ರಬಕವಿ-ಬನಹಟ್ಟಿ: ಈ ಬಾರಿ ಅರಿಶಿನಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆಯ ಉಂಟಾಗಿದ್ದು, ಅರಿಶಿನಕ್ಕೆ ಉತ್ತಮ ಬೆಲೆ ಇರುವುದರಿಂದ ಈ ಭಾಗದ ರೈತರು ಅರಿಶಿನ ಬೀಜ ಖರೀದಿಸಲು ಮುಂದಾಗಿದ್ದಾರೆ.
ಈ ಭಾಗಕ್ಕೆ ತಮಿಳುನಾಡಿನ ಸೇಲಂನಿಂದ ಅರಿಶಿನ ಬೀಜಗಳನ್ನು ತರಿಸಿಕೊಳ್ಳಲಾಗುತ್ತದೆ. ಈ ಬಾರಿ ತಮಿಳುನಾಡಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ತಮಿಳುನಾಡಿನ ಸೇಲಂನಲ್ಲಿ ಅರಿಶಿನ ಬೀಜಗಳ ಇಳುವರಿ ಕಡಿಮೆಯಾಗಿದೆ. ಜತೆಗೆ ಅಲ್ಲಿಯ ರೈತರು ಕೂಡಾ ಅರಿಶಿನ ಬೀಜಗಳ ಮಾರಾಟಕ್ಕೆ ಮುಂದಾಗುತ್ತಿಲ್ಲ. ಆದ್ದರಿಂದ ಸೇಲಂನಿಂದ ಬರುವ ಅರಿಸಿನ ಬೀಜಗಳ ಪೂರೈಕೆಯೂ ಕಡಿಮೆಯಾಗಿದೆ. ಅಲ್ಲಿಯ ರೈತರು ಮುಂದಿನ ದಿನಗಳಲ್ಲಿ ಬೀಜಗಳ ಬೆಲೆ ಹೆಚ್ಚಾಗುತ್ತದೆ ಎಂದು ಅವುಗಳನ್ನು ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಆದ್ದರಿಂದ ನಮ್ಮಲ್ಲಿ ಬೀಜಗಳ ಕೊರತೆಯಾಗಿದೆ ಮತ್ತು ಬೆಲೆಗಳಲ್ಲಿ ಕೂಡಾ ಹೆಚ್ಚಾಗಿದೆ. ಕಳೆದ ಸಲ ಒಂದು ಕ್ವಿಂಟಲ್ ಬೀಜಕ್ಕೆ 3500 ರೂ. ಇತ್ತು. ಆದರೆ, ಈ ಬಾರಿ 3900 ರೂ. ಗಳಿಗೆ ಮಾರಾಟವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಂಭವವಿದೆ ಎನ್ನುತ್ತಾರೆ ರೈತ ದೇವರಾಜ ರಾಠಿ.
ಈಗಾಗಲೆ ಒಂದೆರಡು ಉತ್ತಮ ಮಳೆಗಳು ಆಗಿದ್ದು, ನದಿಯಲ್ಲಿ ಬೇಸಿಗೆಯ ಸಂದರ್ಭದಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಿರುವುದರಿಂದ ಅರಿಶಿನ ನಾಟಿಗೆ ಸಜ್ಜಾಗುತ್ತಿದ್ದಾರೆ. ಜಾಗದಾಳ ಗ್ರಾಮದ ಸುತ್ತ ಮುತ್ತಲಿನ ಭಾಗದಲ್ಲಿ ಅಂದಾಜು 100ಕ್ಕೂ ಹೆಚ್ಚು ಲಾರಿಯಷ್ಟು ಅರಿಶಿನ ಬೀಜಗಳು ಮಾರಾಟವಾಗುತ್ತವೆ. ಒಂದು ಲಾರಿಯಲ್ಲಿ 16 ಟನ್ ಬೀಜಗಳು ಬರುತ್ತವೆ.
ಜಗದಾಳ ಗ್ರಾಮಕ್ಕೆ ಅರಿಶಿನ ಬೀಜ ಖರೀದಿಸಲು ರಬಕವಿ ಬನಹಟ್ಟಿ, ಜಮಖಂಡಿ, ಗೋಕಾಕ, ರಾಯಬಾಗ ಮತ್ತು ಅಥಣಿ ತಾಲ್ಲೂಕಿನ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ರೈತರು ಆಗಮಿಸುತ್ತಿದ್ದಾರೆ. ಅರಿಶಿನ ಬೀಜಗಳಲ್ಲಿಯೂ ಕೂಡಾ ಸಾಕಷ್ಟು ಕಲಬೆರೆಕೆಯ ಬೀಜಗಳು ಬರುತ್ತಿರುವುದರಿಂದ ರೈತರಿಗೆ ತೊಂದರೆಯಾಗಿದೆ ಎಂದು ರಾಯಬಾಗ ತಾಲ್ಲೂಕಿನ ರೈತರು ಪತ್ರಿಕೆಗೆ ತಿಳಿಸಿದರು.
ಒಟ್ಟಿನಲ್ಲಿ ಅರಿಶಿನ ಕೃಷಿ ರೈತರಿಗೆ ಪರಿಶ್ರಮದ ಬೆಳೆಯಾಗಿದ್ದರೂ, ಕೋವಿಡ್ ನಿಂದಾಗಿ ಸ್ಥಗಿತಗೊಂಡಿದ್ದ ಮಾರುಕಟ್ಟೆ ಮತ್ತೆ ಚುರುಕುಗೊಂಡಿದೆ. ಮುಂದಿನ ದಿನಗಳಲ್ಲಿ ಲಾಭವಾಗಬಹುದು ಎಂಬ ಭರವಸೆಯೊಂದಿಗೆ ರೈತರು ಅರಿಶಿನ ಬೆಳೆಗೆ ಸಜ್ಜಾಗಿದ್ದಾರೆ.
ಕಿರಣ ಶ್ರೀಶೈಲ ಆಳಗಿ