ಹನುಮಸಾಗರ: ಉದ್ಯೋಗ ಖಾತ್ರಿಯಡಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ಕೂಲಿ ಕಾರ್ಮಿಕರು ಜಿಪಂ ಸದಸ್ಯರ ಮನೆಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಗ್ರಾಮದ ಕೂಲಿ ಕಾರ್ಮಿಕರು ಶನಿವಾರ ಬೆಳಗ್ಗೆ ಎನ್‌ಆರ್‌ಐಜಿ ಯೋಜನೆಯಡಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದರು. ಈ ವೇಳೆ ಕೇವಲ 600 ಜನಕ್ಕೆ ಮಾತ್ರ ಎನ್‌ಆರ್‌ಎಂ ಮಾಡಲಾಗಿದೆ. ಅಂತಹವರಿಗೆ ಮಾತ್ರ ಕೆಲಸ ನೀಡಲಾಗುವುದು, ಉಳಿದವರಿಗೆ ಮುಂದಿನ ಹಂತಗಳಲ್ಲಿ ಕೆಲಸ ನೀಡುತ್ತಾರೆ ಎಂದು ಗ್ರಾಪಂ ತಿಳಿಸಿದಾಗ ಆಕ್ರೋಶಗೊಂಡ ಕೂಲಿ ಕಾರ್ಮಿಕರು ಜಿಪಂ ಸದಸ್ಯರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬಳಿಕ ಜಿಪಂ ಸದಸ್ಯ ಭೀಮಣ್ಣ ಅಗಸಿಮುಂದಿನ, ಕೂಲಿಕಾರ್ಮಿಕರನ್ನು ಗ್ರಾಪಂಗೆ ಕರೆತಂದು ಸಮಾಧಾಪಡಿಸಲು ಹರಸಾಹಸ ಪಡಬೇಕಾಯಿತು. ಈ ವೇಳೆ ಕೂಲಿ ಕಾರ್ಮಿಕರು ಮಾತನಾಡಿ ಎಲ್ಲರ ಬಳಿ ಕೆಲಸ ನೀಡುವುದಾಗಿ ದಾಖಲೆಗಳನ್ನು ಪಡೆದು ಈಗ ಕೇವಲ 600 ಜನರಿಗೆ ಮಾತ್ರ ಕೆಲಸ ನೀಡಲಾಗುವುದು ಎನ್ನುತ್ತಿದ್ದಾರೆ. ಕೆಲಸ ಸಿಗದವರು ಎಲ್ಲಿಗೆ ಹೋಗಬೇಕು? ಮತ್ತು ಒಂದು ವೇಳೆ ಮಳೆಯಾದರೇ ಕೆರೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಕೆರೆ ಕೆಲಸ ನೀಡಲೇಕು ಎಂದು ಪಟ್ಟು ಹಿಡಿದು ಗ್ರಾಪಂ ಆವರಣದಲ್ಲಿ 500ಕ್ಕೂ ಹೆಚ್ಚು ಜನ ಪ್ರತಿಭಟನೆಗೆ ಮುಂದಾದರು.
ಪೊಲೀಸರ ಮಧ್ಯೆ ಪ್ರವೇಶ: ಕೂಲಿ ಕಾರ್ಮಿಕರ ಪ್ರತಿಭಟನೆ ತೀವ್ರಗೊಂಡ ವಿಷಯ ತಿಳಿಯುತ್ತಿದ್ದಂತೆ ಪಿಎಸ್‌ಐ ನಾಗರಾಜ ನೇತೃತ್ವದಲ್ಲಿ ಪೊಲೀಸ್ ಗ್ರಾಪಂಗೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು .
ಬಳಿಕ ಜಿಪಂ ಸದಸ್ಯ ಭೀಮಣ್ಣ ಅಗಸಿಮುಂದಿನ ಮಾತನಾಡಿ, ಪಿಡಿಒ ಬೇಜವಾಬ್ದಾರಿತನದಿಂದ ಸಮಸ್ಯೆಯಾಗಿದೆ. ಪಿಡಿಒ ಅವರ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಲಾಗುವುದು. ಇಂದು ಸರ್ಕಾರಿ ರಜೆ ಇರುವುದರಿಂದ ಈಗ ಏನು ಮಾಡಲು ಸಾಧ್ಯವಿಲ್ಲ ಸೋಮುವಾರ ತಾಪಂ ಹಾಗೂ ಜಿಪಂ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಿ ಪ್ರತಿಯೊಬ್ಬರಿಗೂ ಕೆಲಸ ಸಿಗುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.