Advertisement

ಆದಿ ಉಡುಪಿ ಎಪಿಎಂಸಿಯಲ್ಲಿ ನಿರ್ಮಿಸಿದ ಮಳಿಗೆಗೆ ವ್ಯಾಪಾರಿಗಳಿಲ್ಲ

11:20 PM Nov 02, 2020 | mahesh |

ಉಡುಪಿ: ಬೀದಿ ವ್ಯಾಪಾರ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ನಗರಸಭೆ ಆದಿಉಡುಪಿ ಎಪಿಎಂಸಿಯಲ್ಲಿ 4 ತಿಂಗಳುಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶೆಡ್‌ನ‌ಲ್ಲಿ ವ್ಯಾಪಾರಿಗಳಿಲ್ಲದೆ ಬಿಕೋ ಎನಿಸುತ್ತಿದೆ. ಇದೀಗ ನಗರದ ರಸ್ತೆ ಬದಿಯಲ್ಲಿ ವ್ಯಾಪಾರ ಚಟುವಟಿಕೆ ಮತ್ತೆ ಗರಿಗೆದರಿದೆ.

Advertisement

ನಗರದ ಪ್ರಮುಖ ಬೀದಿಗಳ ಸಿಟಿ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ಬೀದಿ ಬದಿಯ ವ್ಯಾಪಾರ ಪ್ರಾರಂಭವಾಗಿದ್ದು, ಇದರಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಬೆಳಗ್ಗೆ ಹಾಗೂ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಟ್ರಾಫಿಕ್‌ ಜಾಮ್‌ ಎದುರಾಗಿದೆ.

ಬೀದಿ ವ್ಯಾಪಾರಕ್ಕೆ ಬ್ರೇಕ್‌
ಪೌರಾಯುಕ್ತರು ನಗರದ ಬೀದಿ ಬದಿ ವ್ಯಾಪಾರಕ್ಕೆ ನಿಷೇಧ ಹೇರಿದ್ದರು. ನಗರಸಭೆ ಮೊದಲ ಹಂತವಾಗಿ ಆದಿ ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ಬೀದಿಬದಿ ವ್ಯಾಪಾರಸ್ಥರಿಗೆ ಸ್ಥಳಾವ‌ಕಾಶವನ್ನು ಕಲ್ಪಿಸಿತು. ನಗರಸಭೆ ಈ ಆದೇಶಕ್ಕೆ ಕವಡೆ ಕಿಮ್ಮತ್ತು ನೀಡದ ವ್ಯಾಪಾರಿಗಳು ಹಳೆಯ ಪದ್ಧತಿಯನ್ನು ಮುಂದುವರಿಸಿದ್ದಾರೆ.

ನಗರದಿಂದ ದೂರ
ಉಡುಪಿ ನಗರದ ವಿವಿಧ ಭಾಗಗಳಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುವವರು ಅಗತ್ಯವಿರುವ ವಸ್ತುಗಳನ್ನು ಸಮೀಪದ ಬೀದಿ ಬದಿಯ ವ್ಯಾಪಾರಿಗಳಲ್ಲಿ ಖರೀದಿಸುತ್ತಿದ್ದರು. ಈ ನಡುವೆ ಬೀದಿ ಬದಿ ವ್ಯಾಪಾರಕ್ಕೆ ನಿಷೇಧಿಸಿ ಎಪಿಎಂಸಿ ಮಾರುಕಟ್ಟೆಗೆ ಶಿಫ್ಟ್ ಮಾಡಲಾಗಿತ್ತು. ಈ ಸ್ಥಳವು ನಗರದಿಂದ ದೂರ ಇರುವುದರಿಂದ ಜನರು ಆದಿ ಉಡುಪಿಗೆ ಹೋಗಿ ಖರೀದಿಸಲು ಹಿಂದೇಟು ಹಾಕಿದ ಪರಿಣಾಮ ವ್ಯಾಪಾರಿಗಳು ಮತ್ತೆ ಬೀದಿಯಲ್ಲಿ ವ್ಯಾಪಾರ ಪ್ರಾರಂಭಿಸಿದ್ದಾರೆ.

4.50 ಲ.ರೂ. ವೆಚ್ಚದ ಶೆಡ್‌
ಜೂನ್‌ ತಿಂಗಳಿನಲ್ಲಿ ಎಪಿಎಂಸಿಯ 10 ಎಕರೆ ಜಾಗದಲ್ಲಿ ನಗರದ 35 ವಾರ್ಡ್‌ಗಳಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಮಾರಾಟಗಾರರಿಗೆಲ್ಲ ಇಲ್ಲಿ ವ್ಯಾಪಾರ ಮಾಡಲು ಅನುಕೂಲವಾಗುವಂತೆ 4.5 ಲ.ರೂ. ವೆಚ್ಚದಲ್ಲಿ ಶೆಡ್‌ ನಿರ್ಮಿಸಲಾಗಿತ್ತು.

Advertisement

ಮಾರುಕಟ್ಟೆ ಶಿಫ್ಟ್ !
ಕೆಎಸ್‌ಆರ್‌ಟಿಸಿ ಸಮೀಪದ ವಿಶ್ವೇಶ್ವರಯ್ಯ ದಿನವಹಿ ರಖಂ ಮಾರುಕಟ್ಟೆಯನ್ನು ಕೊರೊನಾ ಸಂದರ್ಭದಲ್ಲಿ ಬೀಡಿನಗುಡ್ಡೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಕಳೆದ 3 ತಿಂಗಳಿನಿಂದ ಈ ದಿನವಹಿ ಮಾರುಕಟ್ಟೆ ಆದಿ ಉಡುಪಿ ಎಂಪಿಎಂಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿಶ್ವೇಶ್ವರಯ್ಯ ಮಾರು ಕಟ್ಟೆಯು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ವ್ಯಾಪಾರ, ವಹಿವಾಟು ಕಷ್ಟವಾಗಿತ್ತು. ಇಲ್ಲಿ ವ್ಯಾಪಾರಸ್ಥರಿಗೆ ಶೌಚಾಲಯ, ವಿದ್ಯುತ್‌ ಸಂಪರ್ಕ ಹಾಗೂ ಮಳೆಗಾಲದಲ್ಲಿ ಮಾರುಕಟ್ಟೆ ಒಳಗಡೆ ನಿಲ್ಲಲು ಯಾವುದೇ ವ್ಯವಸ್ಥೆ ಇರಲಿಲ್ಲ.

ನಗರದಲ್ಲಿ ಸ್ಥಳಾವಕಾಶ ನೀಡಿ
ಎಲ್ಲ ಒಂದೇ ಕಡೆ ವ್ಯಾಪಾರ ಮಾಡುವುದಾದರೆ ನಾವು ಸಿದ್ಧರಿದ್ದೇವೆ. ಈ ಹಿಂದೆ ನಗರದ 50 ಬೀದಿ ಬದಿ ವ್ಯಾಪಾರಿಗಳಲ್ಲಿ ಕೆಲವರು ಮಾತ್ರ ಎಪಿಎಂಸಿ ಮಾರುಕಟ್ಟೆಗೆ ಶಿಫ್ಟ್ ಆಗಿದ್ದರು. ಆದರೆ ಅವರಿಗೆ ಅಲ್ಲಿ ವ್ಯಾಪಾರವಾಗದ ಹಿನ್ನೆಲೆಯಲ್ಲಿ ವಾಪಸು ಬಂದಿದ್ದಾರೆ. ಅಧಿಕಾರಿಗಳು ನಗರದ ಹೃದಯ ಭಾಗದಲ್ಲಿ ಜಾಗ ಗುರುತಿಸಿ ಒಂದೇ ಕಡೆ ಮಾರಾಟ ಮಾಡಲು ಅವಕಾಶ ನೀಡಿದರೆ ತುಂಬಾ ಅನುಕೂಲವಾಗುತ್ತಿತ್ತು ಎಂದು ಬೀದಿ ಬದಿ ವ್ಯಾಪಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಆದೇಶ ಮೀರಿದರೆ ಕ್ರಮ
ಕಡ್ಡಾಯವಾಗಿ ಬೀದಿ ವ್ಯಾಪಾರಿಗಳಿಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಹಣ್ಣು ಹಂಪಲು ಮಾರಾಟ ಮಾಡಲು ಆದೇಶಿಸಲಾಗಿದೆ. ಅವರು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದು ಗಮನಕ್ಕೆ ಬಂದಿಲ್ಲ. ಆದೇಶ ಮೀರಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. -ಆನಂದ ಸಿ. ಕಲ್ಲೋಳಿಕರ್‌, ಪೌರಾಯುಕ್ತ, ನಗರಸಭೆ

ನಗರದಲ್ಲೇ ಅವಕಾಶ ಕಲ್ಪಿಸಿ
ಆದಿ ಉಡುಪಿಗೆ ತೆರಳಬೇಕಾದರೆ ಒಂದೆರಡು ಕಿ.ಮೀ. ದೂರ ಹೋಗಬೇಕಾಗುತ್ತಿತ್ತು. ನಗರದೊಳಗೆ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ಗುರುತಿಸಿ, ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ ಸಾರ್ವಜನಿಕರಿಗೆ ತರಕಾರಿ ಖರೀದಿಸಲು ಅನುಕೂಲವಾದೀತು.
-ಸುಪ್ರೀತಾ ರಾವ್‌, ಸ್ಥಳೀಯರು.

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next