Advertisement

ಪತ್ನಿ ಕಾವಲಿಗೆ ಮನೆತುಂಬಾ ರಹಸ್ಯ ಕ್ಯಾಮೆರಾ ಅಳವಡಿಸಿದ!

06:22 PM May 23, 2019 | Team Udayavani |

ಬೆಂಗಳೂರು: ಮನೆಯಲ್ಲಿ 22 ರಹಸ್ಯ ಕ್ಯಾಮೆರಾ, ಮೊಬೈಲ್ನಲ್ಲಿ ರಹಸ್ಯ ಆ್ಯಪ್‌ ಅಳವಡಿಸಿ ‘ಗೂಢಾ ಚಾರಿಕೆ’ ಮಾಡುತ್ತಿದ್ದ ಪತಿಯ ನಡವಳಿಕೆಯಿಂದ ಸಿಟ್ಟಿಗೆದ್ದ ಪತ್ನಿ ಕ್ರಿಕೆಟ್ ಬ್ಯಾಟ್ನಿಂದ ಆತನನ್ನು ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.

Advertisement

ದಂಪತಿಯ ಈ ಜಗಳ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಆಪ್ತಸಮಾಲೋಚನೆ ಕೇಂದ್ರದಲ್ಲಿ ಏಪ್ರಿಲ್ನಲ್ಲಿ ದಾಖಲಾಗಿತ್ತು. ಅನುಮಾನದ ಕಣ್ಣಿನ ಗಂಡನ ಜತೆ ಬಾಳ್ವೆ ಕಷ್ಟ ಎಂದು ಪತ್ನಿ ಪಟ್ಟು ಹಿಡಿದರೆ, ಬ್ಯಾಟ್ನಿಂದ ಹಲ್ಲೆ ನಡೆಸಿದ್ದ ರಿಂದ ಸುಂದರ ಮುಖವನ್ನೇ ಕಳೆದುಕೊಂಡಿದ್ದೇನೆ ಎಂಬುದು ಪತಿಯ ಅಳಲಾಗಿತ್ತು. ದಂಪತಿ ಮನವೊಲಿಸುವ ಆಪ್ತಸಮಾಲೋಚಕರ ಪ್ರಯತ್ನವೂ ವಿಫ‌ಲವಾಗಿ ವಿಚ್ಛೇದನ ಹಂತಕ್ಕೆ ಬಂದು ನಿಂತಿದೆ.

ಜಯನಗರದ ಪುರುಷೋತ್ತಮ್‌ (44), ಲಾವಣ್ಯ (33) (ಇಬ್ಬರ ಹೆಸರೂ ಬದಲಾಯಿಸಲಾಗಿದೆ) ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಏಳು ವರ್ಷದ ಮಗನಿದ್ದಾನೆ. ಸಾಫ್ಟ್ವೇರ್‌ ಕಂಪನಿಯೊಂದರಲ್ಲಿ ಪುರುಷೋತ್ತಮ್‌ ಇಂಜಿನಿಯರ್‌ ಆಗಿದ್ದು, ಲಾವಣ್ಯ ಗೃಹಿಣಿ.

ಕೆಲ ವರ್ಷಗಳಿಂದ ಪತ್ನಿ ಲಾವಣ್ಯ ಬೇರೊಬ್ಬ ವ್ಯಕ್ತಿಯ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಅನುಮಾನಗೊಂಡ ಪುರುಷೋತ್ತಮ್‌, ಆಕೆ ಮೇಲೆ ನಿಗಾ ಇಡಲು ಮನೆಯ ಹಾಲ್, ಅಡುಗೆ ಕೋಣೆ ಸೇರಿ ಹಲವೆಡೆ ಒಟ್ಟು 22 ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದ. ಕಚೇರಿಯಿಂದ ಬಂದ ಬಳಿಕ ರಹಸ್ಯ ಕ್ಯಾಮೆರಾಗಳನ್ನು ಪರಿಶೀಲಿಸಿದರೆ ಆತನಿಗೆ ನಿರಾಸೆ ಕಾದಿರುತ್ತಿತ್ತು.

ಗೂಢಾಚಾರನ ಬಿಟ್ಟ: ರಹಸ್ಯ ಕ್ಯಾಮೆರಾ ಯೋಜನೆ ವಿಫ‌ಲವಾದ ಕೂಡಲೇ ವಿಚಲಿತನಾದ ಪುರುಷೋತ್ತಮ್‌, ಪತ್ನಿ ಮನೆಯಿಂದ ಹೊರಗೆ ಹೋಗಿ ಬೇರೊಬ್ಬನನ್ನು ಭೇಟಿಯಾಗಬಹುದು, ಅದನ್ನು ಕಂಡುಹಿಡಿಯಬೇಕು ಎಂದು ನಿರ್ಧರಿಸಿದ್ದ. ಹೀಗಾಗಿ, ತನ್ನ ಸಂಬಂಧಿಕ ಯುವಕನಿಗೆ ವಿಷಯ ತಿಳಿಸಿ ಆಕೆಯನ್ನು ಹಿಂಬಾಲಿಸಿ ನಿಗಾ ಇಡುವಂತೆ ಸೂಚಿಸಿದ್ದ. ಆತನಿಗೊಂದು ಕ್ಯಾಮೆರಾ ಕೊಡಿಸಿ, ಪತ್ನಿ ಬೇರೊಬ್ಬರನ್ನು ಭೇಟಿಯಾಗುವ ಫೋಟೋ ತೆಗೆಯಲು ಹೇಳಿದ್ದ. ಆದರೆ, ಆತ ಅಂದುಕೊಂಡಂತೆ ಪತ್ನಿಗೆ ಯಾರೊಂದಿಗೂ ಸಂಬಂಧವಿರಲಿಲ್ಲ. ಇದರಿಂದ ಆತ ಮತ್ತೂಮ್ಮೆ ನಿರಾಸೆ ಅನುಭವಿಸಿದ್ದ.

Advertisement

ಮೊಬೈಲ್ನಲ್ಲಿ ರಹಸ್ಯ ಆ್ಯಪ್‌: ಈ ವರ್ಷದ ಆರಂಭದಲ್ಲಿ ಪತ್ನಿಯ ಹುಟ್ಟುಹಬ್ಬದಂದು ಮೊಬೈಲ್ ಉಡುಗೊರೆ ನೀಡಿದ ಪುರುಷೋತ್ತಮ್‌, ತಾನು ಬದಲಾಗಿರುವುದಾಗಿ ಪ್ರಾಮಿಸ್‌ ಮಾಡಿದ್ದ. ಆದರೆ, ಉಡುಗೊರೆ ನೀಡಿದ್ದ ಮೊಬೈಲ್ನಲ್ಲಿ ರಹಸ್ಯ ಆ್ಯಪ್‌ ಡೌನ್‌ಲೋಡ್‌ ಮಾಡಿದ್ದ. ಆ ಮೊಬೈಲ್ಗೆ ಬರುವ ಸಂದೇಶ, ಕಾಲ್ಗಳ ಮಾಹಿತಿ ಆ್ಯಪ್‌ ಮೂಲಕ ಆತನಿಗೆ ತಿಳಿಯುತ್ತಿತ್ತು.

ಏಪ್ರಿಲ್ ಮೊದಲ ವಾರ ಪತ್ನಿ ಯುವಕನೊಬ್ಬನ ಜತೆಗಿದ್ದ ಪೋಟೋ ತೆಗೆದ ಪುರುಷೋತ್ತಮ್‌, ಆಕೆಗೆ ಫೋಟೋ ತೋರಿಸಿ ನಡತೆ ಬಗ್ಗೆ ಪ್ರಶ್ನಿಸಿದ್ದ. ಸೋದರ ಸಂಬಂಧಿ ಜತೆಗಿದ್ದರೂ ಅನುಮಾನ ಪಟ್ಟ, ಗೂಢಾಚಾರಿ ಪತಿ ವರ್ತನೆಯಿಂದ ಬೇಸತ್ತ ಲಾವಣ್ಯ, ಸಿಟ್ಟಿಗೆದ್ದು ಮಗನ ಕ್ರಿಕೆಟ್ ಬ್ಯಾಟ್ನಿಂದ ಪತಿಯ ತಲೆಗೆ ಹೊಡೆದಿದ್ದರು. ಈ ಕುರಿತು ಪುರುಷೋತ್ತಮ್‌ ಪತ್ನಿ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆಪ್ತಸಮಾಲೋಚನೆಗಾಗಿ ಪ್ರಕರಣ ವರ್ಗಾಯಿಸಿದ್ದರು.

ಮೂರು ವರ್ಷ ಕಾದು ಮದುವೆಯಾಗಿದ್ದ!:

2007ರಲ್ಲಿ ಮದುವೆಯಾಗಲು ತಯಾರಿ ನಡೆಸಿದ್ದ ಪುರುಷೋತ್ತಮ್‌, ಲಾವಣ್ಯ ಅವರ ಸಹೋದರಿಯನ್ನು ನೋಡಲು ಮನೆಗೆ ಹೋಗಿದ್ದರು. ಆದರೆ, ಲಾವಣ್ಯರನ್ನು ನೋಡಿದ ಬಳಿಕ ಆಕೆಯನ್ನೇ ವಿವಾಹವಾಗು ವುದಾಗಿ ಪಟ್ಟುಹಿಡಿದಿದ್ದರು. ಈ ವೇಳೆ ಆಕೆಯ ಪೋಷಕರು ವಿದ್ಯಾಭ್ಯಾಸ ಪೂರ್ಣವಾಗುವ ತನಕ ಮದುವೆ ಮಾಡುವುದಿಲ್ಲ ಎಂದಿದ್ದಕ್ಕೆ ಮೂರು ವರ್ಷ ಕಾದಿದ್ದು, ಲಾವಣ್ಯ ಅವರನ್ನು ಮದುವೆಯಾಗಿದ್ದ. ದಂಪತಿ ನಡುವೆ 11 ವರ್ಷ ವಯಸ್ಸಿನ ಅಂತರವಿದೆ ಎಂದು ಸಮಾಲೋಚಕರು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next