Advertisement
ಮಂಗಳವಾರ ಈ ಕುರಿತು ಮಾತನಾಡಿರುವ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. “ಬಿಜೆಪಿಯ ಬಣ್ಣ ಎಲ್ಲಿ ಹೊರಬೀಳುತ್ತದೋ ಎಂಬ ಭಯದಿಂದ ಅವರು ಅಧಿವೇಶನ ವಿಳಂಬ ಮಾಡುತ್ತಿದ್ದಾರೆ. ಜಿಎಸ್‌ಟಿ, ನೋಟು ಅಮಾನ್ಯ, ರಫೇಲ್ ಡೀಲ್, ಸಚಿವರ ಹಗರಣಗಳ ಕುರಿತು ಪ್ರತಿಪಕ್ಷಗಳು ಪ್ರಶ್ನಿಸಿದರೆ ಎಂಬ ಭೀತಿ ಬಿಜೆಪಿಯನ್ನು ಕಾಡುತ್ತಿದೆ. ಮೋದಿ ಸರಕಾರದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಅತ್ಯಂತ ದೊಡ್ಡ ಹೊಡೆತ ತಿನ್ನುತ್ತಿದೆ ಎಂದು ಆರೋಪಿಸಿದ್ದಾರೆ.
ಮೋದಿ ಹಾಗೂ ಅವರ ಸಂಪುಟವು ಪ್ರಚಾರದಲ್ಲೇ ನಿರತವಾಗಿದ್ದು, “ಪ್ರಚಾರದ ಯಂತ್ರ’ವಾಗಿ ಮಾರ್ಪಾಟಾಗಿದೆ. ಇದರ ಬದಲಿಗೆ ಒಳ್ಳೆಯ ಆಡಳಿತ ನೀಡುವತ್ತ ಗಮನ ಹರಿಸಬೇಕೆಂದು ಜನ ಬಯಸುತ್ತಾರೆ’ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ “ಬ್ರಹ್ಮ’ ಇದ್ದಂತೆ: ಖರ್ಗೆ
ಪ್ರಧಾನಿ ನರೇಂದ್ರ ಮೋದಿ ಅವರು ಸೃಷ್ಟಿಕರ್ತ “ಬ್ರಹ್ಮ’ ಇದ್ದಂತೆ. ಎಲ್ಲವನ್ನೂ ನಿಯಂತ್ರಿಸುತ್ತಿರುವವರು ಅವರೇ. ಚಳಿಗಾಲದ ಅಧಿವೇಶನ ಯಾವಾಗ ನಡೆಸಬೇಕು ಎಂಬುದು ಗೊತ್ತಿರುವುದೂ ಅವರಿಗೆ ಮಾತ್ರ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ. “ನಾನು ಹಲವು ಸಚಿವರು, ಸ್ಪೀಕರ್, ಲೋಕಸಭೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವರಲ್ಲಿ ವಿಚಾರಿಸಿ ನೋಡಿದೆ. ಆದರೆ, ಅಧಿವೇಶನದ ದಿನಾಂಕದ ಬಗ್ಗೆ ಯಾರಿಗೂ ಗೊತ್ತಿಲ್ಲ. ಇದು ಗೊತ್ತಿರುವುದು ಒಬ್ಬ ವ್ಯಕ್ತಿಗೆ ಮಾತ್ರ. ಆ ವ್ಯಕ್ತಿಯನ್ನು ಅವರು ಬ್ರಹ್ಮ ಎನ್ನುತ್ತಾರೆ. ಹಾಗಾಗಿ, ಬ್ರಹ್ಮ ಆದೇಶ ಹೊರಡಿಸುವವರೆಗೂ ನಮಗೆ ಅಧಿವೇಶನದ ದಿನಾಂಕ ಗೊತ್ತಾಗುವುದಿಲ್ಲ’ ಎನ್ನುತ್ತಾ ಆಡಳಿತಾರೂಢ ಪಕ್ಷವನ್ನು ಕುಟುಕಿದ್ದಾರೆ.
Related Articles
ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಅನಂತ್‌ಕುಮಾರ್, “ಯುಪಿಎ ಸರಕಾರ ಕೂಡ ಅಧಿವೇಶನವನ್ನು 2 ಬಾರಿ ವಿಳಂಬ ಮಾಡಿತ್ತು. 2008 ಮತ್ತು 2013ರಲ್ಲಿ ಅಧಿವೇಶನವನ್ನು ತಡವಾಗಿ ನಡೆಸಲಾಗಿತ್ತು. ಕಾಂಗ್ರೆಸ್ ನಾಯಕರು ಮರೆವಿನ ರೋಗದಿಂದ ಬಳಲುತ್ತಿದ್ದಾರೆ. ಗುಜರಾತ್ ಮತ್ತು ಹಿಮಾಚಲದಲ್ಲಿ ಸೋಲುಣ್ಣುವ ಹತಾಶೆಯು ಕಾಂಗ್ರೆಸ್‌ನಿಂದ ಇಂಥ ಆರೋಪಗಳನ್ನು ಮಾಡಿಸುತ್ತಿದೆ’ ಎಂದಿದ್ದಾರೆ. ಜತೆಗೆ, ಡಿಸೆಂಬರ್‌ನಲ್ಲಿ ಅಧಿವೇಶನ ನಡೆಸುತ್ತೇವೆ. ಸದ್ಯದಲ್ಲೇ ಅದರ ದಿನಾಂಕವನ್ನು ಘೋಷಿಸುತ್ತೇವೆ ಎಂದೂ ಸಚಿವರು ತಿಳಿಸಿದ್ದಾರೆ.
Advertisement