ಒಂದೊಮ್ಮೆ ವೈಭವಶಾಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಹಂಪಿ ನಗರಿಗೆ ಎಷ್ಟು ಬಾರಿ ಭೇಟಿ ಕೊಟ್ಟರು ಪ್ರತಿ ಬಾರಿಯೂ ಹೊಸದೇನಾದರೂ ಕಾಣಲು ಸಿಗುತ್ತದೆ ಎಂಬಷ್ಟು ಇದೆ. ಈ ತಾಣದ ವಿಸ್ತಾರ ಮತ್ತು ಅಲ್ಲಿನ ಐತಿಹಾಸಿಕ ಪುರಾವೆಗಳು ನಮಗೆಲ್ಲ ಹಂಪಿ ಎಂದರೆ ಕಣ್ಣ ಮುಂದೆ ಬರುವುದು ಕಲ್ಲಿನ ರಥ, ವಿರೂಪಾಕ್ಷ ದೇವಾಲಯ, ಉಗ್ರ ನರಸಿಂಹನ ಆಕೃತಿ ಇನ್ನೂ ಹಲವು ಕ್ಷೇತ್ರಗಳು ಅದರೆ ಹಂಪಿಯಲ್ಲಿ ಅದೆಷ್ಟೋ ಇತಿಹಾಸದ ಉತ್ಸಾಹಿಗಳನ್ನು ಕೆರಳಿಸುವಂತಹ ತಾಣಗಳು ಅಡಗಿವೆ. ಮಾಲ್ಯವಂತ ರಘುನಾಥ ದೇವಸ್ಥಾನದ ಹೆಸರು ಕೇಳಿರುವವರೇ ಅಪರೂಪ.
ಹಂಪಿಯ ಬಜಾರ್ ರಸ್ತೆಯಿಂದ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿರುವ ಮಾಲ್ಯವಂತ ಎಂಬ ಬೆಟ್ಟದ ಮೇಲಿದೆ ರಾಮಾಯಣ ಕಥೆಯನ್ನು ಸಾರುವ ಈ ಆಪರೂಪ ದೇವಾಲಯ. ಸೀತೆಯನ್ನು ಹುಡುಕುತ್ತ ದಕ್ಷಿಣದ ಕಡೆಗೆ ಬಂದ ರಾಮ ಲಕ್ಷ್ಮಣರು ಚಾತುರ್ಮಾಸ ಹಾಗೂ ಮಳೆಗಾಲದ ಸಮಯದಲ್ಲಿ ಮಾಲ್ಯವಂತ ಪರ್ವತದಲ್ಲಿ ಆಶ್ರಯವನ್ನು ಪಡೆದ್ದಿದರು ಎಂಬ ನಂಬಿಕೆ ಇಲ್ಲಿಯ ಸ್ಥಳಿಯರಲ್ಲಿದೆ. ಪ್ರಭು ಶ್ರೀರಾಮ ತನ್ನ ಬಂಟನಾದ ಹನುಮನ ಬಳಿ ಸೀತೆಗೆ ತಲುಪಿಸುವಂತೆ ಉಂಗುರವನ್ನು ಬಿಚ್ಚಿ ಕೊಟ್ಟ ಸಂಗತಿಯನ್ನು ಕೂಡ ಈ ಪರ್ವತ ತನ್ನಲ್ಲಿ ಬಚ್ಚಿಟ್ಟುಕೊಂಡಿದೆ.
ಆನಂತರ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣವಾದ ದೇಗುಲದಲ್ಲಿ ಸೀತಾದೇವಿ, ಲಕ್ಷ್ಮಣ ಹಾಗೂ ಆಂಜನೇಯರೊಂದಿಗೆ ರಾಮನು ಯೋಗಾಭಿರಾಮನ ಭಂಗಿಯಲ್ಲಿ ನೆಲೆಸಿದ್ದಾನೆ. ಐದು ಮಹಡಿಯ ದೊಡ್ಡ ಗೋಪುರದ ಜತೆ ಮತ್ತೂಂದು ಸಣ್ಣ ಗೋಪುರವನ್ನು ಹೊಂದಿರುವ ಈ ದೇಗುಲದಲ್ಲಿ ಪ್ರತಿನಿತ್ಯ ಪೂಜೆ, ಪುನಸ್ಕಾರ ಹಾಗೂ ಅನ್ನಸಂತರ್ಪಣೆ ಮಾಡಲಾಗುತ್ತದೆ. ವಿಶೇಷವೆಂಬಂತೆ ಇಲ್ಲಿಗೆ ಉತ್ತರ ಭಾರತದ ಸಾಧು ಸಂತರು ಪ್ರತಿ ವರ್ಷ ಭಾರಿ ಸಂಖ್ಯೆಯಲ್ಲಿ ಭೇಟಿ ನೀಡಿ ಜಪ – ತಪಗಳನ್ನು ಈ ದೇಗುಲದಲ್ಲಿ ಕೈಗೊಳ್ಳುತ್ತಾರೆ.
ಪ್ರಭು ಶ್ರೀರಾಮನ ಈ ದಿವ್ಯ ಸನ್ನಿಧಿಯ ಸುತ್ತಲೂ ಅಸಂಖ್ಯಾತ ವಾನರಗಳು ವಾಸಿಸುತ್ತವೆ. ಧಾರ್ಮಿಕ ಆಚರಣೆಗಳ ಜತೆ ಸುಂದರವಾದ ಪ್ರಾಕೃತಿಕ ಸೌಂದರ್ಯವನ್ನು ಇಲ್ಲಿ ಆನಂದಿಸಬಹುದು. ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಕಾಣಲು ವಿದೇಶಿ ಪ್ರವಾಸಿಗರ ದಂಡು ಮಾಲ್ಯವಂತ ಪರ್ವತಕ್ಕೆ ಹರಿದು ಬರುತ್ತದೆ. ಉದಯಿಸುವ ಮತ್ತು ಮುಳುಗುವ ಸೂರ್ಯನ ಚಿತ್ರವನ್ನು ಸೆರೆ ಹಿಡಿಯಲು ಇದು ಸೂಕ್ತ ತಾಣ. ಬೇಸಗೆ ಕಾಲದಲ್ಲಿ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಬೇಸಗೆ ಬಿಟ್ಟು ಬೇರೆ ಸಮಯದಲ್ಲಿ ಈ ತಾಣಕ್ಕೆ ಭೇಟಿ ನೀಡುವುದು ಹೆಚ್ಚು ಸೂಕ್ತ. ಕರುನಾಡಿಗೂ ಮತ್ತು ರಾಮಾಯಣಕ್ಕೂ ಇರುವ ನಂಟನ್ನು ಸಾರುವಲ್ಲಿ ಮಾಲ್ಯವಂತ ರಘುನಾಥ ದೇವಸ್ಥಾನವು ಪ್ರಮುಖವಾದ್ದದು. ಇಂತಹ ಅದೆಷ್ಟೋ ತಾಣಗಳು ಭವ್ಯ ಭಾರತದ ಇತಿಹಾಸವನ್ನು ತಮ್ಮ ಮಡಿಲ್ಲಲ್ಲೇ ಮುಚ್ಚಿಟ್ಟುಕೊಂಡಿವೆ. ಅವುಗಳನ್ನು ಗುರುತಿಸಿ ಸಂರಕ್ಷಿಸಿದಾಗ ಮಾತ್ರ ನಮ್ಮ ಪುರಾತನ ಪರಂಪರೆಯನ್ನು ಉಳಿಸಲು ಸಾಧ್ಯ ಹಾಗೂ ಇದರ ಹೊಣೆ ನಮ್ಮ ಮೇಲಿದೆ.
-ಮಾನಸ ಅಗ್ನಿಹೋತ್ರಿ
ಬಳ್ಳಾರಿ