ನಾಗದೋಷ ಪರಿಹಾರಕ್ಕೆ ಮಹತ್ವ ಪಡೆದ ಕ್ಷೇತ್ರ, ವಿದುರಾಶ್ವತ್ಥ ನಾರಾಯಣ ಸ್ವಾಮಿ ದೇಗುಲ. ದ್ವಾಪರ ಯುಗದಲ್ಲಿ ವಿದುರನು ಅಶ್ವತ್ಥ ಸಸಿಯನ್ನು ನೆಟ್ಟು, ದೇಗುಲವನ್ನು ನಿರ್ಮಿಸಿದ ಕಾರಣಕ್ಕೆ ಇಲ್ಲಿಗೆ “ವಿದುರಾಶ್ವತ್ಥ’ ಎಂಬ ಹೆಸರು ಬಂತು ಎನ್ನಲಾಗಿದೆ. ಗೌರಿಬಿದನೂರು ಸನಿಹವಿರುವ ಈ ಕ್ಷೇತ್ರದಲ್ಲಿ ಭಕ್ತಾದಿಗಳು ನಾಗದೋಷ ನಿವಾರಣೆಗಾಗಿ ಹರಕೆಗಳನ್ನು ಒಪ್ಪಿಸುತ್ತಾರೆ. ನಾಗರ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು ಇಲ್ಲಿನ ವಿಶೇಷತೆ. ಇಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯ ನಾಗದೇವರ ಕಲ್ಲುಗಳನ್ನು ಕಾಣಬಹುದು.
ವಿದುರನ ಯಾತ್ರೆ: ಮಹಾಭಾರತ ಯುದ್ಧದಲ್ಲಿನ ಸಾವು- ನೋವುಗಳನ್ನು ನೋಡಿದ ವಿದುರನು ಮೋಕ್ಷವನ್ನು ಬಯಸಿದ್ದನು. ಆಗ ಶ್ರೀಕೃಷ್ಣನ ಸಲಹೆಯ ಮೇರೆಗೆ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ, ಇಲ್ಲಿದ್ದ ಮೈತ್ರೀಯ ಎಂಬ ಮಹರ್ಷಿಗಳ ಆಶ್ರಮಕ್ಕೆ ಬಂದನು. ನಂತರ ಋಷಿಗಳ ಸಲಹೆಯಂತೆ ಅಶ್ವತ್ಥ ಗಿಡವನ್ನು ನೆಟ್ಟು ಅನೇಕ ವರ್ಷಗಳ ಕಾಲ ಇಲ್ಲಿ ಪೂಜೆ ಸಲ್ಲಿಸಿದನು. ಇದರ ಫಲವಾಗಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಪ್ರತ್ಯಕ್ಷರಾಗಿ, ವಿದುರನ ಆತ್ಮೋದ್ಧಾರವನ್ನು ಮಾಡಿದರಂತೆ. ಇಲ್ಲಿ ಬೃಹದಾಕಾರವಾಗಿ ಬೆಳೆದಿದ್ದ ವೃಕ್ಷವು ಕಳೆದ ಕೆಲವು ವರ್ಷಗಳ ಹಿಂದೆ ಧರಾಶಾಹಿಯಾಗಿದೆ.
ದೇವಳದ ಆವರಣದಲ್ಲಿ ಈಗ ಅಲ್ಲಲ್ಲಿ ಅಶ್ವತ್ಥ ವೃಕ್ಷಗಳಿವೆ. ಹಿಂದೆ ದೇವಳದ ಪಕ್ಕದಲ್ಲಿ ಉತ್ತರ ಪಿನಾಕಿನಿ ಎಂಬ ನದಿ ಹರಿಯುತ್ತಿತ್ತು. ಈಗ ಇದು ಬರಡಾಗಿದೆ. ದೇವಳದ ಆವರಣದಲ್ಲಿ ಯಾಗ ಶಾಲೆಯಿದೆ. ಪ್ರಾಮ ಗಣದಲ್ಲಿರುವ ಅಸಂಖ್ಯ ನಾಗನ ಕಲ್ಲುಗಳು ಶ್ರದ್ಧೆ, ಭಯ, ಭಕ್ತಿಯನ್ನು ಉದ್ದೀಪನಗೊಳಿಸುತ್ತವೆ. ಸಂತಾನ ನಾಗೇಂದ್ರ ಸ್ವಾಮಿ ಪೂಜೆ, ನಾಗದೋಷ ನಿವಾರಣಾ ಪೂಜೆ, ರಾಹುಕೇತು ಪೂಜೆ, ಕಾಳಸರ್ಪ ದೋಷ ನಿವಾರಣೆ ಪೂಜೆಗಳು ಇಲ್ಲಿ ಜರುಗುತ್ತವೆ.
ಸಂತಾನ ನಾಗೇಂದ್ರ: ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಇಲ್ಲಿ ಪ್ರಾರ್ಥಿಸಿಕೊಂಡರೆ, ಸಂತಾನ ಪ್ರಾಪ್ತಿಯಾಗುತ್ತದಂತೆ. ಈ ಮಾತಿಗೆ ಸಾಕ್ಷಿ ಎಂಬಂತೆ ಪ್ರತಿನಿತ್ಯ ಹತ್ತಾರು ದಂಪತಿಗಳು, ಮಕ್ಕಳೊಂದಿಗೆ ಬಂದು ಹರಕೆಯನ್ನು ಈಡೇರಿಸುತ್ತಾರೆ. ಭಕ್ತರು ಬೇರೆ ನಾಗ ಕ್ಷೇತ್ರಗಳಲ್ಲಿ ಸರ್ಪ ಸಂಸ್ಕಾರ ಸೇವೆಗಳನ್ನು ನೆರೆವೇರಿಸಿ, ಈ ಸನ್ನಿಧಿಗೆ ಬಂದು ನಾಗ ಪ್ರತಿಷ್ಠೆಯನ್ನು ಮಾಡುತ್ತಾರೆ. ನಾಗನ ಕಲ್ಲು ಪ್ರತಿಷ್ಠೆಗೆ ಅವಕಾಶವಿರುವ ರಾಜ್ಯದ ಏಕೈಕ ಪ್ರಸಿದ್ಧ ದೇವಾಲಯ ಎಂಬ ಹೆಗ್ಗಳಿಕೆ ಇಲ್ಲಿಯದು.
* ಲಕ್ಷ್ಮೀ ಅರ್ಜುನ ಮೊರಬ