Advertisement
ಹೌದು, ಕಳೆದ 2018 ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಆಗ ಒಟ್ಟು ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿದ್ದ ಕಾಂಗ್ರೆಸ್ ಶಾಸಕರು, ನಾಲ್ಕು ಸ್ಥಾನ ಕಳೆದುಕೊಂಡಿದ್ದಾರೆ. ಇದು ಸತತ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಲೋಕಸಭೆ ಕ್ಷೇತ್ರವನ್ನು ಪುನಃ ಹಿಡಿತಕ್ಕೆ ಪಡೆಯಬೇಕೆಂಬ ಕಾಂಗ್ರೆಸ್‌ನ ಲೆಕ್ಕಾಚಾರ, ಕಳೆದ 2019ರ ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲೂ ಬುಡಮೇಲಾಗಿದೆ. ಇಷ್ಟೆಲ್ಲ ಸರಣಿ ಸೋಲುಗಳು ನಡೆದರೂ, ಕಾಂಗ್ರೆಸ್‌ನಲ್ಲಿ ಅವಲೋಕನ, ಆತ್ಮಾವಲೋಕನ ಅಥವಾ ಎಡವಿದ್ದೆಲ್ಲಿ ಎಂಬ ಚರ್ಚೆ ನಡೆದಿರಲಿಲ್ಲ. ಇದೀಗ ರಾಜ್ಯ ರಾಜಕೀಯ ಅನಿಶ್ಚಿತತೆಯ ಮಧ್ಯೆ, ಕೆಪಿಸಿಸಿಯಿಂದ ಸೋಲಿನ ಪರಾಮರ್ಶೆ ನಡೆಸಿ, ವರದಿ ಒಪ್ಪಿಸಲು ಸತ್ಯ ಶೋಧನಾ ಸಮಿತಿ ರಚಿಸಿದ್ದು, ಈ ಸಮಿತಿ, ಜು.17ರಂದು ನಗರಕ್ಕೆ ಬಂದು, ಒಂದು ಇಡೀ ದಿನ ಹಲವರೊಂದಿಗೆ ಚರ್ಚೆ ನಡೆಸಿ, ಕೆಪಿಸಿಸಿಗೆ ವರದಿ ಕೊಡಲಿದೆ.
Related Articles
Advertisement
ಇಂದು ಜಿಲ್ಲೆಗೆ ಬರಲಿರುವ ಸತ್ಯ ಶೋಧನಾ ಸಮಿತಿ, ಪಕ್ಷದ ಕೆಲವು ಹಿರಿಯರೇ ಮಾಡುವ ಒಳ ಒಡೆತದ ತಂತ್ರಗಾರಿಕೆ ಕುರಿತು ಪ್ರಮುಖವಾಗಿ ವರದಿಯಲ್ಲಿ ಉಲ್ಲೇಖೀಸಬೇಕು. ಅಂತಹ ನಾಯಕರಿಗೆ ಪಕ್ಷದಲ್ಲಿ ಜವಾಬ್ದಾರಿ ಅಥವಾ ಯಾವುದೇ ಹುದ್ದೆ ಕೊಡಬಾರದು ಎಂಬ ಒತ್ತಾಯವನ್ನು ಸಮಿತಿ ಎದುರು ಹೇಳಿಕೆ ನೀಡುವುದಾಗಿ ಹಿರಿಯ ಕಾರ್ಯಕರ್ತರೊಬ್ಬರು ಉದಯವಾಣಿಗೆ ತಿಳಿಸಿದರು.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಪಕ್ಷದ ಹಾಲಿ ಜಿಲ್ಲಾ ಅಧ್ಯಕ್ಷರ ಅವಧಿ 10 ವರ್ಷದತ್ತ ಬಂದಿದ್ದು, ಅವರಿಗೆ ಪಕ್ಷದಲ್ಲಿ ಬೇರೊಂದು ಅವಕಾಶ ಕಲ್ಪಿಸಿ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಯುವ ಸಮೂಹ ಇಲ್ಲವೇ ಕ್ರಿಯಾಶೀಲರಿಗೆ ಅವಕಾಶ ಕೊಡಬೇಕು ಎಂಬ ಒತ್ತಡ ಕೇಳಿ ಬರುತ್ತಿದೆ. ಈ ವಿಷಯ, ಜು.17ರಂದು ಸತ್ಯ ಶೋಧನಾ ಸಮಿತಿ ಎದುರೂ ಪ್ರಸ್ತಾಪವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನೀಲಕುಮಾರ ದಡ್ಡಿ, ನಾಗರಾಜ ಹದ್ಲಿ, ಸೇವಾ ದಳ ಘಟಕದ ಜಿಲ್ಲಾ ಸಂಚಾಲಕ ಎನ್.ಬಿ. ಗಸ್ತಿ, ಪ್ರಚಾರ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ ವಾಸನದ ಹಾಗೂ ಸದ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ ಅವರ ಹೆಸರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿವೆ.
•ಶ್ರೀಶೈಲ ಕೆ. ಬಿರಾದಾರ