ಪಿರಿಯಾಪಟ್ಟಣ: ಜನತೆಯ ಆರೋಗ್ಯವನ್ನು ರಕ್ಷಿಸುವಲ್ಲಿ ಖಾಸಗಿ ಆಸ್ಪತ್ರೆಗಳ ಹಾಗೂ ವೈದ್ಯರ ಸೇವೆ ಅಪಾರವಾದುದು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣದ ಬಿ.ಎಂ.ರಸ್ತೆಯ ಉಪ್ಪಾರಗೇರಿ ಬಳಿ ನೂತನವಾಗಿ ಪ್ರಾರಂಭಗೊಂಡಿರುವ ಭಾಗ್ಯಾಸ್ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮನುಷ್ಯನ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಆತ ಆರೋಗ್ಯ ರಕ್ಷಣೆಗಾಗಿ ಆಸ್ಪತ್ರೆಯ ಮೊರ ಹೋಗುತ್ತಾನೆ ಆ ಸಂದರ್ಭದಲ್ಲಿ ವೈದ್ಯರು ಆತನ ರೋಗವನ್ನು ಪತ್ತೆಮಾಡಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ರಕ್ಷಣೆ ಮಾಡುತ್ತಾನೆ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ನಾಟಿವೈದ್ಯ ಪದ್ದತಿ ಜಾರಿಯಲ್ಲಿತ್ತು ಆಗ ಯಾರಿಗಾದರೂ ಆರೋಗ್ಯದ ಸಮಸ್ಯೆ ಕಂಡುಬಂದರೆ ಅಲ್ಲಿನ ನಾಟಿವೈದ್ಯರೇ ಅವರ ಕಾಯಿಲೆಯನ್ನು ಪತ್ತೆಮಾಡಿ ನಿವಾರಣೆ ಮಾಡುತ್ತಿದ್ದರು. ಕಾಲ ಕಳೆದಂತೆ ನಾಟಿ ಔಷಧಿ ಪದ್ದತಿ ತೆರೆಗೆ ಸರಿದು ವೈಜ್ಞಾನಿಕ ಪದ್ದತಿಯ ಚಿಕಿತ್ಸಾ ಪದ್ದತಿ ಹೆಚ್ಚಿದಂತೆ ಆಸ್ಪತ್ರೆಗಳಿಗೆ ಬೇಡಿಕೆ ಹೆಚ್ಚಾಯಿತು. ಇತ್ತೀಚಿಗೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಸಮಸ್ಯೆ ತಲೆದೋರಿದ ನಂತರ ಆಸ್ಪತ್ರೆಗಳ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಅನೇಕರು ನಗರ ಪ್ರದೇಶಕ್ಕೆ ತೆರಳುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಡ ವರ್ಗದ ರೋಗಿಗಳ ಚಿಕಿತ್ಸೆಗೆ ಅವಶ್ಯಕವಿರುವ ವ್ಯವಸ್ಥೆ ಕಲ್ಪಿಸಿ, ಅವರಲ್ಲಿ ಧೈರ್ಯ ತುಂಬುವ ಉದ್ದೇಶದಿಂದ ಪಟ್ಟಣದಲ್ಲಿ ಭಾಗ್ಯಾಸ್ ಆಸ್ಪತ್ರೆಯನ್ನು ಆರಂಭಿಸಿರುವುದು ಸಂತಸದ ಸಂಗತಿ. ತಾಲ್ಲೂಕಿನಲ್ಲಿ ಬಡ ಜನರು ಸಮರ್ಪಕ ಚಿಕಿತ್ಸೆ ಸಿಗದೇ ತೊಂದರೆ ಅನುಭವಿಸುತ್ತಿರುವ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೋವಿಡ್ ಆಸ್ಪತ್ರೆ ತೆರೆಯಲಾಗಿದೆ. ಈ ಆಸ್ಪತ್ರೆಯೂ ಕಡಿಮೆ ಧರದಲ್ಲಿ ಹೆಚ್ಚಿನ ಚಿಕಿತ್ಸೆ ನೀಡುವ ಮೂಲಕ ಬಡವರ, ಮಕ್ಕಳ, ಮಹಿಳೆಯರ ಆರೋಗ್ಯವನ್ನು ರಕ್ಷಿಸುವಲ್ಲಿ ಹೆಚ್ಚಿನ ನಿಗಾ ವಹಿಸಿ ಯಾವುದೇ ಸಂದರ್ಭದಲ್ಲೂ ಉದಾಸೀನ ತೋರದೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಮೂಕ ತಾಲ್ಲೂಕಿಲ್ಲಿ ಗುಣಮಟ್ಟದ ಚಿಕಿತ್ಸೆಗೆ ಹೆಸರಾಗಬೇಕು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಕೆ.ಮಹೇಶ್, ಸದಸ್ಯರಾದ ಪಿ.ಸಿ.ಕೃಷ್ಣ, ವೈದ್ಯರಾದ ಡಾ.ಭಾಗ್ಯಶ್ರೀ, ಡಾ.ರಾಕೇಶ್, ಉದ್ಯಮಿ ನಂದಿನಿ ಕೃಷ್ಣೆಗೌಡ, ಸಿಬ್ಬಂದಿಗಳಾದ ಭಾರತಿ, ಜ್ಯೋತಿ, ಕಾವ್ಯಾ ಸೇರಿದಂತೆ ಮತ್ತಿತರರು ಹಾಜರಿದ್ದರು.