ಸೊಗಡು ಎಸ್.ಶಿವಣ್ಣ, ಮಾಜಿ ಸಚಿವರು
ತುಮಕೂರು: ಸೇವಾಕ್ಷೇತ್ರವಾಗಿದ್ದ ರಾಜಕಾರಣ ಇಂದು ವ್ಯಾಪಾರೀಕರಣವಾಗಿದೆ. ಬಂಡವಾಳ ಹಾಕಿ ಬಂಡವಾಳ ತೆಗೆಯುವ ಸ್ಥಿತಿಗೆ ರಾಜಕಾರಣ ಬಂದು ಬಿಟ್ಟಿದೆ. ಜನರೇ ಹಣ ನೀಡಿ ಓಟು ಹಾಕುವ ಕಾಲ ಅಂದು ಇತ್ತು, ಇಂದು ಹಣ ಪಡೆದೇ ಓಟು ಹಾಕುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ತುಮಕೂರು ನಗರ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಮಾಜಿ ಸಚಿವ ಸೊಗಡು ಎಸ್.ಶಿವಣ್ಣ ಅಂದಿನ ತಮ್ಮ ಚುನಾವಣ ದಿನಗಳನ್ನು “ಉದಯವಾಣಿ’ಯೊಂದಿಗೆ ನೆನಪಿಸಿಕೊಂಡಿದ್ದಾರೆ.
ಇಂದಿನ ಚುನಾವಣೆ ಜಾತಿ, ಭ್ರಷ್ಟಾಚಾರದಿಂದ ಕೂಡಿದೆ. ಹಣವಿಲ್ಲದೇ ಚುನಾವಣೆ ನಡೆಸಲು ಸಾಧ್ಯವಿ ಲ್ಲದ ಸ್ಥಿತಿಗೆ ಬಂದಿದೆ. ಬಂಡವಾಳಗಾರರು ಹಣ ಲೂಟಿ ಮಾಡಲು ರಾಜಕಾರಣಕ್ಕೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಈಗ ಎಲೆಕ್ಷನ್ ಅಲ್ಲ ಕಲಕ್ಷನ್ ಆಗಿ ಬಿಟ್ಟಿದೆ. ಭ್ರಷ್ಟರ, ಭ್ರಷ್ಟಾಚಾರದ ಕೂಟವಾಗಿದೆ ಎನ್ನುತ್ತಾರೆ ಮಾಜಿ ಸಚಿವ ಸೊಗಡು ಎಸ್.ಶಿವಣ್ಣ.
1994, 1999, 2004 ಮತ್ತು 2008ರಲ್ಲಿ ನಿರಂತರವಾಗಿ ಗೆಲುವು ಸಾಧಿಸಿರುವ ಶಿವಣ್ಣ ತಮ್ಮ ಪ್ರಚಾರ ವೈಖರಿ ಬಗ್ಗೆ ವಿವರಿಸಿದ್ದು, ನನ್ನ ಪ್ರಚಾರ ಬಹಳ ಸರಳವಾಗಿತ್ತು, ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದೆ. ಯಾವುದೇ ಅಬ್ಬರ ಇಲ್ಲ, ಮನೆಗೆ ಹೋದಾಗ ಜಾತಿ, ಮತ, ಧರ್ಮ ಭೇದವಿಲ್ಲದೇ ಜನರು ಬಹಳ ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ಕೆಲವರು ನಮಗೇ ಚುನಾವಣೆ ಖರ್ಚಿಗಾಗಿ ಎಲೆ, ಅಡಿಕೆಯಲ್ಲಿ ಹಣ ಇಟ್ಟು ನನಗೆ ಕೊಟ್ಟು ಚುನಾವಣೆ ಖರ್ಚಿಗೆ ಇಟ್ಟುಕೊಳ್ಳಿ ಎಂದು ಹೇಳುತ್ತಿದ್ದರು. ಆಗ ಬಹಳ ಸರಳವಾದ ಪ್ರಚಾರ ಇತ್ತು ಈಗಿನ ರೀತಿಯಲ್ಲಿ ಅಬ್ಬರ ಇರಲಿಲ್ಲ.
ನನ್ನ ಮೊದಲ ಚುನಾವಣೆ 1994ರಲ್ಲಿ ಕೇವಲ 80 ಸಾವಿರ ರೂ ಮಾತ್ರ ಖರ್ಚಾಗಿತ್ತು, ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಿದ್ದರು. ಅದರಿಂದ ನಾನು ನಾಲ್ಕು ಬಾರಿ ನಿರಂತರ ಗೆಲುವು ಸಾಧಿಸಲು ಸಾಧ್ಯವಾಗಿತ್ತು.
ಅಂದು ಪಕ್ಷಕ್ಕಾಗಿ ಪ್ರಾಣ ಬಿಡುವ ಕಾರ್ಯಕರ್ತರು ಇದ್ದರು, ಇಂದು ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾರ್ಯಕರ್ತರಿಲ್ಲ, ಅವರು ವರ್ಕರ್ಗಳಾಗಿದ್ದಾರೆ. ಅಂದು ಜನಪ್ರತಿನಿಧಿಯೊಂದಿಗೆ ಮತದಾರರು ಉತ್ತಮ ಸಂಬಂಧ ಹೊಂದಿ ಕೆಲಸ ಮಾಡಲು ಪ್ರೇರೇಪಿಸುತ್ತಿದ್ದರು. ಇಂದು ಮತದಾರರು ಯಾರೂ ಪ್ರಶ್ನೆ ಮಾಡದ ಸ್ಥಿತಿಗೆ ರಾಜಕಾರಣ ಬಂದಿದೆ.
-ಚಿ.ನಿ. ಪುರುಷೋತ್ತಮ್