ಕೋಲಾರ: ಲಾಕ್‌ಡೌನ್ ನಿಯಮಗಳ ಸಡಿಲಿಕೆಯಾಗಿದ್ದರಿಂದ ಜಿಲ್ಲಾ ಕೇಂದ್ರ ಕೋಲಾರದಲ್ಲಿ ಬುಧವಾರ ಹಲವಾರು ವ್ಯಾಪಾರಿಗಳು ಬೆಳಗ್ಗಿಯೇ ಅಂಗಡಿ ತೆರೆಯಲು ಮುಂದಾದರು. ಆದರೆ, ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಮಧ್ಯಾಹ್ನದವರೆಗೂ ಕೆಲವು ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆಯೇ ನಿಂತು ಕಾದು ಪೊಲೀಸ್ ಬಂದೋಬಸ್ತ್ ಕಂಡು ವಾಪಸ್ ಹೋದರು. ಕೆಲವರು ಅರ್ಧ ಬಾಗಿಲು ಅಂಗಡಿ ತೆರೆದು ಸ್ವಚ್ಛತಾ ಕಾರ್ಯ ನಡೆಸಿದರು.
ನಗರದ ಎಂ.ಜಿ.ರಸ್ತೆಯಲ್ಲಿ ಮಧ್ಯಾಹ್ನದ ವೇಳೆಗೆ ಬಹುತೇಕ ಲಾಕ್‌ಡೌನ್ ದೃಶ್ಯವೇ ಕಂಡು ಬಂದಿತು. ಎಂದಿನಂತೆ ಹಣ್ಣು, ಹಾಲು, ತರಕಾರಿ, ದಿನಸಿ ಅಂಗಡಿ, ಹಾರ್ಡ್ ವೇರ್ ಅಂಗಡಿಗಳು ತೆರೆದಿದ್ದು ಕಂಡು ಬಂದಿತು. ಬುಧವಾರದಿಂದ ಪ್ರಭಾತ್ ಚಿತ್ರಮಂದಿರ ಸಮೀಪದಲ್ಲಿ 40ಕ್ಕೂ ಹೆಚ್ಚು ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಗಳ ಪೈಕಿ ಮೂರು 4 ಅಂಗಡಿಗಳನ್ನು ಮಾತ್ರವೇ ತೆರೆಯಲಾಗಿತ್ತು.
ಕೈಗಾರಿಕೆಗಳಿಗೆ ಅನುಮತಿ: ಕೋಲಾರ ನಗರ ಸಭೆ ವ್ಯಾಪ್ತಿಗೊಳಪಡದ ಹೊರ ವಲಯದಲ್ಲಿರುವ ಕೈಗಾರಿಕೆಗಳನ್ನು ತೆರೆಯಲು ಅನುಮತಿ ಸಲಾಗಿದೆ ಈ ಬಗ್ಗೆ ಡಿ.ಸಿ. ನೇತೃತ್ವದಲ್ಲಿ ಸಭೆ ನಡೆದು ಮಾರ್ಗ ಸೂಚಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನರಸಾಪುರ, ವೇಮಗಲ್ ಪ್ರದೇಶದ ಕೈಗಾರಿಕೆ ತೆರೆಯಲು ಮಾಲಿಕರು ಸಿದ್ಧತೆ ನಡೆಸುತ್ತಿದ್ದು, ಒಂದರೆಡು ದಿನಗಳಲ್ಲಿ ತೆರೆಯಲಾಗುತ್ತಿದೆ. ಆಹಾರ ಸಂಸ್ಕರಣೆ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ.
ಹೋಟೆಲ್ – ಸಾರಿಗೆ: ಹಿಂದಿನ ನಿರ್ಧಾರದಂ ತೆಯೇ ಕೆಲವು ಹೋಟೆಲ್‌ಗಳಲ್ಲಿ ಪಾರ್ಸಲ್‌ಗಳಿಗಷ್ಟೇ ಅನುಮತಿಸಲಾಗಿದ್ದು, ಇದೇ ಪದ್ಧತಿ ಬುಧವಾರವೂ ಮುಂದುವರಿಯಿತು. ಸಾರಿಗೆ ಸಂಸ್ಥೆಯ ಮತ್ತು ಖಾಸಗಿ ಬಸ್ ಕಾರು ಆಟೋಗಳಿಗೆ ಅನುಮತಿ ನೀಡಿಲ್ಲ.
ಮುಂಜಾನೆ ಕೆಲ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದರಿಂದ ವರ್ತಕರು ಸಾಮೂಹಿಕವಾಗಿ ಅಂಗಡಿ ತೆರೆಯುವ ಪ್ರಯತ್ನ ಮಾಡಿಲ್ಲ.
●ಎಸ್.ಸಚ್ಚಿದಾನಂದ, ಎಂ.ಜಿ.ರಸ್ತೆ ವರ್ತಕ
ಷರತ್ತು ಮೇರೆಗೆ ಹೊರ ವಲಯದ ಕೈಗಾರಿಕೆ ತೆರೆಯಲು ಅನುಮತಿಸಲಾಗಿದೆ. ಆಹಾರ ಸಂಸ್ಕರಣಾ ಕೈಗಾರಿ ಕೆಗಳು ತೆರೆದಿದ್ದು, ಇನ್ನುಳಿದವು ನಿಯಮಾವಳಿಗಳ ಪ್ರಕಾರ
ತೆರೆಯಲು ಸಿದ್ಧತೆ ನಡೆಯುತ್ತಿದೆ.
●ರವಿಚಂದ್ರ, ಉಪ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.
ಲಾಕ್‌ಡೌನ್ ಸಡಿಲಿಕೆಯಿಂದಾಗಿ ಅಂಗಡಿ ಮುಂಗಟ್ಟು ತೆರೆಯಬಹುದಾಗಿದೆ. ಆದರೂ, ಬುಧವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹಾಗೂ ಡಿ.ಸಿ. ಸತ್ಯಭಾಮ ನೀಡುವ ನಿರ್ದೇಶನಗಳ ಮೇರೆಗೆ ವ್ಯಾಪಾರ ವಹಿವಾಟು ಆರಂಭವಾಗಬಹುದು.
●ಶ್ರೀಕಾಂತ್, ಪೌರಾಯುಕ್ತ, ನಗರಸಭೆ ಕೋಲಾರ.
●ಕೆ.ಎಸ್.ಗಣೇಶ್