Advertisement
ಎನ್‌ಐಟಿಕೆಯ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಜಿಲ್ಲಾಡಳಿತ ಹಾಗೂ ಪೊಲೀಸರ ಬಿಗಿಯಾದ ಭದ್ರತೆಯ ಕಾರಣದಿಂದ ಎಲ್ಲೆಡೆಯೂ ನೀರವ ಮೌನ. ಪೊಲೀಸ್ ಪಹರೆ, ಬ್ಯಾರಿಕೇಡ್‌ಗಳು ಮಾತ್ರ ಕಾಣಿಸುತ್ತಿತ್ತು!
Related Articles
ಮತ ಎಣಿಕೆ ಪ್ರಧಾನ ದ್ವಾರದ ಇಕ್ಕೆಲಗಳಲ್ಲಿಯೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಹೆದ್ದಾರಿಯುದ್ದಕ್ಕೂ ಸುಮಾರು 200 ಮೀಟರ್‌ವರೆಗೆ ತಗಡು ಶೀಟುಗಳನ್ನು ಹಾಕಿ ತಡೆ ಹಾಕಲಾಗಿತ್ತು. ಪ್ರವೇಶ ದ್ವಾರದ ಎದುರಲ್ಲೇ 3 ಕಡೆಗಳಲ್ಲಿ ಮೆಟಲ್ ಡಿಟೆಕ್ಟರ್ ಹಾಕಲಾಗಿದ್ದು, ಅಲ್ಲಿ ತಪಾಸಣೆ ನಡೆಸಿ ಪ್ರವೇಶ ದ್ವಾರದ ಮೂಲಕ ಒಳಗೆ ಬಿಡಲಾಗಿತ್ತು. ಮತ ಎಣಿಕೆ ಕೇಂದ್ರದ ಎಡ ಮತ್ತು ಬಲಬದಿಯಲ್ಲಿರುವ ಸರ್ವಿಸ್ ರಸ್ತೆಗಳ ಉದ್ದಕ್ಕೂ ತಡೆಬೇಲಿ ಹಾಕಲಾಗಿತ್ತು. ಮತ ಎಣಿಕೆ ನಡೆಯುವ ಎನ್‌ಐಟಿಕೆ ಕ್ಯಾಂಪಸ್‌ನ ಒಳಗೂ ಅಲ್ಲಲ್ಲಿ ತಡಬೇಲಿ ಹಾಕಿ ಪೊಲೀಸ್ ನಿಯೋಜಿಸಲಾಗಿತ್ತು. ಮತ ಎಣಿಕೆ ಕೇಂದ್ರಕ್ಕಿಂತ ಸುಮಾರು 500ಮೀಟರ್ ದೂರಕ್ಕೆ ತಗಡು ಶೀಟು ಹಾಕಿ, ತಡೆ ಬೇಲಿಯನ್ನು ಹಾಕಲಾಗಿತ್ತು.
Advertisement
ನಿರ್ಬಂಧವಿದ್ದರೂ, ಘನ ವಾಹನಕ್ಕೆ ರಾಜ ಮಾರ್ಗ!ಮತ ಎಣಿಕೆ ಕೇಂದ್ರವೇ ಈ ಬಾರಿ ಹೆಚ್ಚು ಚರ್ಚೆಗೆ ಕಾರಣವಾಯಿತು. ಸುರತ್ಕಲ್‌ನ ಎನ್‌ಐಟಿಕೆ ಕೇಂದ್ರವನ್ನು ಮತ ಎಣಿಕೆ ಕೇಂದ್ರವೆಂದು ಹೇಳುವಾಗಲೇ ಹೆದ್ದಾರಿ ಬಂದ್ ಸಹಿತ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಹೆವಿ ವೆಹಿಕಲ್ ಪ್ರವೇಶಕ್ಕೆ ಪರ್ಯಾಯ ಮಾರ್ಗಗಳನ್ನು ತಿಳಿಸಲಾಗಿತ್ತು. ಕೇವಲ ಬಸ್, ಅನುಮತಿ ಇರುವ ವಾಹನಗಳಿಗೆ ಮಾತ್ರ ಎನ್‌ಐಟಿಕೆ ಮುಂಭಾಗ ಸಂಚಾರಕ್ಕೆ ಅವಕಾಶ ಎಂದು ಹೇಳಲಾಗಿತ್ತು. ಆದರೆ ಗುರುವಾರ ನಡೆದದ್ದೇ ಬೇರೆ. ಹೆದ್ದಾರಿಯಲ್ಲಿ ಬಸ್‌ಗಳ ಜತೆಗೆ, ಎಲ್ಲ ಘನ ವಾಹನಗಳೇ ಸಂಚರಿಸುತ್ತಿದ್ದವು. ಪೊಲೀಸ್ ತಪಾಸಣೆ/ಭದ್ರತೆ ಇದ್ದರೂ ಹೆದ್ದಾರಿ ಪೂರ್ಣ ಘನ ವಾಹನಗಳ ಸಂಚಾರ ಎಂದಿನಂತೆ ಇತ್ತು. ಆದರೆ, ಕಾರು, ಬೈಕ್, ರಿಕ್ಷಾಗಳ ಸಂಚಾರಕ್ಕೆ ಮಾತ್ರ ಮತ ಎಣಿಕೆ ಕೇಂದ್ರದ ಮುಂಭಾಗ ಸಂಚಾರಕ್ಕೆ ಅವಕಾಶವಿರಲಿಲ್ಲ. ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಈ ಕ್ರಮ ಆಕ್ಷೇಪಗಳಿಗೆ ಕಾರಣವಾಗಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ದ್ವಿಚಕ್ರ ಹಾಗೂ ಲಘು ವಾಹನಗಳು ತಡಂಬೈಲ್ ಜಂಕ್ಷನ್‌ನಲ್ಲಿ ಸಂಚಾರಿ ಪೊಲೀಸರು ತಡೆಹಿಡಿದು, ಅಡ್ಡ ರಸ್ತೆಯಲ್ಲಿ ಕಳುಹಿಸಿ ಎನ್‌ಐಟಿಕೆ ಲೈಟ್ ಹೌಸ್- ರೆಡ್‌ರಾಕ್ ಕ್ರಾಸ್ ಮೂಲಕ ಚಲಿಸಲು ಸೂಚನೆ ನೀಡುತ್ತಿದ್ದರು. ಅದೇ ರೀತಿ ಉಡುಪಿಯಿಂದ ಮಂಗಳೂರು ಕಡೆಗೆ ಬರುವ ಲಘು ವಾಹನ ಮತ್ತು ದ್ವಿಚಕ್ರ ವಾಹನಗಳು ರಾಷ್ಟ್ರೀಯ ಹೆದ್ದಾರಿ ಚೇಳಾçರು ಕ್ರಾಸ್‌ನಿಂದ ಎಡಕ್ಕೆ ಬಂದು ಮಧ್ಯ ವೃತ್ತ ಮೂಲಕ ಮುಂಚೂರು ಕ್ರಾಸ್‌ನಲ್ಲಿ ಹೆದ್ದಾರಿಗೆ ಸೇರುವಂತೆ ಸೂಚನೆ ನೀಡಿದ್ದರು. ಚುನಾವಣೆ ಕರ್ತವ್ಯ, ತುರ್ತು ಸೇವೆ, ಪಾಸ್‌ಹೊಂದಿದ ವಾಹನಗಳಿಗೆ ಮಾತ್ರ ನಿರ್ಬಂಧದಿಂದ ವಿನಾಯಿತಿ ನೀಡಲಾಗಿತ್ತು. ತಡಂಬೈಲ್ ಕ್ರಾಸ್‌ನಿಂದ ರೆಡ್‌ರಾಕ್ ಕ್ರಾಸ್‌ವರೆಗೆ, ಮುಂಚೂರು ಕ್ರಾಸ್‌ನಿಂದ ಎನ್‌ಐಟಿಕೆವರೆಗೆ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿತ್ತು. ಮೈಕ್ ಅಳವಡಿಸಿದ್ದರೂ ಕೇಳಲು ಕಾರ್ಯಕರ್ತರೇ ಇಲ್ಲ!
ಮತ ಎಣಿಕೆ ಕೇಂದ್ರದ ಹೊರಗಡೆ ಕಾರ್ಯಕರ್ತರಿಗೆ ಅನುಕೂಲವಾಗುವ ನೆಲೆಯಲ್ಲಿ ಮೈಕ್ ವ್ಯವಸ್ಥೆ ಮಾಡಲಾಗಿತ್ತು. ಒಂದೊಂದು ಸುತ್ತಿನ ಮತ ಎಣಿಕೆ ನಡೆಯುತ್ತಿದ್ದಂತೆ ಮೈಕ್ ಮೂಲಕ ಫಲಿತಾಂಶವನ್ನು ಘೋಷಿಸಲಾಗುತ್ತಿತ್ತು. ಇದಕ್ಕಾಗಿ ರಸ್ತೆಯ ಪಕ್ಕದಲ್ಲಿ ನಾಲ್ಕು ಮೈಕ್ ವ್ಯವಸ್ಥೆ ಮಾಡಲಾಗಿತ್ತು. ನಿಜಕ್ಕೂ ಇದು ಜನರಿಗೆ ಫಲಿತಾಂಶ ತಿಳಿಯುವ ಕಾರಣಕ್ಕಾಗಿ ಮೈಕ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಎನ್‌ಐಟಿಕೆ ಮುಂಭಾಗದಲ್ಲಿ 4 ಜನರಿಗಿಂತ ಅಧಿಕ ಜನರನ್ನು ನಿಲ್ಲಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಮೈಕ್ ಫಲಿತಾಂಶ ಯಾರಿಗೆ ಮಾಡಿದ್ದು? ಎಂಬ ಪ್ರಶ್ನೆ ಮೂಡಿತು. ಸುಮಾರು 2 ಕಿ.ಮೀ. ಅಂತರದಲ್ಲಿ ವಾಹನಗಳನ್ನು ತಡೆದ ಪರಿಣಾಮ ಮೈಕ್ ಫಲಿತಾಂಶ ಯಾವುದೇ ಲಾಭ ನೀಡಲಿಲ್ಲ. ಆದರೆ ಎನ್‌ಐಟಿಕೆ ಮುಂಭಾಗದಲ್ಲಿ ಫಲಿತಾಂಶದ ಘೋಷಣೆ ಅಲ್ಲಿ ಭದ್ರತೆಗಿದ್ದ ಪೊಲೀಸರಿಗೆ ಮಾತ್ರ ಕೇಳುವಂತಾಯಿತು! ಮೊಬೈಲ್‌ನಲ್ಲೇ ದೇಶದ ಚರಿತ್ರೆ!
ಮತ ಎಣಿಕೆ ಕೇಂದ್ರದ ವಾಹನ ಹೋಗದಂತೆ ತಂಡಬೈಲು ಮತ್ತು ಚೇಳಾçರುಗಳಲ್ಲಿ ವಾಹನ ತಡೆಹಿಡಿಯಲಾಗಿತ್ತು. ಈ ಎರಡು ಕಡೆಗಳಲ್ಲೂ 30ಕ್ಕೂ ಅಧಿಕ ಪೊಲೀಸರಿದ್ದರು. ಉಳಿದಂತೆ ಮತ ಎಣಿಕೆ ಕೇಂದ್ರದ ಹೊರಗಡೆ ನೇಮಿಸಲಾದ ನೂರಕ್ಕೂ ಅಧಿಕ ಪೊಲೀಸರು ಪಕ್ಷದ ಕಾರ್ಯಕರ್ತರ ಪ್ರವೇಶಕ್ಕೆ ಅವಕಾಶ ನೀಡದ ಕಾರಣ ಬಹಳಷ್ಟು ಆರಾಮವಾಗಿದ್ದರು. ಹೀಗಾಗಿ ಭದ್ರತೆಗಿದ್ದ ಪೊಲೀಸರು ಬಸ್‌ತಂಗುದಾಣ, ಪೊಲೀಸ್ ವಾಹನದಲ್ಲಿ ಕುಳಿತು ಮೊಬೈಲ್ ಮೂಲಕ ದೇಶದ ಫಲಿತಾಂಶ ವೀಕ್ಷಿಸುತ್ತಿದ್ದರು. ಟೋಲ್ ವಹಿವಾಟು ಕಡಿಮೆ; ರಿಸಲ್ಟ್ ಮೇಲೆ ಕಣ್ಣು
ಎನ್‌ಐಟಿಕೆ ಎದುರಿನ ಹೆದ್ದಾರಿಯಲ್ಲಿ ವಾಹನಗಳ ಓಡಾಟವನ್ನು ಸೀಮಿತಗೊಳಿಸಿದ ಕಾರಣ ಎನ್‌ಐಟಿಕೆ ಸಮೀಪವಿರುವ ಟೋಲ್‌ಗೇಟ್‌ಗೂ ವ್ಯವಹಾರ ಶೇ. 60ರಷ್ಟು ಕಡಿಮೆಯಾಗಿತ್ತು. ಆದರೆ, ಘನ ವಾಹನ ಸಂಚಾರದಿಂದ ಸಮಸ್ಯೆ ಇರಲಿಲ್ಲ ಎನ್ನುವುದು ಟೋಲ್‌ಗೇಟ್ ಸಿಬಂದಿ ಅಭಿಪ್ರಾಯ. ಈ ಮಧ್ಯೆ ಟೋಲ್‌ಗೇಟ್‌ನಲ್ಲಿದ್ದ ಉತ್ತರ ಭಾರತದ ಕಾರ್ಮಿಕರು ತಮ್ಮ ವ್ಯಾಪ್ತಿಯಲ್ಲಿ ಆಗಿರುವ ಫಲಿತಾಂಶದ ಬಗ್ಗೆ ಮೊಬೈಲ್ ಮೂಲಕ ನೋಡುತ್ತಿದ್ದರು.