ಸಾಗರ: ಫಾರ್ಮಾಸಿಸ್ಟ್ ಹುದ್ದೆ ಅತ್ಯಂತ ಕಷ್ಟಕರ. ವೈದ್ಯರು ರೋಗಿಗಳಿಗೆ ಸೂಚಿಸಿದ ಔಷಧ ನೀಡುವಾಗ ಸಣ್ಣ ತಪ್ಪು ಸಹ ಆಗಬಾರದು. ಇದನ್ನು ಗಮನದಲ್ಲಿ ಇರಿಸಿಕೊಂಡು ಫಾರ್ಮಸಿಸ್ಟ್ ಸಲ್ಲಿಸುತ್ತಿರುವ ಸೇವೆ ಗಮನಾರ್ಹವಾದದ್ದು ಎಂದು ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮ.ಸ. ನಂಜುಂಡಸ್ವಾಮಿ ತಿಳಿಸಿದರು.
ನಗರದ ತಾಯಿ-ಮಗು ಆಸ್ಪತ್ರೆಯಲ್ಲಿ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಗಳ ಸಂಘದ ಸಾಗರ ಶಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವೃತ್ತಿ ಸಂದರ್ಭದಲ್ಲಿ ದ್ವೇಷ, ಸೇಡು, ಅಸೂಯೆ ಸಲ್ಲದು. ಇದು ವೃತ್ತಿ ಗೌರವವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ರೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಮ್ಮ ಸೇವೆ ಸಲ್ಲಿಸಿದಾಗ ಜನಪ್ರಿಯತೆ ಸಹ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಫಾರ್ಮಸಿಸ್ಟ್ ಸಂಘದ ಬೇಡಿಕೆ ಸಾಕಷ್ಟು ಇದೆ. ಅದನ್ನು ಸರ್ಕಾರದ ಗಮನಕ್ಕೆ ಸಹ ತರಲಾಗಿದೆ. ಸಂಕಷ್ಟ ಬಂದಾಗ ಪ್ರತಿಭಟನೆ ಅನಿವಾರ್ಯವಾಗುತ್ತದೆ. ವೃತ್ತಿಯ ಜೊತೆಗೆ ಕೌಟುಂಬಿಕ ನೆಮ್ಮದಿಯನ್ನು ಉಳಿಸಿಕೊಳ್ಳುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ವೈ. ಮೋಹನ್, ಫಾರ್ಮಸಿಸ್ಟ್ ದಿನ ಆಚರಣೆ ಮಾಡಿದರೆ ಸಾಲದು. ಅದರ ಮಹತ್ವವನ್ನು ಅರಿತುಕೊಳ್ಳುವಂತೆ ಆಗಬೇಕು. ವೈದ್ಯರು ಮತ್ತು ರೋಗಿಗಳ ನಡುವೆ ಸೇತುವೆಯಾಗಿ ಫಾರ್ಮಸಿಸ್ಟ್ ಕೆಲಸ ಮಾಡುತ್ತಾ ಇರುತ್ತಾರೆ. ಇದರ ಜೊತೆಗೆ ಅನೇಕ ಸಂದರ್ಭದಲ್ಲಿ ರೋಗಿಗಳಿಗೆ ಫಾರ್ಮಸಿಸ್ಟ್ ಆಪ್ತ ಸಮಾಲೋಚಕರಾಗಿ ಸಹ ಕೆಲಸ ಮಾಡುತ್ತಾರೆ. ಔಷ ಧ ಸೇವನೆ ಕುರಿತು ತಿಳುವಳಿಕೆ ನೀಡುವ ಜೊತೆಗೆ ರೋಗಿಗಳ ಮನಸ್ಸು ಗೆಲ್ಲುವ ಕೆಲಸ ಫಾರ್ಮಸಿಸ್ಟ್ ಲಾಗಾಯ್ತಿನಿಂದ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಫಾರ್ಮಸಿಸ್ಟ್ ಎಚ್.ಡಿ. ಇಳಿಗೇರ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ| ಮೋಹನ್ ಕೆ.ಎಸ್., ಶಂಕರ್, ನಿರ್ಮಲ, ಹೇಮಾ, ಅಶ್ವಿನಿ, ಭಾರತಿ ಎಸ್., ಅಹಲ್ಯ, ಶಾಲಿನಿ ಎಸ್. ಇದ್ದರು. ರೇಣುಕಮ್ಮ ಪ್ರಾರ್ಥಿಸಿದರು. ರವಿ ಎ.ಎಸ್. ಸ್ವಾಗತಿಸಿದರು. ಸತೀಶ್ ವಂದಿಸಿದರು. ಪುಷ್ಪಾ ಪಿ.ಎಸ್. ನಿರೂಪಿಸಿದರು.