Advertisement

ಶೀಘ್ರ ಅಧಿಸೂಚನೆಗೆ ಆಗ್ರಹಿಸಿ ಸಂಸದರ ಮನೆಗೆ ಮುತ್ತಿಗೆ

11:02 PM Feb 23, 2020 | Lakshmi GovindaRaj |

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಮಾಡಿ ಮಹದಾಯಿ ನ್ಯಾಯಮಂಡಳಿ ನೀಡಿರುವ ಆದೇಶವನ್ನು ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸು ವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿರುವುದರಿಂದ ಶೀಘ್ರವೇ ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸುವಂತೆ ಒತ್ತಡ ಹೇರಲು ಆಗ್ರಹಿಸಿ ರಾಜ್ಯದ ಸಂಸದರ ಮನೆಗಳ ಮುಂದೆ ಪ್ರತಿಭಟನೆ ನಡೆಸಲು ಮಹದಾಯಿ ಹೋರಾಟಗಾರರು ನಿರ್ಧರಿಸಿದ್ದಾರೆ.

Advertisement

ಮಹದಾಯಿ ನೀರು ಹಂಚಿಕೆ ಮಾಡಿ ನ್ಯಾಯಾಧಿಕರಣ 2018 ರಲ್ಲಿಯೇ ತೀರ್ಪು ನೀಡಿದ್ದರೂ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದೇ ಇರುವುದರಿಂದ ರಾಜ್ಯ ಸರ್ಕಾರ ಯಾವುದೇ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ರಾಜ್ಯಕ್ಕೆ ವರದಾನವಾಗಿ ಪರಿಣಮಿ ಸಿದೆ. ಆದರೆ, ಈಗಲೂ ಕೇಂದ್ರ ಸರ್ಕಾರ ವಿಳಂಬ ಮಾಡದಂತೆ ಒತ್ತಡ ಹೇರಲು ರಾಜ್ಯದ ಸಂಸದರನ್ನು ಆಗ್ರಹಿಸಿ ಅವರ ಮನೆಗಳ ಮುಂದೆ ಪ್ರತಿಭಟನಾ ದರಣಿ ನಡೆಸಲು ಹೋರಾಟಗಾರರು ನಿರ್ಧರಿಸಿದ್ದಾರೆ.

ಸುಪ್ರೀಂಕೋರ್ಟ್‌ನ ಅಧಿಕೃತ ಆದೇಶ ಇನ್ನೂ ಹೋರಾಟಗಾರರಿಗೆ ದೊರೆಯದಿರುವುದರಿಂದ ಅಧಿಕೃತ ಆದೇಶ ಪ್ರತಿ ಪಡೆದ ನಂತರ ಅದರಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿರುವ ನಿರ್ದೇಶನಗಳ ಆಧಾರದಲ್ಲಿ ರಾಜ್ಯದ ಸಂಸದರು ಹಾಗೂ ರಾಜ್ಯ ಸರ್ಕಾರ ಆದಷ್ಟು ಬೇಗ ಕೇಂದ್ರ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಡಿಸಲು ಒತ್ತಡ ಹೇರುವಂತೆ ಆಗ್ರಹಿಸಲು ನಿರ್ಧರಿಸಿದ್ದಾರೆ.

ಸುಪ್ರೀಂಕೋರ್ಟ್‌ ಆದೇಶಕ್ಕೆ ಗೋವಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿರುವುದರಿಂದ ಅಲ್ಲಿನ ಸರ್ಕಾರ ಸುಪ್ರೀಂ ಕೋರ್ಟ್‌ ಆದೇಶವನ್ನು ಮರು ಪರಿಶೀಲನೆ ಮಾಡಲು ಅರ್ಜಿ ಸಲ್ಲಿಸುವ ಸಾಧ್ಯತೆ ಇರುವುದರಿಂದ, ಕೇಂದ್ರ ಸರ್ಕಾರ ಅದನ್ನೇ ನೆಪ ಮಾಡಿಕೊಂಡು ಮತ್ತೆ ವಿಳಂಬ ನೀತಿ ಅನುಸರಿಸುವ ಸಾಧ್ಯತೆ ಇರುವುದರಿಂದ, ರಾಜ್ಯದ ಸಂಸದರು ಪ್ರಧಾನಿ ಮೇಲೆ ಒತ್ತಡ ಹೇರಿ ಆದಷ್ಟು ಬೇಗ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಸಮಾಲೋಚನೆ?: ಮಹದಾಯಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಈ ಸಂದರ್ಭದಲ್ಲಿ ಗೃಹ ಸಚಿವ ಹಾಗೂ ಮಾಜಿ ಜಲ ಸಂಪನ್ಮೂಲ ಸಚಿವ ಬೊಮ್ಮಾಯಿ ಅವರೂ ಕೇಂದ್ರದಿಂದ ಅಧಿಸೂಚನೆ ಹೊರಡಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಶೀಘ್ರವೇ ದೆಹಲಿಗೆ ತೆರಳಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ರಾಜ್ಯದ ವಕೀಲರ ತಂಡದ ಜೊತೆ ಚರ್ಚಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಹದಾಯಿ ಕುರಿತು ಫೆ.24ರಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದೆ. ಫೆ.26ರಂದು ಮಹದಾಯಿ ವಿಚಾರ ಸಂಬಂಧ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು. ಆದಷ್ಟು ಬೇಗ ಗೆಜೆಟ್‌ ಮಾಡಿ, ಕಾರ್ಯರೂಪಕ್ಕೆ ತರಲಾಗುವುದು. ಮಹದಾಯಿ ಗೆಜೆಟ್‌ ನೋಟಿಫಿಕೇಷನ್‌ಗೆ ಈಗ ಹಸಿರು ನಿಶಾನೆ ದೊರೆತಿದೆ. ತಾಂತ್ರಿಕ ಕಾರಣ ಇದೆ. ಎಲ್ಲವನ್ನೂ ಹೇಳಲು ಆಗುವುದಿಲ್ಲ.
-ರಮೇಶ್‌ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

ಮಹದಾಯಿ ನೀರು ಬಳಕೆ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್‌ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ, ಕೇಂದ್ರ ಸರ್ಕಾರದಿಂದ ಆದಷ್ಟು ಬೇಗ ಅಧಿಸೂಚನೆ ಹೊರಡಿಸಲು ರಾಜ್ಯದ ಸಂಸದರು ಪ್ರಧಾನಿ ಮೇಲೆ ಒತ್ತಡ ಹೇರುವಂತೆ ಅವರ ಮನೆಗಳ ಮುಂದೆ ಪ್ರತಿಭಟನೆ ಮಾಡಲಾಗುವುದು.
-ವಿರೇಶ್‌ ಸೊಬರದ ಮಠ, ಮಹದಾಯಿ ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next