ ಹಬ್ಬವನ್ನು ಸಾಮಾಜಿಕ ಹೊಣೆಗಾರಿಕೆಯಿಂದ ಆಚರಿಸಲು ತೀರ್ಮಾನಿಸಿರುವ ಜಮಮಂಡಳಿಯ ಯುವ ನೌಕರರ ವೇದಿಕೆ, ಮೊದಲ ದಿನ ರಕ್ತದಾನ ಶಿಬಿರ ಆಯೋಜಿಸಲು ಸಿದ್ಧತೆ ನಡೆಸಿದೆ. ಸುಮಾರು 2500 ಸದಸ್ಯರನ್ನು ಹೊಂದಿರುವ ಜಲಮಂಡಳಿ, ಪ್ರತಿ ವರ್ಷದಂತೆ ಈ ಬಾರಿಯೂ ಎರಡು ಸಾವಿರ ಸಾರ್ವಜನಿಕರಿಗೆ ಅನ್ನದಾನ ಮಾಡಲಿದೆ.
ಬಿಡಿಎ, ಬೆಸ್ಕಾಂನಿಂದಲೂ ಸರಳ ಆಚರಣೆ:

1970ರಿಂದ ಗಣೇಶ ಹಬ್ಬ ಆಚರಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೌಕರರ ಸಂಘ, ಈ ಬಾರಿ ಕೇಂದ್ರ ಕಚೇರಿ ಆವರಣದಲ್ಲಿ ಸರಳ ಚತುರ್ಥಿ ಆಚರಿಸಲಿದೆ. ಬೆಸ್ಕಾಂ ನೌಕರರ ಒಕ್ಕೂಟ ಕೂಡ ಕೇಂದ್ರ ಕಚೇರಿ ಆವರಣದಲ್ಲಿ ಗಣೇಶ ಕೂರಿಸಲು ಸರಳ ತಯಾರಿ ನಡೆಸಿದೆ.
ಮಣ್ಣಿನ ಗಣೇಶನನ್ನೇ ಬಳಸಲು ಸೂಚನೆ:

ಬೆಂಗಳೂರು ನಗರ ಪೊಲೀಸರು ತಮ್ಮ ಠಾಣೆಗಳಲ್ಲಿ ಸರಳವಾಗಿ ಗಣೇಶ ಚತುರ್ಥಿ ಆಚರಿಸುತ್ತಿದ್ದು, ಕಳೆದ ವರ್ಷದಂತೆ ಈ ಬಾರಿಯೂ ಆಡಂಬರವಿಲ್ಲದೆ ಮಣ್ಣಿನ ಗಣೇಶ ಮೂರ್ತಿ ಕೂರಿಸಲು ಹಿರಿಯ ಅಧಿಕಾರಿಗಳು ಮೌಖೀಕ ಸೂಚನೆ ನೀಡಿದ್ದಾರೆ. ಇನ್ನು ತಮ್ಮ ಕ್ವಾಟ್ರರ್ಸ್‌ಗಳಲ್ಲೂ ಮಣ್ಣಿನ ಗಣೇಶನನ್ನು ಕೂರಿಸಲು ಸೂಚಿಸಿದೆ. ಆಚರಣೆ ವಿಷಯದಲ್ಲಿ ಇಲಾಖೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದೆ.
● ಲೋಕೇಶ್‌ ರಾಮ್‌
Advertisement

Udayavani is now on Telegram. Click here to join our channel and stay updated with the latest news.

Next