ಚಿಕ್ಕೋಡಿ: ಪ್ರವಾಹದಿಂದಾಗಿ ಮುಳುಗಡೆಯಾದ ಮನೆ ಬಿಟ್ಟು ಹೋದ ಜನೆ ಸಾಕು ಪ್ರಾಣಿಗಳ ಮೂಕ ರೋದನ ಘನಘೋರವಾಗಿದೆ.
ಕಳೆದ ಹಲವು ದಿನಗಳಿಂದ ನದಿಗಳ ಭಾರಿ ಪ್ರವಾಹಕ್ಕೆ ಜನ ದಂಗು ಬಡಿದು ಹೋಗಿದ್ದಾರೆ. ಅಬ್ಬರಿಸುತ್ತಿರುವ ನದಿಗಳ ಪ್ರವಾಹದಿಂದ ರಾತ್ರೋರಾತ್ರಿ ಜನರು ಮನೆ ಬಿಟ್ಟು ಹೊಗಿದ್ದಾರೆ. ಆದರೆ ಮೂಕ ಪ್ರಾಣಿಗಳು ಮಾತ್ರ ಮನೆ ಮೇಲೆಯೋ ಅಥವಾ ಎತ್ತರ ಪ್ರದೇಶಗಳಲ್ಲಿ ವಾಸ ಮಾಡಿ ಪ್ರಾಣ ಉಳಿಸಿಕೊಂಡು ಮನೆ ಮಾಲೀಕರ ಬರುವಿಕೆಗಾಗಿ ಕಾಯುತ್ತಿರುವ ದೃಶ್ಯ ಹೃದಯ ಕರಗುವಂತಿದೆ.
ಚಿಕ್ಕೋಡಿ ಉಪವಿಭಾಗದ ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ, ಕಾಗವಾಡ ಮತ್ತು ಅಥಣಿ ತಾಲೂಕಿನ 73 ಹಳ್ಳಿಗಳು ಕೃಷ್ಣಾ, ವೇದಗಂಗಾ,ದೂಧಗಂಗಾ ಮತ್ತು ಪಂಚಗಂಗಾ ನದಿ ನೀರಿನ ಪ್ರವಾಹದಲ್ಲಿ ನಡುಗಡ್ಡೆಗಳಾಗಿವೆ. ಪ್ರವಾಹಕ್ಕೆ ಸಿಲುಕಿದ ಗ್ರಾಮಗಳ ಜನರು ಈಜಿಯೋ, ದೋಣಿ ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ದಡ ಸೇರಿದ್ದಾರೆ. ಆದರೆ ಉಪವಿಭಾಗದಲ್ಲಿ ಅದೇಷ್ಟೋ ಮೂಕ ಪ್ರಾಣಿಗಳು ನದಿ ನೀರಿನ ಸೆಳೆತಕ್ಕೆ ಸಿಕ್ಕು ಪ್ರಾಣ ಕಳೆದುಕೊಂಡಿವೆ. ಮತ್ತೆ ಕೆಲವು ಎತ್ತರದ ಪ್ರದೇಶಗಳಲ್ಲಿ, ಗಿಡ ಮರಗಳಲ್ಲಿ ಆಶ್ರಯ ಪಡೆದು ಪ್ರಾಣ ಉಳಿವಿಗಾಗಿ ಹರಸಾಹಸ ಪಡುತ್ತಿರುವುದು ಮನ ಕಲಕುತ್ತಿದೆ.
ತಾಲೂಕಿನ ಕಲ್ಲೋಳ ಗ್ರಾಮ ಕೃಷ್ಣಾ ನದಿ ನೀರಿನ ಪ್ರವಾಹಕ್ಕೆ ಸಿಕ್ಕು ಸಂಪೂರ್ಣ ಮುಳುಗಿ ಹೋಗಿದೆ. ಈ ಗ್ರಾಮದ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಆಶ್ರಯ ಪಡೆದಿರುವ ನಾಯಿಗಳ ಸ್ಥಿತಿ ಚಿಂತಾಜನಕವಾಗಿದೆ. ಒಂದು ಕಡೆ ನೆರೆಯಿಂದ ಮನೆ ಮಾಲೀಕರು ಮನೆ ಬಿಟ್ಟು ಹೋಗಿದ್ದಾರೆ. ಇನ್ನೋಂದು ಕಡೆ ಅವರೆಡೆಗೆ ಹೋಗಬೇಕೆಂದರೆ ಸಾಗರದ ಹಾಗೆ ನೀರು ಹರಿಯುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಏನೂ ತೋಚದೇ ಮನೆ ಮಾಳಿಗೆ ಮೇಲೆ ನಾಯಿಯೊಂದು ಮೌನವಾಗಿ ಮಲಗಿರುವುದು ನೋಡಿದರೆ ಎಂತವರ ಹೃದಯ ಕೂಡಾ ಮರುಗದೇ ಇರದು.
ಕಲ್ಲೋಳ ಗ್ರಾಮದ ನಾಲ್ಕೈದು ಯುವಕರು ಈಜಿಕೊಂಡು ಗ್ರಾಮದ ಮನೆ ಮೇಲೆ ಆಶ್ರಯ ಪಡೆದಿರುವ ನಾಯಿಗಳಿಗೆ ಆಹಾರ ಹಾಕಿ ಬಂದಿದ್ದಾರೆ. ಆದರೆ ಮನೆ ಮಾಲಿಕರಿಲ್ಲದ ನಾಯಿಗಳು ಅಹಾರ ಸೇವಿಸುತ್ತಿಲ್ಲ ಎಂದು ಯುವಕ ಮಹೇಶ ಕಮತೆ ಹೇಳುತ್ತಾರೆ. ಇದು ಕಲ್ಲೋಳ ಗ್ರಾಮದ ಪರಿಸ್ಥಿತಿಯಲ್ಲ ಕೃಷ್ಣಾ ನದಿ ಪ್ರವಾಹಕ್ಕೆ ನಲುಗಿದ ಎಲ್ಲ ಗ್ರಾಮಗಳಲ್ಲಿ ಮೂಕ ಪ್ರಾಣಿಗಳ ರೋದನ ಇದೆ ರೀತಿ ಇದೆ. ಪ್ರವಾಹ ಕಡಿಮೆಯಾದಾಗ ಮಾತ್ರ ಶ್ವಾನಗಳು ಆಹಾರ ಸೇವಿಸಬಹುದು ಎನ್ನುತ್ತಾರೆ ಮಹೇಶ.
•ಮಹಾದೇವ ಪೂಜೇರಿ