ಚನ್ನಮ್ಮ ಕಿತ್ತೂರು: ತಾಲೂಕಿನ ಖೋದಾನಪುರ ಗ್ರಾಮದಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ಸಮರ್ಪಕ ಪರಿಹಾರ ವಿತರಣೆ ಮಾಡಲ್ಲ. ಆದ್ದರಿಂದ ಈ ಬಗ್ಗೆ ಶೀಘ್ರ ಸಮರ್ಪಕ ಪರಿಹಾರ ವಿತರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಗ್ರಾಮದಲ್ಲಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಪರಿಹಾರಕ್ಕಾಗಿ ಗ್ರಾಪಂಯಲ್ಲಿ ಒಟ್ಟು 304 ಅರ್ಜಿ ಸ್ವೀಕೃತವಾಗಿವೆ. ಈಗಾಗಲೇ ತಾಲೂಕು ಆಡಳಿತ ಇವುಗಳನ್ನು ಪರಿಶೀಲಿಸಿ 125 ಮನೆಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಉಳಿದ ಅರ್ಜಿಗಳಿಗೆ ತಾಲೂಕು ಆಡಳಿತ ಪರಿಹಾರ ನೀಡಿಲ್ಲವೆಂದು ಆರೋಪಿಸಿದ ಗ್ರಾಮಸ್ಥರು ಉಳಿದ ಮನೆಗಳಿಗೂ ಪರಿಹಾರ ನೀಡಬೇಕೆಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂಪೂರ್ಣವಾಗಿ ನಮ್ಮ ಮನೆಗಳು ಬಿದ್ದಿವೆ. ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ಗ್ರಾಪಂಗೆ ಅರ್ಜಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ದನದ ಮನೆ, ವಾಸವಿಲ್ಲದ ಮನೆ, ಸರಕಾರದ ಆಶ್ರಯ ಮನೆಗಳಿಗೆ ಪರಿಹಾರ ನೀಡುವುದಿಲ್ಲವೆಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಆರ್ಥಿಕ ತೊಂದರೆ ಹಾಗೂ ಬಡವರಿರುವ ಕಾರಣ ಮನೆಗಳನ್ನು ಮರು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರಕಾರ ಈ ಕೂಡಲೇ ನಮ್ಮ ಮನೆಗಳಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಆದರೆ ಈ ಕುರಿತು ಹಲವಾರು ಬಾರಿ ಅಧಿ ಕಾರಿಗಳು, ಶಾಸಕರ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಕ್ರಮ ಕೈಗೊಳ್ಳದಿರುವುದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಿತ್ತೂರು ತಹಶೀಲ್ದಾರ್ ಪ್ರವೀಣ ಜೈನ್ ಗ್ರಾಮಸ್ಥರ ಸಮಸ್ಯೆ ಅರಿತು ಇನ್ನೊಮ್ಮೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು. ಈ ವೇಳೆ ತುಕನಗೌಡ ಹೊಸಮನಿ, ಸುರೇಶ ಮಡಿವಾಳರ, ನಿಂಗಪ್ಪ ತಿಗಡಿ, ಬಸನಗೌಡ ಗೌಡರ, ಜಗದೀಶ ತಿಗಡಿ, ಮೀನಾಕ್ಷಿ ಗೌಡರ, ರೇಣವ್ವ ಉಡಕೇರಿ, ಲಲಿತಾ ತಪ್ಪಸಿ, ನಾಗಮ್ಮ ತೋಪ್ಪಿನ ಇದ್ದರು.