Advertisement

ಉಕ ಪ್ರತ್ಯೇಕ ರಾಜ್ಯ ಅನಿವಾರ್ಯ

05:35 PM Sep 17, 2018 | |

ಧಾರವಾಡ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಇದ್ದು, ಈವರೆಗೂ ಸಹಿಸಿಕೊಂಡು ಬಂದ ನಮಗೆ ಮುಂದಿನ ಯುವ ಪೀಳಿಗೆ ಹಿತದೃಷ್ಟಿಯಿಂದ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಅನಿವಾರ್ಯವಾಗಿದೆ ಎಂದು ಉಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ ಹೇಳಿದರು.

Advertisement

ನಗರದ ಕವಿಸಂನಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ವಿಚಾರ ಸಂಕಿರಣ ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಮನೆಯ ಹಕ್ಕನ್ನು ನಾವು ಕೇಳುತ್ತಿದ್ದೇವೆ. ನಮಗೆ ನಮ್ಮ ಹಕ್ಕು ನೀಡಿ. ಇಲ್ಲದಿದ್ದರೆ ಸಮಿತಿ ವತಿಯಿಂದ 13 ಜಿಲ್ಲೆಗಳ ಹಳ್ಳಿ ಹಳ್ಳಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯರಿಗೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಹೋರಾಟದ ಬಗ್ಗೆ ಮಾಹಿತಿ ನೀಡಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು. 

ಜಾಮದಾರ ಅವರು ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯದ ಕುರಿತ ಬರೆದ ಪುಸ್ತಕಕ್ಕೆ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ್ದ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರೇ ಮುನ್ನುಡಿ ಬರೆಯುವ ಮೂಲಕ ನಮ್ಮ ಹೋರಾಟಕ್ಕೆ ಶಕ್ತಿ ನೀಡಿದ್ದಾರೆ. ಈ ಕುರಿತು ಅವರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು. ಉತ್ತರ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಉಕ ರಾಜ್ಯಕ್ಕಾಗಿ ಹಗಲಿರುಳು ಶ್ರಮಿಸಲಾಗುವುದು ಎಂದು ತಿಳಿಸಿದರು.

ರೈತ ಪರ ಹೋರಾಟಗಾರ ಶಂಕರಪ್ಪ ಅಂಬಲಿ ಮಾತನಾಡಿ, ಅಂದು ಏಕೀಕರಣದ ಅವಶ್ಯಕತೆ ಇತ್ತು. ಆದರೆ ಇಂದು ಪ್ರತ್ಯೇಕತೆಯ ಅವಶ್ಯಕತೆ ಇದೆ. ಆಡಳಿತ ವ್ಯವಸ್ಥೆ ಹದಗೆಟ್ಟ ಕಾರಣ ಉತ್ತರ ಕರ್ನಾಟಕ ಹಿಂದುಳಿದಿದ್ದು, ಪ್ರತ್ಯೇಕತೆ ಹೋರಾಟ ತೀವ್ರ ಸ್ವರೂಪ ತಾಳುವಂತಾಗಿದೆ. ಉಕ ಭಾಗದ ಜನ ಏನೇ ಪಡೆಯಬೇಕಾದರೂ ಹೋರಾಟದ ಮೂಲಕವೇ ಪಡೆಯುವ ಪರಿಸ್ಥಿತಿ ಇದೆ ಎಂದರು.

Advertisement

ಹಿರಿಯರು ಹೋರಾಟಗಾರ ಬೆನ್ನಿಗೆ ನಿಂತು ಮಾನಸಿಕ ಪ್ರೋತ್ಸಾಹ ನೀಡುವ ಮೂಲಕ ಹುರಿದುಂಬಿಸಬೇಕು. ನಮ್ಮ ಬುದ್ಧಿಜೀವಿಗಳೇ ನಮಗೆ ವಿರೋಧ ಮಾಡುತ್ತಿರುವುದು ಅಸಮಾಧಾನ ತಂದಿದೆ. ಅವರು ಬೆಂಬಲ ನೀಡದಿದ್ದರೂ ಪರವಾಗಿಲ್ಲ, ಏನೂ ಹೇಳದೆ ತಟಸ್ಥವಾಗಿ ಇರಬೇಕು ಎಂದು ಮನವಿ ಮಾಡಿದರು.

ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಳಶೆಟ್ಟಿ ಪ್ರಾಸ್ತಾವಿಕ ಮಾರನಾಡಿದರು. ಜಿಲ್ಲಾಧ್ಯಕ್ಷ ಲಕ್ಷ್ಮಣ ಬಕ್ಕಾಯಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪದಾಧಿಕಾರಿಗಳಾದ ಶೋಭಾ ಚಲವಾದಿ, ಶರೀಫ ಅಮ್ಮಿನಬಾವಿ ಮಾತನಾಡಿದರು. ಉತ್ತರ ಕರ್ನಾಟಕ ಹೋರಾಟ ಸಮಿತಿ ಧಾರವಾಡ ಜಿಲ್ಲಾ ಘಟಕದ ನೂತನ ಪಧಾಕಾರಿಗಳು ಪದಗ್ರಹಣ ಮಾಡಿದರು. ಪ್ರಭು ಹಂಚಿನಾಳ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next