Advertisement

ಸ್ವಚ್ಛ ಭಾರತದ ಮೂಕ ರಾಯಭಾರಿ

10:55 AM Jun 20, 2019 | mahesh |

ಸ್ವಚ್ಛ ಭಾರತದ ಕೂಗು ಎಲ್ಲೆಡೆ ಎದ್ದಿರುವುದು ಗೊತ್ತೇ ಇದೆ. ಪ್ರಧಾನಿಯವರೇ ಪೊರಕೆ ಹಿಡಿದು ರಸ್ತೆಗಿಳಿದ ಮೇಲಂತೂ, ಎಲ್ಲರೂ ಸ್ವಚ್ಛತೆಯ ಜಪ ಮಾಡುತ್ತಿದ್ದಾರೆ. ಅವರೆಲ್ಲರ ಮಧ್ಯೆ, ಮೌನವಾಗಿ ಸ್ವತ್ಛತೆಯ ಕೆಲಸ ಮಾಡುತ್ತಿರೋ ವಿಜಯಲಕ್ಷ್ಮಿ ಅವರನ್ನು ಗುರುತಿಸಲೇಬೇಕು.

Advertisement

ವಿಜಯಪುರದ ಶಿಕರಖಾನೆ ಗಾಂಧಿನಗರ ನಿವಾಸಿ ವಿಜಯಲಕ್ಷ್ಮೀ ಅವರಿಗೆ ಹುಟ್ಟಿನಿಂದಲೂ ಮಾತು ಬರುವುದಿಲ್ಲ. 16ನೇ ವಯಸ್ಸಿನಲ್ಲೇ ಕೈಗೆ ಪೊರಕೆ ಹಿಡಿದ ವಿಜಯಲಕ್ಷ್ಮಿ, ಅವತ್ತಿನಿಂದ ಇಂದಿನವರೆಗೂ ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಇವರ ಮೌನ ಕಾಯಕಕ್ಕೆ ಆ ಮಾರುಕಟ್ಟೆ ಸಾಕ್ಷಿಯಾಗುತ್ತದೆ.

ಬೆಳಗಿನ ಜಾವ ಪೊರಕೆ ಮತ್ತು ಬುಟ್ಟಿ ಹಿಡಿದು ಕೆಲಸಕ್ಕೆ ಬರುವ ವಿಜಯಲಕ್ಷ್ಮಿ ಅವರಿಗೆ, ಸಮವಸ್ತ್ರದ ವ್ಯವಸ್ಥೆಯೂ ಇಲ್ಲ. ಪ್ರಾಂಗಣದ ಕಸ ಗುಡಿಸಿ, ಅದನ್ನು ವಿಂಗಡಿಸಿ, ಪ್ಲಾಸ್ಟಿಕ್‌ನಂಥ ಕಸ-ಕಡ್ಡಿಗಳನ್ನು ಬೇರ್ಪಡಿಸಿ, ವಿಲೇವಾರಿ ಮಾಡುವುದು ಇವರ ಕೆಲಸ. ತಂದೆ ಚನ್ನಬಸಪ್ಪ ಅವರ ಜೊತೆ ವಾಸಿಸುತ್ತಿರುವ ವಿಜಯಲಕ್ಷ್ಮಿಯವರ ದುಡಿಮೆ ಕುಟುಂಬಕ್ಕೆ ಮಹತ್ವದ್ದು. ದಿನಗೂಲಿ ನೌಕರರಾಗಿದ್ದರೂ, ಸಂಬಳ ಕೈಗೆ ಬರುವುದು ಮೂರೋ, ಆರೋ ತಿಂಗಳಿಗೊಮ್ಮೆ. ಆದರೂ, ಕೆಲಸದೆಡೆಗೆ ಇವರಿಗಿರುವ ಶ್ರದ್ಧೆಯಲ್ಲಿ ಒಂದಿನಿತೂ ವ್ಯತ್ಯಾಸವಾಗಿಲ್ಲ. ಇವರ ನಿತ್ಯದ ದುಡಿಮೆಯಿಂದ ಮನೆಯಲ್ಲಿ ಇರುವವರಿಗೆ ಅಂಬಲಿ ಸಿಗುತ್ತದೆ. ಈ ಶ್ರಮಜೀವಿಗೆ ಪೌರ ಕಾರ್ಮಿಕರ ಪ್ರಶಸ್ತಿ ಅಥವಾ ಬಿರುದು ಬಾವಲಿಗಳು ಸಿಕ್ಕಿದ್ದಾವಾ ಅಂದಿರಾ? ಇಷ್ಟು ವರ್ಷವಾದರೂ ಅವರ ನೌಕರಿ ಕಾಯಂ ಆಗಿಲ್ಲ ಎನ್ನುವುದೇ ವಿಷಾದದ ಸಂಗತಿ.

“ಮಾತು ಬಾರದಿದ್ದರೇನಂತೆ, ಕುಟುಂಬಕ್ಕಾಗಿ ಆಕೆ ದುಡಿಯುತ್ತಲೇ ಇದ್ದಾಳೆ. ಆಕೆ ಮೂಗಿ ಎಂಬ ಕಾರಣಕ್ಕೆ ಬಹಳಷ್ಟು ಸಲ ಕಿಡಿಗೇಡಿಗಳು ಚುಡಾಯಿಸಿದ್ದರೂ. ಆದರೂ, ಆಕೆ ಒಂದು ದಿನವೂ ಕೆಲಸ ತಪ್ಪಿಸುವುದಿಲ್ಲ. ಬೆಳಗಿನ ಜಾವದಲ್ಲೇ ಎದ್ದು ಕೆಲಸಕ್ಕೆ ಬರುಳ್ತಾಳೆ’
-ವಿಜಯಲಕ್ಷ್ಮಿಯ ಸಹೋದರಿ

ಭುವನೇಶ್ವರಿ ಪ. ನಿಡೋಣಿ

Advertisement
Advertisement

Udayavani is now on Telegram. Click here to join our channel and stay updated with the latest news.

Next