ಹೊಸದಿಲ್ಲಿ: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಊಹೆಯಂತೆಯೇ ವಿಪಕ್ಷಗಳಲ್ಲಿ ಬಿರುಕು ಮೂಡಿಸಿದೆ. ಅದಕ್ಕೂ ಹೆಚ್ಚಿಗೆ ಈ ಬಾರಿ ಬಿಹಾರದ ಜೆಡಿಯು ತನ್ನ “ಗತಿ’ ಬದಲಿಸಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಬಿಹಾರದಲ್ಲಿರುವ ಮಹಾಘಟಬಂಧನ್ ಮುರಿದು ಬಿದ್ದರೂ ಬೀಳಬಹುದು ಎಂಬ ರಾಜಕೀಯ ವಿಶ್ಲೇಷಣೆಗೂ ನಾಂದಿ ಹಾಡಿದೆ.
Advertisement
ಎರಡು ತಿಂಗಳ ಹಿಂದೆಯೇ ಪ್ರತಿಪಕ್ಷಗಳ ಕಡೆಯಿಂದ ರಾಷ್ಟ್ರಪತಿ ಚುನಾವಣೆಗಾಗಿ ಭರ್ಜರಿ ತಯಾರಿ ನಡೆದಿತ್ತು. ಇದರ ನೇತೃತ್ವ ವಹಿಸಿದ್ದವರೂ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರೇ. ಬಹಳ ಹಿಂದೆಯೇ ದಿಲ್ಲಿಗೆ ಬಂದಿದ್ದ ನಿತೀಶ್‌ಕುಮಾರ್, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ, ಎನ್‌ಡಿಎ ಮೈತ್ರಿಕೂಟಕ್ಕೆ ಪ್ರತಿಯಾಗಿ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚಿಸಿದ್ದರು. ಇವರು ಬಂದು ಹೋದ ಮೇಲೆ, ಆರ್‌ಜೆಡಿಯ ಲಾಲು, ಎಡಪಕ್ಷಗಳ ಕಡೆಯಿಂದ ಸೀತಾರಾಂ ಯೆಚೂರಿ, ಶರದ್ ಪವಾರ್, ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ನಾಯಕರು ಸೋನಿಯಾ ನಿವಾಸಕ್ಕೆ ಹೋಗಿ ಈ ಬಗ್ಗೆ ಮಾತನಾಡಿದ್ದರು.
Related Articles
Advertisement
ಲಾಲು ಕೈಗೆ ಬೆಂಬಲಇನ್ನು, ನಿತೀಶ್ ನೇತೃತ್ವದ ಜೆಡಿಯು ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಹೇಳಿದ ಬೆನ್ನಲ್ಲೇ, ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ವಿಪಕ್ಷಗಳ ಜತೆಗೇ ನಿಲ್ಲುವುದಾಗಿ ಸ್ಪಷ್ಟವಾಗಿ ಹೇಳಿದೆ. ಗುರುವಾರ ನಡೆಯಲಿರುವ ವಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲವೆಂದೇ ಅದು ಸ್ಪಷ್ಟವಾಗಿ ಹೇಳಿದೆ. ಇಕ್ಕಟ್ಟಿನಲ್ಲಿ ಮಾಯಾವತಿ
ದಲಿತ ವ್ಯಕ್ತಿಯೊಬ್ಬರು ಉನ್ನತ ಹುದ್ದೆಗೆ ಏರುತ್ತಾರೆ ಎಂದರೆ ಅದನ್ನು ವಿರೋಧಿಸಲು ಸಾಧ್ಯವೇ ಎಂದಿದ್ದ ಮಾಯಾವತಿ ಅವರು, ಇದೀಗ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಹೀಗಾಗಿಯೇ ಗುರುವಾರದ ಸಭೆಯ ನಿರ್ಧಾರ ಪರಿಗಣಿಸಿ ಮಾಯಾವತಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ, ಪ್ರಕಾಶ್ ಅಂಬೇಡ್ಕರ್ ಅವರೇ ಕಣಕ್ಕಿಳಿದರೆ, ವಿಪಕ್ಷಗಳ ಸಾಲಿನಲ್ಲೇ ಮಾಯಾ ನಿಲ್ಲಬಹುದು. ಇನ್ನು ಅಖೀಲೇಶ್ ಕೂಡ ಗುರುವಾರದ ಸಭೆಗೆ ಹೋಗುತ್ತಿಲ್ಲ. ಆದರೆ ಎಸ್‌ಪಿ ಪ್ರತಿನಿಧಿಯೊಬ್ಬರು ಹೋಗುತ್ತಿದ್ದಾರೆ. ಇನ್ನು ಮುಲಾಯಂ ಕೋವಿಂದ್ ಹೆಸರು ಘೋಷಣೆ ಮಾಡುವ ಮುನ್ನ ಬೆಂಬಲ ಘೋಷಿಸಿರುವುದು ಕುತೂಹಲ ಕೆರಳಿಸಿದೆ. ಪ್ರಕಾಶ್ ಅಂಬೇಡ್ಕರ್, ಮೀರಾ ಕುಮಾರ್ ಅಭ್ಯರ್ಥಿಗಳು?
ಕಾಂಗ್ರೆಸ್, ಎಡಪಕ್ಷಗಳು, ಮಮತಾ ಬ್ಯಾನರ್ಜಿ, ಲಾಲು ಅವರ ಪಕ್ಷಗಳಷ್ಟೇ ಸದ್ಯಕ್ಕೆ ಕೋವಿಂದ್ ಅವರಿಗೆ ಬೆಂಬಲ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ಉಳಿದ ಚಿಕ್ಕಪುಟ್ಟ ಪಕ್ಷಗಳು ಇನ್ನೂ ನಿರ್ಧರಿಸಿಲ್ಲ. ಈ ಪಕ್ಷಗಳು ಗುರುವಾರದ ಸಭೆಯ ಅನಂತರ ನಿರ್ಧರಿಸುವುದಾಗಿ ಹೇಳಿವೆ. ಆದರೆ ಎಡಪಕ್ಷಗಳು ಬುಧವಾರ, ಡಾ| ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮೊಗ ಪ್ರಕಾಶ್ ಅಂಬೇಡ್ಕರ್ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಕಣಕ್ಕಿಳಿಸಲು ನಿರ್ಧರಿಸಿವೆ ಎಂದು ಹೇಳಲಾಗಿದೆ. ಈ ಬಗ್ಗೆ ಗುರುವಾರದ ಸಭೆಯಲ್ಲಿ ಪ್ರಸ್ತಾವ ಮಂಡಿಸಿ, ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷಗಳ ಬೆಂಬಲ ಪಡೆಯುವ ಚಿಂತನೆಯೂ ಎಡಪಕ್ಷಗಳಿಗಿದೆ. ಈಗಾಗಲೇ ಎಡಪಕ್ಷಗಳೇ ಕಾಂಗ್ರೆಸ್ ನಾಯಕರಾದ ಸುಶೀಲ್‌ಕುಮಾರ್ ಶಿಂಧೆ ಮತ್ತು ಮೀರಾ ಕುಮಾರ್ ಅವರ ಹೆಸರನ್ನು ಪ್ರಸ್ತಾವಿಸಿದ್ದವು. ಈ ಬಗ್ಗೆ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ, ಪ್ರಕಾಶ್ ಅಂಬೇಡ್ಕರ್ ಅವರ ಹೆಸರನ್ನು ಎಡಪಕ್ಷಗಳು ತೇಲಿಬಿಟ್ಟಿವೆ ಎಂದು ಹೇಳಲಾಗಿದೆ. ಆದರೂ, ಸದ್ಯದ ಮಟ್ಟಿಗೆ ಬೆಂಬಲದ ವಿಚಾರದಲ್ಲಿ ಕೋವಿಂದ್ ಅವರು ಭಾರೀ ಮುಂದಿದ್ದು, ವಿಪಕ್ಷದ ಅಭ್ಯರ್ಥಿಗೆ ಶೇ. 25ರಷ್ಟು ಮತ ಸಿಗಬಹುದು ಎಂಬ ಅಂದಾಜಿದೆ.