ಬಾಗಲಕೋಟೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗಿರಿನಾಥ ತುಷಾರ ಅವರು ಬಾದಾಮಿ ತಾಲೂಕಿನ ವಿವಿಧೆಡೆ ಮಂಗಳವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಗೋವಿನಕೊಪ್ಪ ಗ್ರಾಮದಲ್ಲಿ ಟಿಟಿಎಪ್-2 ರಡಿ ಕೈಗೊಂಡ ಕುಡಿಯುವ ನೀರಿನ ಕಾಮಗಾರಿ, ಕಿತ್ತಲಿ ಮತ್ತು ಚೊಳಚಗುಡ್ಡ ಗ್ರಾಮದಲ್ಲಿ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಬದು ನಿರ್ಮಾಣ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ಜಾಲಿಹಾಳ ದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿರುವ ಅಡುಗೆ ಕೋಣೆ ಹಾಗೂ ವಿದ್ಯಾರ್ಥಿಗಳ ಕೊಠಡಿಗೆ ತೆರಳಿ ಸರಿಯಾಗ ಸೌಲಭ್ಯ ನೀಡುತ್ತಿರುವ ಬಗ್ಗೆ ವಿಚಾರಿಸಿ, ಗುಣಮಟ್ಟದ ಆಹಾರ ನೀಡುವ ಬಗ್ಗೆ ಅಡುಗೆಯವರಿಗೆ ಸೂಚಿಸಿದರು.
ಆಡಗಲ್ಲದಲ್ಲಿ ತೋಟಗಾರಿಕೆ ಇಲಾಖೆಯ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ, ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿ ಪರಿಶೀಲನೆ ನಡೆಸಿದರು. ನಂತರ ಗುಳೇದಗುಡ್ಡದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಹಾಜರಿ ಪರಿಶೀಲನೆ ನಡೆಸಿದರು.
ರೈತರಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಮೇವು ಬ್ಯಾಂಕ್ ಪರಿಶೀಲನೆ ನಡೆಸಿದ ತುಷಾರ್, ಗುಳೇದಗುಡ್ಡ ನೂತನ ತಾಲೂಕು ಕಚೇರಿ ಭೇಟಿ ನೀಡಿ ಪರಿಶೀಲಿಸಿ ಕಚೇರಿ ಬೋರ್ಡ್ ಹಾಕಲು ತಿಳಿಸಿದರು. ಅಲ್ಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸಮನ್ವಯತೆಯಿಂದ ಕೆಲಸ ನಿರ್ವಹಿಸಲು ಚೂಚಿಸಿದರು.
ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಜಿಪಂ. ಸಿಇಒ ಗಂಗೂಬಾಯಿ ಮಾನಕರ, ಉಪ ವಿಭಾಗಾಧಿಕಾರಿ ಎಚ್. ಜಯಾ, ಕೃಷಿ ಜಂಟಿ ನಿರ್ದೇಶಕ ರಾಜಶೇಖರ ವಿಜಾಪುರ, ತೋಟಗಾರಿಕೆ ಉಪ ನಿರ್ದೇಶಕ ಪ್ರಭುರಾಜ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.