Advertisement

ರಸ್ತೆಯ ಅಂಚನ್ನೇ ಕಬಳಿಸಿದ ಸಮುದ್ರರಾಜ

12:26 PM Aug 03, 2019 | Suhan S |

ಕಾರವಾರ: ತಾಲೂಕಿನ ದೇವಭಾಗ ಸಮುದ್ರದಂಚಿನಲ್ಲಿ ಕಡಲ್ಕೊರೆತ ಉಂಟಾಗಿದೆ. ಅಂಬಿಗವಾಡ ಎಂಬಲ್ಲಿ ರಸ್ತೆಯನ್ನೇ ಕಬಳಿಸುವ ಹಂತವನ್ನು ತಲುಪಿದ್ದು, ಇನ್ನೆರಡು ದಿನಗಳಲ್ಲಿ ಹೆಚ್ಚಾಗುವ ಲಕ್ಷಣಗಳು ಕಂಡು ಬಂದಿವೆ.

Advertisement

ರಸ್ತೆ ಕಡಲ್ಕೊರೆತಕ್ಕೆ ತುತ್ತಾದರೆ ಜನ ಸಂಚಾರ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಲಿದೆ. ಮಳೆ ಕಡಿಮೆಯಾಗಿದ್ದರೂ ಸಮುದ್ರದ ಅಬ್ಬರ ಕಡಿಮೆಯಾಗಿಲ್ಲ. ಅಲೆಗಳ ಆರ್ಭಟಕ್ಕೆ ಸಮುದ್ರ ತೀರದ ರಸ್ತೆಗಳು ಬಲಿಯಾಗುವ ಲಕ್ಷಣಗಳಿವೆ. ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ತುರ್ತಾಗಿ ಉಸುಕಿನ ಚೀಲಗಳನ್ನಾದರೂ ಸಮುದ್ರ ಕೊರೆತ ಇರುವಲ್ಲಿ ಪೇರಿಸಬೇಕಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಕಡಲ್ಕೊರೆತಕ್ಕೆ ಬೃಹತ್‌ ಬಂಡೆಗಲ್ಲು ಪೇರಿಸಿದ ಸ್ಥಳವೇ ಬಲಿಯಾಗುತ್ತಿದೆ. 100 ಮೀ. ಉದ್ದಕ್ಕೆ ಮತ್ತೆ ಬೃಹತ್‌ ಬಂಡೆಗಳು ಅಥವಾ ರಬ್ಬರ್‌ ತಂತ್ರಜ್ಞಾನದ ತಡಗೋಡೆ ನಿರ್ಮಿಸುವ ಅನಿವಾರ್ಯತೆ ಇದೀಗ ಉಂಟಾಗಿದೆ. ಕಡಲ್ಕೊರೆತದ ಸ್ಥಳಕ್ಕೆ ಮಾಜಿ ಶಾಸಕ ಸತೀಶ್‌ ಸೈಲ್ ಭೇಟಿ ನೀಡಿದ್ದು, ತುರ್ತು ಕ್ರಮಕ್ಕೆ ಬಂದರು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಅಂದಾಜು 17.39 ಕೋಟಿ ರೂ. ನಷ್ಟ: ಜೂನ್‌ ಮತ್ತು ಜುಲೈ ತಿಂಗಳಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ ವಿವಿಧೆಡೆ ಸರ್ಕಾರಿ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯಾಗಿದ್ದು, ಸುಮಾರು 17.39 ಕೋಟಿ ನಷ್ಟವಾಗಿದೆ ಎಂದು ಕಂದಾಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಬಗ್ಗೆ ನಿಖರವಾಗಿ ಇನ್ನಷ್ಟು ವಿವಿರ ಮಾಹಿತಿ ಬರಬೇಕಿದೆ. ಇದು ಪ್ರಥಮ ಮಾಹಿತಿ ಆಧರಿಸಿದ್ದು ಎಂದು ಜಿಲ್ಲಾಡಳಿತ ಹೇಳಿದೆ.

ವಿದ್ಯುತ್‌ ಸ್ಪರ್ಶ, ನೆಲ ಮಟ್ಟದ ಬಾವಿಗಳಿಗೆ ಬೀಳುವುದು, ಪ್ರವಾಹದಲ್ಲಿ ಸಿಕ್ಕಿ ಹೋದ ಘಟನೆ ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ. 16 ಜಾನುವಾರುಗಳು ಮೃತಪಟ್ಟಿವೆ ಎಂದು ಜಿಲ್ಲಾಡಳಿತ ಹೇಳಿದೆ.

Advertisement

ಜುಲೈನಲ್ಲಿ ಈ ಸಲ ಮಳೆ ಆರ್ಭಟ ಜೋರಾಗಿತ್ತು. ಜೊಯಿಡಾ, ಯಲ್ಲಾಪುರ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂನ್‌ನಲ್ಲಿ ಕೊರತೆ ಎನಿಸಿದರೂ, ಜುಲೈನಲ್ಲಿ ಉತ್ತಮ ಮಳೆಯಾಯಿತು ಎಂಬುದು ಕೃಷಿ ಅಧಿಕಾರಿಗಳ ಅಂಬೋಣ.

ಕಂದಾಯ ಇಲಾಖೆ ಅಧಿಕಾರಿಗಳು ಹೇಳುವಂತೆ ಜಿಲ್ಲೆಯಲ್ಲಿ 135.53 ಕಿಮೀ ರಸ್ತೆ ಹಾಳಾಗಿದೆ. ರಸ್ತೆ ಹಾನಿಯೇ 10.75 ಕೋಟಿ ರೂ., 17 ಸೇತುವೆಗಳಿಗೆ ಧಕ್ಕೆಯಾಗಿದ್ದು, ಇದರ ಹಾನಿ 1.24 ಕೋಟಿಯಷ್ಟಾಗಿದೆ. 29 ಖಾಸಗಿ ಕಟ್ಟಡಗಳ ಹಾನಿ 52,32 ಲಕ್ಷ ರೂ.ಗಳಷ್ಟಾಗಿದೆ.

ಹೊನ್ನಾವರ ತಾಲೂಕಿನಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಗಂಜಿ ಕೇಂದ್ರಗಳನ್ನು ಸಹ ತೆರೆಯಲಾಗಿತ್ತು. ಭಾರೀ ಮಳೆ ಪ್ರವಾಹದಿಂದ 66 ರಸ್ತೆಗಳಿಗೆ ಹಾನಿಯಾಗಿದೆ. ಅಂಕೋಲಾದಲ್ಲಿ 19, ಭಟ್ಕಳದಲ್ಲಿ 12, ಕಾರವಾರದಲ್ಲಿ 10, ಮುಂಡಗೋಡ 15, ಸಿದ್ದಾಪುರ 8, ಜೊಯಿಡಾದಲ್ಲಿ 1, ಯಲ್ಲಾಪುರದಲ್ಲಿ 16 ರಸ್ತೆಗಳಿಗೆ ಹಾನಿಯಾಗಿದೆ. ಕುಮಟಾ, ಶಿರಸಿ ತಾಲೂಕುಗಳ ರಸ್ತೆಗಳ ಹಾನಿಯ ಬಗ್ಗೆ ಮಾಹಿತಿ ಇನ್ನೂ ಬಂದಿಲ್ಲ. ಅಂಕೋಲಾ, ಸಿದ್ದಾಪುರಗಳಲ್ಲಿ ತಲಾ 2 ಸೇತುವೆಗಳು, ಯಲ್ಲಾಪುರ 8, ಮುಂಡಗೋಡ 1, ಹೊನ್ನಾವರದಲ್ಲಿ 3 ಸೇತುವೆಗಳಿಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next