ಕಲಬುರಗಿ: ಅಕ್ರಮ ನಾಡಪಿಸ್ತೂಲು ಬಳಕೆ ಹಾಗೂ ಪೂರೈಕೆಗೆ ಸಂಪೂರ್ಣ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲೆಯ ಪೊಲೀಸರು ಭಾನುವಾರ ಹಾಗೂ ಸೋಮವಾರ ಏಕಕಾಲಕ್ಕೆ ವಿವಿಧೆಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ 9 ಜನರನ್ನು ಬಂಧಿಸಿ 20 ನಾಡ ಪಿಸ್ತೂಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಸೋಮವಾರ ಅಫಜಲಪುರ ತಾಲೂಕು ಭೀಮಾ ನದಿ ತೀರದ ದೇವಲಗಾಣಗಾಪುರಕ್ಕೆ ಹೊಂದಿಕೊಂಡಂತಿರುವ ಹೊಳೆ ಭೋಸಗಾ ಗ್ರಾಮದ ಬಳಿ ಕುಖ್ಯಾತ ರೌಡಿ ಚಂದಪ್ಪ ಹರಿಜನ ಸಹಚರ ಅರ್ಜುನನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿದ್ದರಿಂದ ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದ್ದಾರೆ. ಈ ವೇಳೆ ರೌಡಿ ಅರ್ಜುನನ ಕಾಲಿಗೆ ಗುಂಡು ತಗುಲಿದೆ. ಇನ್ನೊಬ್ಟಾತ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಾÂನನ್ನು ಸಹ ಪೊಲೀಸರು ಬಂಧಿಸಿ ಇವರಿಬ್ಬರಿಂದ ಮೂರು ಪಿಸ್ತೂಲುಗಳನ್ನು ವಶಪಡಿಸಿಕೊಂಡಿದ್ದಾರೆ. ಮಲ್ಲಿಕಾರ್ಜುನ ಮೇಲೆ ಕೊಲೆ ಸೇರಿದಂತೆ ಇತರ ಅಪರಾಧ ಪ್ರಕರಣಗಳಿವೆ. ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಕಪಿಲ್‌ದೇವ, ಪಿಎಸ್‌ಐ ಮಹಾಗಾಂವ, ಎಎಸ್‌ಐ ಶಿವಪ್ಪ ಕಮಾಂಡೋ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
ಕಾರ್ಯಾಚರಣೆ, ಆರೋಪಿಗಳನ್ನು ಬಂಧನ ಹಾಗೂ ನಾಡ ಪಿಸ್ತೂಲುಗಳನ್ನು ವಶಪಡಿಸಿಕೊಂಡಿದ್ದನ್ನು ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಸುದ್ದಿಗಾರರಿಗೆ ವಿವರಣೆ ನೀಡಿದರು. ರಾಘವೇಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ನಿಂಗಪ್ಪ ಎಂಬಾತನಿಂದ 2 ನಾಡಪಿಸ್ತೂಲು, 6 ಜೀವಂತ ಗುಂಡುಗಳು, ಸ್ಟೇಷನ್ ಬಜಾರ ಠಾಣಾ ವ್ಯಾಪ್ತಿಯಲ್ಲಿ ಇರ್ಫಾನ್ ಪಟೇಲ್‌ನಿಂದ 3 ನಾಡಪಿಸ್ತೂಲು, 7 ಜೀವಂತ ಗುಂಡುಗಳು, ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯ ರ್ಯಾವನೂರ ಕ್ರಾಸ್ ಹತ್ತಿರ ದರೋಡೆಗೆ ಯತ್ನಿಸಿದ ಸಚಿನ್ ಅಲಿಯಾಸ್ ಮಲ್ಲಿಕಾರ್ಜುನ, ಇಮಾಮ್ ಹಾಗೂ ಮಲ್ಲಣ್ಣ ಅವರಿಂದ 3 ನಾಡಪಿಸ್ತೂಲು, 9 ಜೀವಂತ ಗುಂಡುಗಳು, ನೇಲೋಗಿ ಪೊಲೀಸ್ ಠಾಣೆಯಲ್ಲಿ ಆರೋಪಿ ಶಿವಪ್ಪನಿಂದ 3 ನಾಡಪಿಸ್ತೂಲು, 9 ಜೀವಂತ ಗುಂಡುಗಳು, ಇನ್ನೋರ್ವ ಪ್ರಮುಖ ಆರೋಪಿ ಮಲ್ಲಾÂನಿಂದ 2 ನಾಡಪಿಸ್ತಳು, 6 ಜೀವಂತ ಗುಂಡುಗಳು, ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ 3 ನಾಡಪಿಸ್ತೂಲುಗಳು ಹಾಗೂ 8 ಜೀವಂತ ಗುಂಡುಗಳು ಸೇರಿ ಒಟ್ಟಾರೆ 20 ನಾಡಪಿಸ್ತೂಲುಗಳು, 55 ಜೀವಂತ ಗುಂಡುಗಳನ್ನು ಬಂಧಿತ 9 ಜನರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ವಿವರಿಸಿದರು.
ಮಧ್ಯಪ್ರದೇಶ ಮೂಲದಿಂದ ಸಾಗಾಣಿಕೆ: ಮಧ್ಯಪ್ರದೇಶ ಹಾಗೂ ಬಿಹಾರದಲ್ಲಿ ತಯಾರಾದ ನಾಡಪಿಸ್ತೂಲುಗಳು ಇಲ್ಲಿಗೆ ಸಾಗಾಣಿಕೆಯಾಗುತ್ತಿವೆ ಹಾಗೂ ಒಬ್ಬರಿಂದ ಒಬ್ಬರಿಗೆ ಪೂರೈಕೆಯಾಗುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೇ ಶೀಘ್ರ ಮಧ್ಯಪ್ರದೇಶಕ್ಕೆ ಭೇಟಿ ನೀಡಿ ಈ ನಾಡಪಿಸ್ತೂಲು ದಂಧೆಗೆ ಕಡಿವಾಣ ಹಾಕಲಿದ್ದಾರೆ ಎಂದು ಐಜಿಪಿ ಅಲೋಕಕುಮಾರ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಾಡಪಿಸ್ತೂಲು ದಂಧೆಗೆ ಕಡಿವಾಣ ಹಾಕುವ ಕಾರ್ಯಾಚರಣೆಯಲ್ಲಿ ಈಗಾಗಲೇ 30ಕ್ಕೂ ಅಧಿಕ ನಾಡಪಿಸ್ತೂಲುಗಳು ಜಫ್ತಿಯಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಫ್ತಿಯಾಗಲಿವೆ. ಒಟ್ಟಾರೆ ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು, ಬಳಕೆಗೆ ಇಲಾಖೆ ಇತಿಶ್ರೀ ಹಾಡಲಿದೆ. ಇದಕ್ಕೆ ಇಲಾಖೆ ಸಜ್ಜುಗೊಂಡಿದೆ ಎಂದು ತಿಳಿಸಿದರು.
ಬಹುಮಾನ: ನಾಡಪಿಸ್ತೂಲುಗಳನ್ನು ಕಾರ್ಯಾಚರಣೆ ಅದರಲ್ಲೂ ಕ್ಷೀಪ್ರ ಕಾರ್ಯಾಚರಣೆ ಮೂಲಕ ನಾಡಪಿಸ್ತೂಲು ಬಳಕೆ ಹಾಗೂ ಪೂರೈಕೆದಾರರನ್ನು ಬಂಧಿಸಿರುವ ಎಎಸ್‌ಪಿ ಲೋಕೇಶಕುಮಾರ ಹಾಗೂ ಮತ್ತವರ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಐಜಿಪಿ, ಒಂದು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳ ಸೇವಾ ಪದಕ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಎಸ್‌ಪಿ ಎನ್. ಶಶಿಕುಮಾರ ಹಾಜರಿದ್ದರು.