Advertisement

ಬೋರ್‌ವೆಲ್‌ ನೀರು ಪೂರೈಕೆಗೆ ಆಗ್ರಹಿಸಿ ಗ್ರಾ.ಪಂ.ಗೆ ಮುತ್ತಿಗೆ

02:58 PM Feb 24, 2017 | |

ಕಾಪು: ಬೋರ್‌ವೆಲ್‌ನಿಂದ ನೀರೆತ್ತದಂತೆ ಸ್ಥಳೀಯರೋರ್ವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಲನಿಯ ನಿವಾಸಿಗಳು ಗ್ರಾಮ ಪಂಚಾಯತ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಫೆ. 22ರಂದು ಕಟಪಾಡಿಯಲ್ಲಿ ನಡೆದಿದೆ.

Advertisement

ಕಟಪಾಡಿ ಗ್ರಾ. ಪಂ. ವ್ಯಾಪ್ತಿಯ ಜೆ. ಎನ್‌. ನಗರ ಜನತಾ ಕಾಲನಿಗೆ ಕುಡಿಯುವ ನೀರು ಸರಬರಾಜಿಗಾಗಿ ಸ್ಥಳೀಯ ಶಿಕ್ಷಣ ಸಂಸ್ಥೆಯ ಬಳಿಯಲ್ಲಿ ಶಾಸಕರ ನಿಧಿಯ ಅನುದಾನವನ್ನು ಬಳಸಿಕೊಂಡು ಗ್ರಾಮ ಪಂಚಾಯತ್‌ ಬೋರ್‌ವೆಲ್‌ ಹಾಕಿಸಿತ್ತು.ಈ ಬೋರ್‌ವೆಲ್‌ ಬಗ್ಗೆ ಸ್ಥಳೀಯರಾದ ರಾಜು ಮಾಸ್ಟರ್‌ ಎಂಬವರು ತಮ್ಮ ಮನೆ ಬಾವಿಯ ನೀರಿಗೆ ತೊಂದರೆಯಾಗುವ ಭೀತಿಯಿಂದ ಆಕ್ಷೇಪ ವ್ಯಕ್ತ ಪಡಿಸಿದ್ದು, ನೀರೆತ್ತದಂತೆ ಗ್ರಾ. ಪಂ., ಜಿ. ಪಂ. ಮತ್ತು ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆಯ ಹಿನ್ನೆಲೆಯಲ್ಲಿ ಜಿ. ಪಂ. ಅಧ್ಯಕ್ಷರು ನೀರೆತ್ತದಂತೆ ಗ್ರಾ. ಪಂ. ಅಭಿವೃದ್ದಿ ಅಧಿಕಾರಿಗೆ ನಿರ್ದೇಶನ ನೀಡಿದ್ದು, ಈ ಕಾರಣದಿಂದಾಗಿ ನೀರು ಸರಬರಾಜು ಮಾಡಲು ಅಭಿವೃದ್ಧಿ ಅಧಿಕಾರಿ ಹಿಂದೇಟು ಹಾಕಿದ್ದರು.

ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಯ ನಿರ್ಧಾರ ಕಾಲನಿಯ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಬುಧವಾರ 100 ಕ್ಕೂ ಅಧಿಕ ಮಂದಿ ಖಾಲಿ ಕೊಡ, ಬಕೆಟ್‌ಗಳನ್ನು ಹಿಡಿದುಕೊಂಡು ಗ್ರಾ. ಪಂ. ಕಚೇರಿಗೆ ಬಂದಿದ್ದು, ಜೆ. ಎನ್‌. ನಗರಕ್ಕೆ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಧರಣಿ ನಡೆಸಿದರು.

ಸ್ಥಳೀಯರ ಪ್ರತಿಭಟನೆಯ ಬಿಸಿಯನ್ನು ಗಮನಿಸಿದ ಗ್ರಾಮ ಪಂಚಾಯತ್‌ ಆಡಳಿತವು ಆಕೇÒಪ ಸಲ್ಲಿಸಿರುವವರನ್ನು ಮತ್ತು ಪ್ರತಿಭಟನಾಕಾರರನ್ನು ಸೇರಿಸಿ ಕೊಂಡು ಸಂಧಾನಕ್ಕೆ ಯತ್ನಿಸಿದೆ.

ಹಲವು ಷರತ್ತುಗಳೊಂದಿಗೆ ಸಂಧಾನ
ಬೋರ್‌ವೆಲ್‌ನಿಂದ ನೀರು ಬಿಡುವುದ ರಿಂದ ರಾಜು ಮಾಸ್ಟರ್‌ ಅವರ ಮನೆ ಬಾವಿಗೆ ತೊಂದರೆಯಾದರೆ ಅದನ್ನು ಪುನಶ್ಚೇತನಗೊಳಿಸುವುದು, ಬಾವಿ ಬತ್ತಿ ಹೋದರೆ ಬಾವಿಯೊಳಗೆ ಗ್ರಾ. ಪಂ. ವತಿಯಿಂದಲೇ ಬೋರ್‌ವೆಲ್‌ ಕೊರೆದು ಕೊಡುವುದು, ಅವರು ಅಪೇಕ್ಷಿಸಿದಲ್ಲಿ ಯಾವುದೇ ಶುಲ್ಕವಿಲ್ಲದೆ ಬೋರ್‌ವೆಲ್‌ನಿಂದ ಅವರಿಗೂ ನೀರು ಸಂಪರ್ಕ ಕಲ್ಪಿಸುವುದು, ಇಲ್ಲಿನ ಬೋರ್‌ವೆಲ್‌ನಿಂದ ಜೆ. ಎನ್‌. ನಗರ ಮತ್ತು ಕಜಕೋಡೆ ವ್ಯಾಪ್ತಿಗೆ ಮಾತ್ರಾ ನೀರು ಕೊಡುವುದು ಮುಂತಾದ ಷರತ್ತು ಹಾಕಿ ಒಪ್ಪಂದ ಮಾಡಿಕೊಂಡು ಬಳಿಕ, ಅದನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ನಿರ್ಣಯ ಮಾಡುವ ಭರವಸೆ ನೀಡಲಾಯಿತು.

Advertisement

ರಾಜಕೀಯ ಪ್ರವೇಶಕ್ಕೆ ಯತ್ನ 
ಸಮಸ್ಯೆ ತಾತ್ಕಾಲಿಕವಾಗಿ ಬಗೆ ಹರಿಯುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಅವರ ಸಹಿತವಾಗಿ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರು ಗ್ರಾ. ಪಂ. ಗೆ ಪ್ರವೇಶಿಸಿದ್ದು ಇದಕ್ಕೆ ಆಕ್ಷೇಪ ವ್ಯಕ್ತವಾಯಿತು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆಯಿತು.

ಲಿಖೀತ ಭರವಸೆಯ ಬಳಿಕ ಪ್ರತಿಭಟನೆ 
ಕೈ ಬಿಟ್ಟ ಸ್ಥಳೀಯರು

ಆಕ್ಷೇಪಣೆ ಸಲ್ಲಿಸಿದವರು ತಾತ್ಕಾಲಿಕವಾಗಿ ಆಕ್ಷೇಪ ಹಿಂಪಡೆದರೂ ಪ್ರತಿಭಟನಕಾರರು ಲಿಖೀತವಾಗಿ ನೀಡುವಂತೆ ಆಗ್ರಹಿಸಿದ್ದು, ಮುಂದಿನ ಬುಧವಾರದೊಳಗೆ ನೀರು ಸರಬರಾಜು ಮಾಡದಿದ್ದಲ್ಲಿ ಮತ್ತೆ ಗ್ರಾ.ಪಂ.ಗೆ ಮುತ್ತಿಗೆ ಹಾಕುವ ಬೆದರಿಕೆ ಹಾಕಿದ್ದಾರೆ. ಒಂದೊಮ್ಮೆ ಬೋರ್‌ವೆಲ್‌ ಸಮಸ್ಯೆ ಬಗೆಹರಿಯದಿದ್ದರೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಬಗ್ಗೆ ಗ್ರಾ. ಪಂ. ಭರವಸೆ ನೀಡಿದ್ದು, ಈ ಬಗ್ಗೆ ಲಿಖೀತ ಪ್ರತಿ ಪಡೆದು ಪ್ರತಿಭಟನೆ ಕೈಬಿಡಲಾಯಿತು.
 

Advertisement

Udayavani is now on Telegram. Click here to join our channel and stay updated with the latest news.

Next