Advertisement
ಪ್ರಾಗೈತಿಹಾಸಿಕ ಕಾಲದಿಂದಲೂ (ಹಳೆ ಶಿಲಾಯುಗ) ಇಲ್ಲಿ ಜನ-ಸಂಸ್ಕೃತಿ ಇತ್ತೆಂಬುದನ್ನು ಅನೇಕ ಪುರಾತತ್ವಶಾಸ್ತ್ರಜ್ಞರು ಆಧಾರ ಸಹಿತವಾಗಿ ಸಾಬೀತುಪಡಿಸಿದ್ದಾರೆ. ಇವು ತುಳುನಾಡಿನ ಪ್ರಾಚೀನತೆಗೆ ಹಿಡಿದ ಕೈಗನ್ನಡಿಯಾಗಿದೆ.
Related Articles
Advertisement
ತುಳುನಾಡಿನ ಜನರು ಈ ಸಮಾಧಿಗಳನ್ನು ಪಾಂಡವರ ಕಲ್ಲು, ಮದ್ಮಲ್ ಪಾದೆ ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಜನರ ನಂಬಿಕೆಯ ಪ್ರಕಾರ ಪಾಂಡವರು ವನವಾಸಕ್ಕೆ ಬಂದ ಸಮಯದಲ್ಲಿ ಉಳಿದುಕೊಂಡ ಸ್ಥಳವೆಂದೂ ಹಾಗಾಗಿ ಇದನ್ನು ಪಾಂಡವರ ಕಲ್ಲೆಂದು ಹೇಳುತ್ತಾರೆ. ಮದ್ಮಲ್ ಪಾದೆ ಎಂದು ಕರೆಯಲು ಒಂದು ದಂತಕಥೆ ಇದ್ದು, ಇದರ ಪ್ರಕಾರ ಹಿಂದಿನ ಕಾಲದಲ್ಲಿ ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಇಲ್ಲಿರುವ ಕಲ್ಲಿನ ಕೋಣೆಯೊಳಗಡೆ ವೀಳ್ಯದೆಲೆ, ಅಡಿಕೆಯನ್ನಿಟ್ಟು ಪೂಜಿಸಿದರೆ ಮಾರನೇ ದಿನ ಮದುಮಗಳಿಗೆ ಬೇಕಾದ ಚಿನ್ನವು ಈ ಕಲ್ಲು ಕೋಣೆಯ ಒಳಗಡೆ ಸಿಗುತ್ತಿತ್ತು. ಮದುವೆಗೆ ಈ ಚಿನ್ನವನ್ನು ಉಪಯೋಗಿಸಿ, ಮದುವೆ ಮುಗಿದ ಅನಂತರದಲ್ಲಿ ಚಿನ್ನವನ್ನು ಕಲ್ಲು ಕೋಣೆಗೆ ಮರು ಒಪ್ಪಿಸಬೇಕಾಗಿತ್ತು.
ಆದರೆ ಪುರಾತತ್ವ ಅಧ್ಯಯನದಲ್ಲಿ ಇದನ್ನು ಬೃಹತ್ ಶಿಲಾಯುಗದ ಮಾನವನ ಸಮಾಧಿಗಳಲ್ಲಿ ಒಂದಾದ ಕಲ್ಮನೆ/ ಕಲ್ಕೋಣೆ (Dolmen) ಸಮಾಧಿ ಎಂದು ಕರೆಯಲಾಗುತ್ತದೆ.
ಕಲ್ಮನೆ ಸಮಾಧಿಗಳ ರಚನೆ
ಕಲ್ಮನೆ ಸಮಾಧಿಗಳನ್ನು ದೊಡ್ಡ ಕಲ್ಲಿನ ಚಪ್ಪಡಿಗಳನ್ನು ಜೋಡಿಸಿ ಕೋಣೆಯ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಹೆಚ್ಚಾಗಿ ಪೂರ್ವ ದಿಕ್ಕಿನ ಚಪ್ಪಡಿಯಲ್ಲಿ ಸುಮಾರು ಒಂದು ಅಡಿ ಸುತ್ತಳತೆಯ ರಂಧ್ರವನ್ನು ವೃತ್ತಾಕಾರದಲ್ಲಿ ಮಾಡಿರುತ್ತಾರೆ. ಪ್ರಾಯಶಃ ಇವರಿಗೆ ಪುನರ್ಜನ್ಮದ ಮೇಲೆ ನಂಬಿಕೆ ಇದ್ದಿರಬಹುದು ಹಾಗಾಗಿ ಸತ್ತ ವ್ಯಕ್ತಿಯ ಕ್ರಿಯಾವಿಧಿಗಳನ್ನು ಮಾಡಲು ಈ ರಂಧ್ರವನ್ನು ಮಾಡಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.
ಸಮಾಧಿಯ ಒಳಗಡೆ ಬೃಹತ್ ಶಿಲಾಯುಗದ ಮಾನವನ ಅಸ್ಥಿ ಅವಶೇಷಗಳ ಜತೆಗೆ ಅವನು ಉಪಯೋಗಿಸುತ್ತಿದ್ದ ವಸ್ತುಗಳನ್ನು ಮಡಕೆಯಲ್ಲಿಟ್ಟು ಹೂಳಲಾಗುತ್ತಿತ್ತು. ಇಂತಹ ಅವಶೇಷಗಳು ಉತ್ಫನನ ಸಂದರ್ಭದಲ್ಲಿ ದೊರಕಿವೆ.
ತುಳುನಾಡಿನ ಜನರಲ್ಲಿ ಈ ಸಮಾಧಿಗಳ ಬಗ್ಗೆ ಧಾರ್ಮಿಕ ಅಥವಾ ಪುರಾಣದ ನಂಬಿಕೆ ಇರುವುದರಿಂದ ಈ ಪುರಾತತ್ವೀಯ ಆಕರಗಳನ್ನು ಉಳಿಸಲು ಪರೋಕ್ಷವಾಗಿ ಕಾರಣೀಕರ್ತರಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ.
-ದಿಶಾಂತ್ ದೇವಾಡಿಗ
ಎಂಎಸ್‌ಆರ್‌ಎಸ್ ಕಾಲೇಜು ಶಿರ್ವ