ಕಾಲೇಜ್ ಕ್ಯಾಂಟೀನ್ ಎಂದಾಕ್ಷಣ ನೆನಪಾಗುವುದು ಗಿಜಿಗಿಡುವ ಸದ್ದು, ವಿದ್ಯಾರ್ಥಿಗಳ ನಿರಂತರ ಮಾತುಕತೆ, ಕ್ಲಾಸ್ ಅವಧಿಗಳ ವಿಶ್ಲೇಷಣೆ, ಇವೆಲ್ಲವುಗಳ ನಡುವೆ ತಾಜಾ ತಿನಿಸುಗಳ ಸುವಾಸನೆ, ವೇಯrರುಗಳ ಲಗುಬಗೆಯ ಕಾರ್ಯ, ಜೊತೆಗೆ ಪಾತ್ರೆಗಳ ಅನಿಯಮಿತ ಸದ್ದು ! ಇವೆಲ್ಲ ಕಾರಣಗಳಿಂದಲೇ ನಮಗೆ ಕ್ಯಾಂಟೀನಿನೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿರುವುದು. ಇಲ್ಲಿ ಪಾಠ ಕೇಳುವ ಪ್ರಮೇಯವಿಲ್ಲ. ಶಿಸ್ತಿನ ಸಿಪಾಯಿಯಂತಿರುವ ಅಧ್ಯಾಪಕರಿಲ್ಲ. ನಿ¨ªೆ ಮಾಡಿದರೂ ಬಡಿದೆಬ್ಬಿಸುವವರಿಲ್ಲ. ಹಾಗಾಗಿಯೇ ಇದು ನಮ್ಮಂತಹ ವಿದ್ಯಾರ್ಥಿಗಳ ಪಾಲಿಗೆ “ಅತ್ಯಮೂಲ್ಯ ವರದಾನ’ ಎಂದರೆ ತಪ್ಪಾಗಲಾರದು!
ನಿರಂತರವಾಗಿ ಕ್ಲಾಸ್ ಅಟೆಂಡ್ ಮಾಡಿ ತಲೆ ಚಿಟ್ಟು ಹಿಡಿದಂತಾದಾಗ ನಾವು ಬಂಕ್ ಹಾಕಿ ಮೊದಲು ಹೋಗುವ ಸ್ಥಳವೇ- ಕ್ಯಾಂಟೀನ್. ಇಲ್ಲಿ ಯಾಕೆ ಬಂದೆ? ಎಂದು ನಮ್ಮನ್ನು ಪ್ರಶ್ನಿಸುವವರಿಲ್ಲ. ಸೀದಾ ಎದ್ದು ನಡೆದರೂ ತಡೆದು ನಿಲ್ಲಿಸುವವರಿಲ್ಲ. ಬೆಳಗ್ಗೆ ಲೇಟಾಗಿ ಎದ್ದು ಗಡಿಬಿಡಿಯಿಂದ ಅರ್ಧಂಬರ್ಧ ತಿಂದು ಮುಗಿಸಿ ಕಾಲೇಜಿಗೆ ಹೊರಟು ಬಂದಿರುತ್ತೇವೆ. ಹತ್ತು-ಹನ್ನೊಂದು ಗಂಟೆಯಾಗುತ್ತಲೇ ಹೊಟ್ಟೆ ತಾಳವಿಡಲು ಪ್ರಾರಂಭಿಸುತ್ತದೆ. ಏನಾದರೂ ಮಾಡಿ ಹಸಿವು ನೀಗಿಸಲು ಮುಂದಿನ ತರಗತಿ ಬಂಕ್ ಮಾಡಿ ಕ್ಯಾಂಟೀನಿಗೆ ಹೋದರಷ್ಟೇ ನಮ್ಮ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ!
ವಾಸ್ತವದಲ್ಲಿ ಹೇಳುವುದಾದರೆ, ಇದು ಹೆಸರಿಗೆ ಮಾತ್ರ ‘ಉಪಾಹಾರ ಗೃಹ’. ನಮ್ಮಂಥವರಿಗೆ ವಿಶ್ರಾಂತಿ ಧಾಮವೇ ಆಗಿದೆ. ಕಣ್ಣು ತೂಕಡಿಸಿ ಮಂಪರು ಆವರಿಸಿದಾಗ ನಮಗೆ ಚಾಪೆ-ದಿಂಬಿನ ಆವಶ್ಯಕತೆಯೇ ಎದುರಾಗುವುದಿಲ್ಲ. ಯಾಕೆಂದರೆ, ಕ್ಯಾಂಟೀನಿನ ಗದ್ದಲದ ನಡುವೆಯೇ ಟೇಬಲ್ ಮೇಲೆ ತಲೆಯಿಟ್ಟರೆ ನಿದ್ರಾದೇವಿ ವಶವಾಗುವುದು ಮಾಮೂಲಿ ಎಂಬಂತಾಗಿದೆ. ಅದಕ್ಕೆ ದೊಡ್ಡವರು ಬಹಳ ಹಿಂದೆಯೇ ಹೇಳಿ¨ªಾರೆ- “ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿ¨ªೆ’ ಎಂದು. ಜೊತೆಗೆ ಇಲ್ಲಿ ನೋಟ್ಸ… ಬರೆಯುವವರಿಗೇನೂ ಕೊರತೆ ಇಲ್ಲ. ಪ್ರಾಜೆಕ್ಟ್ ವರ್ಕ್, ಕಾಲೇಜಿನಲ್ಲಿ ನಡೆಯುವ ಚಟುವಟಿಕೆಗಳ ನೀಲ ನಕಾಶೆ ಬಿಡಿಸಲು ಇದಕ್ಕಿಂತ ಪ್ರಶಸ್ತ ಜಾಗ ಹುಡುಕಿದರೂ ಸಿಗದು!
ಇತ್ತೀಚೆಗೆ ಸಣ್ಣಪುಟ್ಟ ವಿಷಯಗಳಿಗೆಲ್ಲ ಪಾರ್ಟಿ ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಹೊಸ ಕಾರು ಖರೀದಿಸಿದ್ದಕ್ಕೆ ಪಾರ್ಟಿ ಕೇಳುವವರಿಂದ ಹಿಡಿದು ಸ್ಟೇಷನರಿಯಿಂದ ಒಂದು ಪೆನ್ ತೆಗೆದುಕೊಂಡರೂ ದುಂಬಾಲು ಬಿದ್ದು ಪಾರ್ಟಿ ಕೇಳುತ್ತಾರೆ. ಇಂತಹ ಪಾರ್ಟಿ ಗಿರಾಕಿಗಳ ಮನ ತಣಿಯಲು, ಬೇಕಾದರೆ ನಮ್ಮನ್ನೇ ಎತ್ತಿಕೊಂಡು ಕ್ಯಾಂಟೀನಿಗೆ ಕರೆದೊಯ್ಯುತ್ತಾರೆ. ಅಲ್ಲಿ ಬೇಕು ಬೇಕಾದ್ದನೆಲ್ಲ ಆರ್ಡರ್ ಮಾಡಿ ನಮ್ಮ ಜೇಬಿಗೆ ಸಂಚಕಾರ ತರುತ್ತಾರೆ. ಇಂತಹ ಪಾರ್ಟಿ ಗಿರಾಕಿಗಳು ಬಂದರೆ ಕ್ಯಾಂಟೀನ್ ಮಾಲೀಕನಿಗಂತೂ ಹಬ್ಬವೋ ಹಬ್ಬ!
ಒಟ್ಟಾರೆ ಕಾಲೇಜ್ ಕ್ಯಾಂಟೀನುಗಳು ಕೇವಲ ನಮ್ಮ ಹೊಟ್ಟೆ ತಣಿಸುವುದಲ್ಲದೆ, ಒಂದು ಸಂಪೂರ್ಣ ಮನರಂಜನೆಯ ಪ್ಯಾಕೇಜ್ ಆಗಿದೆ. ಉಪಹಾರ ಗೃಹವು ಕಾಲೇಜ್ ಜೀವನದ ಅವಿಭಾಜ್ಯ ಅಂಗವಾಗಿದೆ. ಕ್ಯಾಂಟೀನಿನಲ್ಲಿ ನಾವೆಷ್ಟೇ ಗದ್ದಲ ಎಬ್ಬಿಸಿದರೂ ಸಹಿಸುವ ಮಾಲೀಕರು ಗದರದೆ, ತಮ್ಮ ಗಿರಾಕಿಗಳನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಮನೆಯನ್ನು ಬಿಟ್ಟರೆ ಕಾಲೇಜ್ ಕ್ಯಾಂಟೀನುಗಳನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಹಾಗಾಗಿ, ಇವುಗಳನ್ನು ನಮ್ಮ “ಎರಡನೆಯ ಮನೆ’ ಎಂದೂ ಕರೆಯಬಹುದು.
ಸುದೀಪ್ ಶೆಟ್ಟಿ ಪೇರಮೊಗ್ರು,
ಎಂಬಿಎ, ಪ್ರವಾಸೋದ್ಯಮ ವಿಭಾಗ, ಮಂಗಳಗಂಗೋತ್ರಿ