ಮನುಷ್ಯನಿಗೆ ಬದುಕಿನಲ್ಲಿ ಸಾಮಾನ್ಯವಾಗಿ ಎರಡು ಸ್ಥಿತಿಗಳಿವೆ. ಒಂದು ಏಕಾಂತ, ಮತ್ತೂಂದು ಲೋಕಾಂತ. ಇದನ್ನು ಸರಳವಾಗಿ - ಒಬ್ಬನೇ ಇರುವುದು ಮತ್ತು ಇನ್ನೊಬ್ಬರ ಜೊತೆ ಇರುವುದು ಎಂದು ಹೇಳಬಹುದು. ನೀವು ಬಾತ್‌ರೂಮಿನಲ್ಲಿದ್ದೀರಿ ಅಥವಾ ಲಿಫ್ಟ್ನೊಳಗಿದ್ದೀರಿ ಅಥವಾ ಮನೆಯಲ್ಲಿ/ಕಚೇರಿಯಲ್ಲಿ ಒಂಟಿಯಾಗಿ ಇದ್ದೀರಿ- ಎಂದರೆ ಅದು ಏಕಾಂತದ ಸ್ಥಿತಿ. ಆಗ, ನೀವು ನಿಮ್ಮ “ನಿಜ’ವಾದ ಸ್ಥಿತಿಯಲ್ಲಿರುತ್ತೀರಿ. ಅಂದರೆ, ಯಾರ ಮರ್ಜಿಗೂ ಅವಲಂಬಿತನಾಗದೇ ತಾನು ತಾನೇ ಆಗಿ ಇರಬಹುದಾದ ಒಂದು ಸ್ಥಿತಿ.
ಹೆಂಡತಿ/ಗಂಡ ಜೊತೆಗಿದ್ದ ಕೂಡಲೇ ಸ್ವ-ಭಾವ ಬದಲಾಗುತ್ತದೆ. ಬಾಸ್ ಎದುರು ಇದ್ದರೆ ಒಂದು ರೀತಿ, ಕಚೇರಿ ಸಹಾಯಕನ ಜೊತೆಗಿದ್ದರೆ ಮತ್ತೂಂದು ರೀತಿ. ರಸ್ತೆಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿರುವಾಗ ನಿಮ್ಮಷ್ಟಕ್ಕೆ ಹಾಡುತ್ತಿರುವಿರಿ; ಒಬ್ಬನೇ ಒಬ್ಬ ಮುಂದಿನಿಂದ ಬರುತ್ತಿರುವುದನ್ನು ಕಂಡರೂ ಹಾಡುವುದನ್ನು ನಿಲ್ಲಿಸುತ್ತೀರಿ. ಕೆಲವೊಮ್ಮೆ ಯಾವುದೋ ಘಟನೆಯನ್ನು ಕಲ್ಪಿಸಿ ನಿಮ್ಮಷ್ಟಕ್ಕೆ ನೀವೇ ನಗುತ್ತೀರಿ; ಯಾರಾದರೂ ನಿಮ್ಮನ್ನು ಗಮನಿಸಿದ್ದಾರೆ ಎಂದ ತತ್‌ಕ್ಷಣ ತಾನು ನಕ್ಕದ್ದಲ್ಲ , ಹಲ್ಲಿನಲ್ಲೇನೋ ಕಸ ಸಿಕ್ಕಿಹಾಕಿಕೊಂಡಿದೆ ಎಂಬಂತೆ ಅಭಿನಯಿಸುತ್ತೀರಿ.
ಇಬ್ಬರು ಪ್ರತ್ಯೇಕವಾಗಿ ಇರುವಾಗ ಅವರಿಬ್ಬರ ಮನೋಸ್ಥಿತಿಗಳೇ ಬೇರೆ. ಅವರಿಬ್ಬರು ಮುಖಾಮುಖೀಯಾದರೆ ಅವರ ಮನೋಸ್ಥಿತಿಯೇ ಬೇರೆ. ಇಬ್ಬರು ಹೋಗಿ, ಮೂವರಾದರೆ ಆಗ ಮನೋಸ್ಥಿತಿಯೇ ಬೇರೆ. ಸಾವಿರ ಮಂದಿ ನೆರೆದಿರುವ, ಜಾತ್ರೆಯಲ್ಲಿ ನಿಂತುಕೊಳ್ಳುವಾಗ ಇರುವ ಮನೋಸ್ಥಿತಿಯೇ ಬೇರೆ.
“ನಾನು ದುಡಿಯುತ್ತೇನೆ, ಉಣ್ಣುತ್ತೇನೆ, ನನಗೆ ನನ್ನಷ್ಟಕ್ಕೆ ಇರುವ ಹಕ್ಕಿದೆ’ ಎಂದು ಹೇಳಿಕೊಂಡರೂ ಸಾಮಾಜಿಕರ ನಡುವೆ ಇರುವಾಗ “ನಾನು ನಾನೇ’ ಆಗಿ ಇರಲು ಅನುವಿಲ್ಲ. ಸದಾಕಾಲ ಒಂದು ರೀತಿಯ ಬದ್ಧತೆ ಭೂತದಂತೆ ಹಿಂಬಾಲಿಸುತ್ತಿರುತ್ತದೆ. ಹಾಗಾಗಿ, ಒಬ್ಬನ ನಿಜವಾದ ಸ್ವಭಾವ ಗೊತ್ತಾಗುವುದು ಅವನು ಒಂಟಿಯಾಗಿ ಇರುವಾಗ ಮಾತ್ರ; ಯಾರದಾದರೂ ಜೊತೆಗಿರುವಾಗ ಅಲ್ಲ. ಜನಪದ ಕಲಾವಿದರು ತಮ್ಮ ಕಲೆಯನ್ನು ಆರಾಧನೆಯ ಕಾರಣಕ್ಕಾಗಿ ಪ್ರದರ್ಶಿಸುವವರು. ಆಧುನಿಕ ತಂತ್ರಜ್ಞಾನವನ್ನು ಬಳಸಿ, ಅವರ ಕಲೆಯನ್ನು ದಾಖಲಿಸಲು ಹೋದಾಗ, ಕೆಮರಾವನ್ನು ಕಂಡಕೂಡಲೇ ಅವರ ಮನೋಸ್ಥಿತಿ ಬದಲಾಗಿ, ಪ್ರದರ್ಶನದ ಮೇಲೆ ಪರಿಣಾಮಬೀರುತ್ತದೆ. ಕೆಮರಾದ ಮುಂದೆ ಪ್ರದರ್ಶಿಸುತ್ತಿರುವುದು ಅವರ ನಿಜವಾದ ಕಲೆ ಅಲ್ಲ !
“ತಾನು ತಾನಾಗಿ ಇರಲು’ ಸಾಧ್ಯವಾಗದಿರುವ ಬಗ್ಗೆ ಹೆಚ್ಚಿನವರು ಗಂಭೀರವಾಗಿ ಯೋಚಿಸುವುದಿಲ್ಲ. “ಬಂದಂತೆ ಬದುಕು’ ಎಂದು ಭಾವಿಸುತ್ತ ಬದುಕುತ್ತಾರೆ. ಕೆಲವೊಮ್ಮೆ ಇನ್ನೊಬ್ಬರು ತಮ್ಮ ಬಯಕೆಗೆ ಅನುಗುಣವಾಗಿ ಬದುಕಬೇಕು ಎಂದು ಭಾವಿಸುವವರಿದ್ದಾರೆ. ಈ ಕುರಿತು ಮನಶಾಸ್ತ್ರಜ್ಞ ಸಿಗಡ್ ಫ್ರಾಯ್ಡ “ರಿಪ್ರಶನ್’ ಎಂಬ ಮನಶಾÏಸ್ತ್ರೀಯ ಪರಿಕಲ್ಪನೆಯನ್ನು ಮುಂದಿಟ್ಟಿದ್ದ.
“ನಾನು ಯಾವಾಗಲೂ ತುಂಬ ನೇರ. ನನಗೆ ಹಿಂದೊಂದು ಮುಂದೊಂದು ಗೊತ್ತಿಲ್ಲ’ ಎಂದು ನೀವು ಹೇಳುತ್ತೀರಾದರೆ ನೀವು ಸುಳ್ಳು ಮಾತನಾಡುತ್ತಿದ್ದೀರಿ ಎಂದೇ ಅರ್ಥ.