Advertisement

Guarantee Scheme ಅಡ್ಡ ಪರಿಣಾಮದ ತೀವ್ರತೆ ಜನರಿಗೆ ತಟ್ಟುತ್ತಿದೆ: ಕುಮಾರಸ್ವಾಮಿ ಟೀಕೆ

12:46 PM Sep 11, 2023 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳ ‘ಅಡ್ಡ ಪರಿಣಾಮ’ದ ತೀವ್ರತೆ ಜನರಿಗೆ ತಟ್ಟುತ್ತಿದೆ. ಸರಕಾರಿ ಸೌಲಭ್ಯಗಳ ಹಂಚಿಕೆಯಲ್ಲಿನ ಅಸಮಾನತೆ, ಪಕ್ಷಪಾತವು ಅರಾಜಕತೆ ಸೃಷ್ಟಿಸಿದೆ. ಅವೈಜ್ಞಾನಿಕ, ಅರೆಬೆಂದ ‘ಶಕ್ತಿ’ ಯೋಜನೆಯ ಫಲವಾಗಿ ಇವತ್ತು ಖಾಸಗಿ ಸಂಚಾರ ವ್ಯವಸ್ಥೆ ಬುಡಮೇಲಾಗಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

Advertisement

ಈ ಬಗ್ಗ ಎಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, ಸಾಲಸೋಲ ಮಾಡಿ ಕ್ಯಾಬ್, ಆಟೋ ಓಡಿಸಿಕೊಂಡು ಬದುಕುತ್ತಿದ್ದವರು ಬೀದಿ ಪಾಲಾಗಿದ್ದಾರೆ. ನಿತ್ಯದ ಬದುಕು ಸಾಗಿಸುವುದೇ ದುಸ್ತರ ಎನ್ನುವ ಸ್ಥಿತಿಯಲ್ಲಿ ಅವರಿದ್ದಾರೆ. ಇನ್ನು, ಸರಕಾರಿ ಸಾರಿಗೆಯಷ್ಟೇ ಉತ್ತಮವಾಗಿ ಸೇವೆ ಒದಗಿಸುತ್ತಿರುವ ಖಾಸಗಿ ಬಸ್ ಜಾಲವನ್ನು ಸರಕಾರ ಹಾಳು ಮಾಡಿದೆ. ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತೆ ಮಾಡಿದೆ ಎಂದು ಹೇಳಿದ್ದಾರೆ.

ಈ ಬಂದ್ ನಿಂದ ಸರಕಾರಿ ಸಾರಿಗೆಗೆ ಪರ್ಯಾಯವಾಗಿದ್ದ ಖಾಸಗಿ ಸಾರಿಗೆ ಜಾಲ ಸಂಪೂರ್ಣ ಸ್ಥಗಿತವಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು, ವಿಮಾನ ನಿಲ್ದಾಣಕ್ಕೆ ತೆರಳುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಸಾಗಣೆಯಲ್ಲಿ ವ್ಯತ್ಯಯ ಆಗಿದೆ. ಸರಕಾರವು ಖಾಸಗಿ ಸಾರಿಗೆ ಒಕ್ಕೂಟದವರ ಬೇಡಿಕೆಗಳನ್ನು ಪ್ರತಿಷ್ಠೆ ಪಕ್ಕಕ್ಕಿಟ್ಟು ಮಾನವೀಯತೆಯಿಂದ ಪರಿಶೀಲಿಸಬೇಕು. ಅವರ ಬೇಡಿಕೆಗಳು ಈಡೇರಿಸಲಾಗದ ಅಸಾಧ್ಯ ಡಿಮ್ಯಾಂಡ್ ಗಳಲ್ಲ. ಅವರಿಗೂ ಕುಟುಂಬಗಳಿವೆ, ತಂದೆತಾಯಿ, ಮಕ್ಕಳು ಇರುತ್ತಾರೆ ಎನ್ನುವುದನ್ನು ಸರಕಾರ ಮರೆಯಬಾರದು ಎಂದಿದ್ದಾರೆ.

ಕಾಟಾಚಾರಕ್ಕೆ ಕರೆದು ಮಾತನಾಡುವುದಲ್ಲ. ವಾಸ್ತವತೆಗೆ ತಕ್ಕಂತೆ ಕಷ್ಟದಲ್ಲಿರುವ ಅವರಿಗೆ ನೆರವಾಗಬೇಕು. ನುಡಿದಂತೆಯೇ ನಡೆದು, ‘ಗ್ಯಾರಂಟಿ ಬಾಧಿತರ’ ಬದುಕಿಗೆ ಪರಿಹಾರ ಒದಗಿಸಬೇಕು ಎನ್ನುವುದು ನನ್ನ ಆಗ್ರಹ.ತಕ್ಷಣವೇ ಬಂದ್ ನಿರತರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕರೆದು ಮಾತನಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next