Advertisement

ಜೂನ್‌ 5ರಿಂದ ಎರಡನೇ ಹಂತದ ಕೋಟಿ ವೃಕ್ಷ ಅಭಿಯಾನ

02:32 PM May 29, 2018 | |

ಬೆಂಗಳೂರು: ಸಮರ್ಥ ಭಾರತ ಸಂಘಟನೆ ಹಮ್ಮಿಕೊಂಡಿರುವ ಕೋಟಿ ವೃಕ್ಷ ಅಭಿಯಾನದ ಎರಡನೇ ಹಂತ ಜೂನ್‌ 5ರಿಂದ ಆಗಸ್ಟ್‌ 15ರವರೆಗೆ ರಾಜ್ಯಾದ್ಯಂತ ನಡೆಯಲಿದೆ ಎಂದು ಅಭಿಯಾನದ ಮೇಲ್ವಿಚಾರಕ ಗಣಪತಿ ಹೆಗಡೆ ಹೇಳಿದರು.

Advertisement

ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜೂ.5ರಂದು ಬೆಂಗಳೂರು ನಗರ ಸೇರಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಸಿ ನಡುವ ಅಭಿಯಾನಕ್ಕೆ ಚಾಲನೆ ನೀಡಲಿದ್ದೇವೆ. ಅರಣ್ಯ ಇಲಾಖೆ, ಬಿಬಿಎಂಪಿ, ಶಾಲಾ ಕಾಲೇಜು ಸಹಿತ 600ಕ್ಕೂ ಅಧಿಕ ಸಂಸ್ಥೆಗಳು ಅಭಿಯಾನದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.

ಸಸಿ ನೆಡುವ ಜತೆಗೆ ಮೂರು ವರ್ಷಗಳ ಕಾಲ ಅದರ ಆರೈಕೆಗೆ ಬೇಕಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. 2017ರಲ್ಲಿ ನಡೆದ ಅಭಿಯಾನದಲ್ಲಿ 14,09,921 ಗಿಡಗಳನ್ನು ನೆಡಲಾಗಿದೆ. 52.20 ಲಕ್ಷ ಬೀಜದುಂಡೆ ಸಿದ್ಧಪಡಿಸಿದ್ದು, ಅದರಲ್ಲಿ 44.82 ಲಕ್ಷ ಬೀಜದುಂಡೆಗಳನ್ನು ಎಸೆಯಲಾಗಿತ್ತು.

ಮೊದಲ ಹಂತದಲ್ಲಿ 28,011 ಸಾರ್ವಜನಿಕರು ಹಾಗೂ 368 ಸಂಸ್ಥೆಗಳು ಅಭಿಯಾನದಲ್ಲಿ ಭಾಗವಹಿಸಿದ್ದವು. ಎರಡನೇ ಹಂತದ ಅಭಿಯಾನ ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆಯಲಿದೆ. ಇದಕ್ಕಾಗಿ ಜಿಲ್ಲಾ ಪ್ರಮುಖರ ನಿಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.

ಆಯಾ ಪ್ರದೇಶ ಹಾಗೂ ಹವಾಗುಣಕ್ಕೆ ಅನುಗುಣವಾಗಿ ಜೀವ ವೈವಿಧ್ಯಕ್ಕೆ ಪೂರಕವಾಗುವ ಗಿಡಗಳನ್ನು ನೆಡಲಾಗುತ್ತದೆ. ಕೃಷಿಕರು, ಉದ್ಯಮಿಗಳು, ಸಾಫ್ಟ್ವೇರ್‌ ತಂತ್ರಜ್ಞರು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ವ್ಯಾಪಾರಿಗಳು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

Advertisement

ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು ಉದ್ದೇಶದೊಂದಿಗೆ ಹಮ್ಮಿಕೊಂಡಿರುವ ಅಭಿಯಾನ, ನಿರಂತರವಾಗಿ ನಡೆಯಲಿದೆ. ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಅರೆಮಲೆನಾಡು, ಬಯಲುಸೀಮೆ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗದಲ್ಲೂ ಅಭಿಯಾನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ: 89926 62262 ಅಥವಾ 97381 32356 ಸಂಪರ್ಕಿಸಬಹುದು ಎಂಬ ವಿವರ ನೀಡಿದರು.

ಪರಿಸರವಾದಿ ಲಿಂಗರಾಜು ನಿಡುವಣಿ ಮಾತನಾಡಿ, ಕರ್ನಾಟಕ ಹಾಗೂ ಬೇರೆ ರಾಜ್ಯಗಳಲ್ಲಿ ಈಗಾಗಲೇ 700ಕ್ಕೂ ಅಧಿಕ ಪಂಚವಟಿ ವನಗಳ ನಿರ್ಮಾಣ ಮಾಡಿದ್ದೇವೆ. 150 ಕಡೆಗಳಲ್ಲಿ ಔಷಧವನ ರಚಿಸಿದ್ದೇವೆ. ಪರಿಸರ ಸಂರಕ್ಷಣೆಗೆ ಹೊಸ ಪರಿಕಲ್ಪನೆಯನ್ನು ಜನರ ಮುಂದಿಡುತ್ತಿದ್ದೇವೆ ಮತ್ತು ಸಾಮಾಜಿಕ ಜಾಲತಾಣದಲ್ಲೂ ಇದನ್ನು ಪ್ರಚಾರ ಮಾಡುತ್ತಿದ್ದೇವೆ ಎಂದರು. ಸಮರ್ಥ ಭಾರತ ಸಂಘಟನೆಯ ರಾಧಕೃಷ್ಣ ಹೊಳ್ಳ, ಪ್ರದೀಪ್‌ ಭಾರದ್ವಜ್‌, ಅಪರ್ಣಾ ಪಠವರ್ಧನ್‌, ಮಾಲಿನಿ ಭಾಸ್ಕರ್‌ ಸುದ್ದಿಗೋಷ್ಠಿಯಲ್ಲಿದ್ದರು.

ಆಸಕ್ತರಿಗೆ ಬೀಜದುಂಡೆ ತಯಾರಿ ತರಬೇತಿ: ಪ್ರತ್ಯಕ್ಷವಾಗಿ ಗಿಡ ನೆಡುವುದು, ಬೀಜದುಂಡೆ ಎಸೆಯುವುದು ಅಥವಾ ನೆಲದಲ್ಲಿ ಹೂಳುವುದು, ಆಯಾ ಗಿಡಗಳ ಬೀಜವನ್ನು ನೇರವಾಗಿ ಬಿತ್ತುವುದು ಹೀಗೆ ಮೂರು ಪ್ರಕಾರದಲ್ಲಿ ಅಭಿಯಾನ ನಡೆಯಲಿದೆ. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳೂ ಸಂಘಟನೆಗೆ ಗಿಡ ಒದಗಿಸಬಹುದು.

ಗಿಡ ನೆಡಲು ಸಾಧ್ಯವಾಗದ ಪ್ರದೇಶಗಳಲ್ಲಿ (ದಟ್ಟಾರಣ್ಯ, ಗುಡ್ಡಗಾಡು) ಎಸೆಯಲು ಅಗತ್ಯವಿರುವ ಬೀಜದುಂಡೆಗಳನ್ನು ಸಿದ್ಧಪಡಿಸಲು ಆಸಕ್ತರಿಗೆ ತರಬೇತಿ ನೀಡಲಾಗುವುದು. ಸಾಮಾಜಿಕ ಅರಣ್ಯ ಯೋಜನೆಯಡಿ ಗಿಡದ ರಕ್ಷಣೆಗೆ ಸರ್ಕಾರದಿಂದ ಸಿಗುವ ಸೌಲಭ್ಯ ಕೂಡ ಒದಗಿಸಲಾಗುವುದು ಎಂದು ಗಣಪತಿ ಹೆಗಡೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next