Advertisement

ಎರಡನೆ ಬಾರಿಗೆ ದಾಖಲೆ ವಿಜಯದ ಶೋಭೆ

09:22 AM May 26, 2019 | mahesh |

ಉಡುಪಿ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿಯ ಶೋಭಾ ಕರಂದ್ಲಾಜೆ ಅಭೂತಪೂರ್ವವೆಂಬಂತೆ ಮತ ಗಳಿಸಿ ವಿಜಯಿಯಾಗಿದ್ದಾರೆ. ಮೈತ್ರಿ ಅಭ್ಯರ್ಥಿ
ಯಾಗಿದ್ದ ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜರನ್ನು ಅವರು 3,49,599 ಮತಗಳ ಭಾರೀ ಅಂತರದಿಂದ ಸೋಲಿಸಿದ್ದಾರೆ.

Advertisement

ಶೋಭಾ ಕರಂದ್ಲಾಜೆ ಅವರಿಗೆ ಇದು ಸತತ ಎರಡನೇ ಗೆಲುವು ಮಾತ್ರವಲ್ಲ; ಇಷ್ಟು ಮತಗಳ ಅಂತರವನ್ನು ಅವರೂ ನಿರೀಕ್ಷಿ ಸಿರಲಿಲ್ಲ. ಶೋಭಾ ಹೇಳುತ್ತಿದ್ದುದು 2 ಲಕ್ಷಕ್ಕಿಂತ ಅಧಿಕ ಮತಗಳ ಅಂತರ. ಈಗ ಆದು 3.5 ಲಕ್ಷ ಮತಗಳಿಗೇರಿದೆ. ಇದು ನರೇಂದ್ರ ಮೋದಿ ಅಲೆ ಎನ್ನದೆ ಬೇರೆ ವಿಧಿ ಇಲ್ಲ.

2013ರ ವಿಧಾನಸಭಾ ಚುನಾವಣೆ ಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ದಿಂದ ಅಭೂತಪೂರ್ವವೆಂಬಂತೆ ಗೆಲುವು ಸಾಧಿಸಿ ಬಳಿಕ ಪ್ರಭಾವೀ ಸಚಿವರೂ ಆದ ಪ್ರಮೋದ್‌ ಅವರಿಗೆ 2018ರ ವಿಧಾನಸಭಾ ಚುನಾವಣೆಯ ಬಳಿಕ ಇದು ಸತತ ಎರಡನೇ ಸೋಲು.

2009ರ ಕ್ಷೇತ್ರ ಪುನರ್ವಿಂಗಡನೆ ಬಳಿಕ ಲೋಕಸಭಾ ಕ್ಷೇತ್ರಕ್ಕೆ ಇದು ನಾಲ್ಕನೇ ಚುನಾವಣೆ. 2009ರಲ್ಲಿ ಬಿಜೆಪಿಯ ಡಿ.ವಿ. ಸದಾನಂದ ಗೌಡ, 2012ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ. ಜಯಪ್ರಕಾಶ್‌ ಹೆಗ್ಡೆ, 2014ರಲ್ಲಿ ಶೋಭಾ ಕರಂದ್ಲಾಜೆ ಅವರು ವಿಜಯಿಗಳಾಗಿದ್ದರು. ಈ ಲೆಕ್ಕಾಚಾರದಲ್ಲಿ ಈಗಿನ ಬಿಜೆಪಿ ಗೆಲುವು ಮೂರನೇಯದು.

ಕುಂದಾಪುರದಲ್ಲಿ ಅತಿ ಹೆಚ್ಚು
ಕುಂದಾಪುರ ಕ್ಷೇತ್ರದಲ್ಲಿ ಶೋಭಾ ಅವರಿಗೆ ಅತಿ ಹೆಚ್ಚು ಮತಗಳು ಸಿಕ್ಕಿವೆ. ಅಂತರ ಹೆಚ್ಚಿಗೆ ಇರುವುದೂ ಇದೇ ಕ್ಷೇತ್ರದಲ್ಲಿ. ಇಲ್ಲಿನ ಅಂತರ 77,196. ಮೂಡಿಗೆರೆ ಕ್ಷೇತ್ರದಲ್ಲಿ ಅತಿ ಕಡಿಮೆ ಮತಗಳ ಅಂತರ ದಾಖಲಾಗಿದೆ. ಇಲ್ಲಿನ ಅಂತರ 26,712 ಮತಗಳು.

Advertisement

ಉಡುಪಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ 40,000ಕ್ಕಿಂತ ಹೆಚ್ಚು ಮತಗಳ ಅಂತರವನ್ನು ಶೋಭಾ ಕಾಯ್ದುಕೊಂಡಿದ್ದರೆ, ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಇದಕ್ಕಿಂತ ಕಡಿಮೆ ಮತಗಳ ಅಂತರವಿದೆ. ಮೊದಲೇ ನಿರೀಕ್ಷಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತಗಳು ಬಿಜೆಪಿಗೆ ದೊರಕಿದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಡುಪಿ ಜಿಲ್ಲೆಗಿಂತ ಕಡಿಮೆ ಮತಗಳು ಬಿಜೆಪಿಗೆ ದೊರಕಿವೆ. ಒಟ್ಟಾರೆ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಅಂತರದಿಂದ ಮುನ್ನಡೆ ಸಾಧಿಸಿತು. ಯಾವುದೇ ಕ್ಷೇತ್ರದಲ್ಲಿ ಮುನ್ನಡೆ 25,000ಕ್ಕಿಂತ ಕಡಿಮೆ ಇರಲಿಲ್ಲ ಎಂಬುದು ವಿಶೇಷ.

8ರಲ್ಲಿ 7 ಬಿಜೆಪಿ ಶಾಸಕರು
ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳರಲ್ಲಿ ಬಿಜೆಪಿ ಶಾಸಕರಿದ್ದುದು ಬಿಜೆಪಿಗೆ ಹೆಚ್ಚುವರಿ ಬಲ ನೀಡಿತು. ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ಇದು ಬಹಳ ಅನುಕೂಲವನ್ನು ಮೈತ್ರಿ ಅಭ್ಯರ್ಥಿಗೆ ತಂದು ಕೊಡಲಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಡಿಎಸ್‌ ಬಲ ಸ್ವಲ್ಪ ಮಟ್ಟಿಗೆ ಇರುವುದು ಮತ ಪ್ರಮಾಣವನ್ನು ಗಮನಿಸಿದಾಗ ತಿಳಿಯುತ್ತದೆ.

ರಾಜ್ಯ ಸರಕಾರವಿದ್ದೂ…
ರಾಜ್ಯದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಸರಕಾರವಿದ್ದೂ ಮೈತ್ರಿ ಅಭ್ಯರ್ಥಿ ನಿಂತರೂ ಯಾವುದೇ ಪ್ರಯೋಜನ ಕಂಡುಬಾರದೆ ಇದ್ದುದು ಇನ್ನೊಂದು ವಿಶೇಷ. ಉಸ್ತುವಾರಿ ಸಚಿವೆ ಡಾ| ಜಯಮಾಲಾ ಅವರು ಪ್ರಚಾರದಲ್ಲಿ ತೊಡಗಿದ್ದರೂ ಅವರ ಪ್ರಭಾವ ಇಲ್ಲಿ ಗಣನೀಯವಾಗಿರಲಿಲ್ಲ. ಅವರು ಕರಾವಳಿಯವರಾದರೂ ಜಿಲ್ಲೆಯ ನಿಕಟ ಸಂಪರ್ಕದವರೇನೂ ಆಗಿಲ್ಲ. ಹೀಗಾಗಿ ಅವರ ಪ್ರಭಾವ ಚುನಾವಣೆ ಮೇಲೆ ಆಗದೆ ಇದ್ದುದು ಕಂಡುಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next