ರಾಮದುರ್ಗ: ಮಲಪ್ರಭಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾದ ಯುವಕನನ್ನು ಪತ್ತೆ ಹಚ್ಚುವಲ್ಲಿ ತಾಲೂಕಾಡಳಿತ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಆರೋಪಿಸಿ ತುರನೂರ ಗ್ರಾಮಸ್ಥರು ಶುಕ್ರವಾರ ಸಂಜೆ ಶಾಸಕ ಮಹಾದೇವಪ್ಪ ಯಾದವಾಡ ಅವರ ನಿವಾಸಕ್ಕೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಬೆಳಗ್ಗೆಯೇ ಅಭಿಲಾಷ ಶ್ರೀಧರ ದೀಪಾಲಿ ಎಂಬ ಯುವಕ ನೀರು ಪಾಲಾಗಿದ್ದು, ಇನ್ನೂವರೆಗೆ ಪತ್ತೆಯಾಗಿಲ್ಲ. ಯುವಕನ ಪತ್ತೆಗೆ ತಾಲೂಕಾಡಳಿತವಾಗಲಿ ಹಾಗೂ ಅಧಿಕಾರಿಗಳಾಗಲಿ ಸರಿಯಾಗಿ ಸ್ಪಂದಿಸುತ್ತಿಲ್ಲ. ನುರಿತ ತಂಡಗಳನ್ನು ಕೆರೆಯಿಸಿ ಯುವಕನ ಪತ್ತೆಗೆ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಂದಿಸಿದ ಶಾಸಕ ಮಹಾದೇವಪ್ಪ ಯಾದವಾಡ, ಈಗಾಗಲೇ ಪತ್ತೆ ಕಾರ್ಯ ನಡೆಸಲಾಗಿದೆ. ನೀರು ಹೆಚ್ಚು ಇರುವುದರಿಂದ ವಿಳಂಬವಾಗಿದೆ. ಪತ್ತೆ ಕಾರ್ಯಕ್ಕೆ ಸಂಬಂಧಿಸಿ ಈಗಾಗಲೇ ತಾಲೂಕಾಡಳಿತ, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಇತರ ಅ ಧಿಕಾರಿಗಳಿಗೆ ಸೂಚಿಸಿದೆ. ಈಗಲೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿ ಕೂಡಲೇ ಪಿ.ಎಸ್.ಐ ಆನಂದ ಡೋಣಿ ಹಾಗೂ ಸಂಬಂಧಿಸಿದ ಅ ಧಿಕಾರಿಗಳನ್ನು ಕರೆಯಿಸಿ ಹೆಚ್ಚಿನ ಸಿಬ್ಬಂದಿ ಕರೆದುಕೊಂಡು ನಾಳೆಯೊಳಗೆ ಪತ್ತೆ ಕಾರ್ಯ ಕೈಗೊಳ್ಳುವಂತೆ ಸೂಚಿಸಿ ನಾಳೆಯೊಳಗೆ ಯುವಕನ ಪತ್ತೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು.
ಏನಾಗಿತ್ತು?: ತುರನೂರ ಗ್ರಾಮದಲ್ಲಿ ನಡೆದ ಜಾತ್ರೆಗೆಂದು ಆಗಮಿಸಿದ್ದ ಯವಕರಿಬ್ಬರು ಮಲಪ್ರಭಾ ನದಿಗೆ ಸ್ನಾನಕ್ಕೆಂದು ತೆರಳಿದಾಗ ನೀರಿನ ಸೆಳವಿಗೆ ಸಿಲುಕಿ ನೀರು ಪಾಲಾದ ಘಟನೆ ಗುರುವಾರ ನಡೆದಿತ್ತು. ಮೂಲತಃ ತುರನೂರಿನವರಾದ ಅಭಿಲಾಷ ಶ್ರೀಧರ ದೀಪಾಲಿ, ಮನಿಕಂಠ ವಸಂತ ದೀಪಾಲಿ ನೀರಿನ ಸೆಳವಿಗೆ ಸಿಲುಕಿದ್ದು, ಮನಿಕಂಠ ಎಂಬವವನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತು