Advertisement

ಬಸ್‌ಪಾಸ್‌ ಪಡೆಯಲು ತಪ್ಪದ ವಿದ್ಯಾರ್ಥಿಗಳ ಗೋಳು

02:41 PM Jul 20, 2019 | Team Udayavani |

ತುಮಕೂರು: ಶಾಲಾ-ಕಾಲೇಜುಗಳು ಆರಂಭವಾಗಿ ಎರಡು ತಿಂಗಳು ಕಳೆಯುತ್ತಿದ್ದರೂ ಹೆಚ್ಚಿನ ವಿದ್ಯಾರ್ಥಿ ಗಳಿಗೆ ಬಸ್‌ಪಾಸ್‌ ಇಂದಿಗೂ ಸಿಕ್ಕಿಲ್ಲ. ವಿತರರಣೆಯಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಪ್ರತಿಭಟನೆ ಮೇಲೆ ಪ್ರತಿಭಟನೆ ನಡೆಸುತ್ತಿದ್ದರೂ ವಿದ್ಯಾರ್ಥಿಗಳ ಕೂಗು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕೇಳಿಸಿಕೊಳ್ಳುತ್ತಿಲ್ಲ. ಬಸ್‌ಪಾಸ್‌ ಪಡೆಯಲು ವಿದ್ಯಾರ್ಥಿಗಳ ಗೋಳು ತಪ್ಪಿಲ್ಲ.

Advertisement

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿದ್ಯಾವಂತರಾಗಬೇಕು ಎಂದು ಸರ್ಕಾರ ವರ್ಷಕ್ಕೆ ಇಂತಿಷ್ಟು ಹಣ ಪಡೆದು ಬಸ್‌ಪಾಸ್‌ ನೀಡಿ ವಿದ್ಯಾರ್ಥಿಗಳು ಸರ್ಕಾರಿ ಬಸ್‌ಗಳಲ್ಲಿ ಸಂಚಾರ ಮಾಡಲು ಅನುವು ಮಾಡಿತ್ತು. ವಿದ್ಯಾರ್ಥಿಯು ವಿದ್ಯಾಭ್ಯಾಸ ಮಾಡುವ ಶಾಲಾ ಕಾಲೇಜಿನಿಂದ ದೃಢೀಕರಣ ಪತ್ರ ತೋರಿಸಿದರೆ ಬಸ್‌ಪಾಸ್‌ ದೊರಕು ತಿತ್ತು. ಆದರೆ ಈ ಬಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿಗಳ ಬಸ್‌ಪಾಸ್‌ ಪಡೆಯಲು ರಿಯಾಯಿತಿಗೆ ಅರ್ಜಿ ಸಲ್ಲಿಸಬೇಕು.

ಆನ್‌ಲೈನ್‌ನಲ್ಲಿ ನಿಗದಿತ ವೆಬ್‌ಸೈಟ್ www.ksrtc.in ನಲ್ಲಿ ಅರ್ಜಿ ಸಲ್ಲಿಸಿ ಅದರ ಪ್ರಿಂಟ್ ತೆಗೆದು ಓದುತ್ತಿರುವ ಶಾಲಾ- ಕಾಲೇಜುಗಳಿಗೆ ಸಲ್ಲಿಸಿ ಅಲ್ಲಿ ಅರ್ಜಿ ಪರಿಶೀಲಿಸಿ ಫೋಟೊ ಹಾಗೂ ದಾಖಲಾತಿಗಳ ಮೇಲೆ ಶಾಲಾ ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಬೇಕು. ನಂತರ ಬಸ್‌ ನಿಲ್ದಾಣದ ಪಾಸ್‌ ವಿತರಣಾ ಕೌಂಟರ್‌ನಲ್ಲಿ ಹಣ ಪಾವತಿಸಿ ಬಸ್‌ಪಾಸ್‌ ಪಡೆಯಬೇಕಾಗಿದೆ.

ಬಸ್‌ಪಾಸ್‌ ಸಿಕ್ಕಿಲ್ಲ: ಹಿಂದೆ ಸುಲಭವಾಗಿ ಪಾಸ್‌ ದೊರಕುತಿತ್ತು. ಆಯಾ ಶಾಲಾ-ಕಾಲೇಜುಗಳ ಮೂಲಕವೇ ಬಸ್‌ಪಾಸ್‌ ವಿತರಿಸಬಹುದಾಗಿದ್ದು, ಈಗ ಆನ್‌ಲೈನ್‌ನಲ್ಲಿ ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸುವ ನಿಯಮ ಜಾರಿಗೆ ತಂದಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಬಸ್‌ಪಾಸ್‌ ಪಡೆಯುವುದೇ ಸಮಸ್ಯೆಯಾಗುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಸಿ 10 ದಿನ ಕಳೆದಿದ್ದರೂ ಬಸ್‌ಪಾಸ್‌ ವಿತರಣೆಯಾಗಿಲ್ಲ. ಅಧಿಕಾರಿಗಳು ಗಮನಹರಿಸಿ ಬಸ್‌ಪಾಸ್‌ ವಿತರಿಸಬೇಕು ಎಂದು ವಿದ್ಯಾರ್ಥಿಗಳು ಹೋರಾಟ ಮಾಡಿ ಆಗ್ರಹಿಸಿದರೂ, ಶೇ.60ರಷ್ಟು ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ ಸಿಕ್ಕಿಲ್ಲ.

ಜಾರಿಗೆ ಬರದ ಯೋಜನೆ: 2018-19ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ಸೇರಿದಂತೆ, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವುದಾಗಿ ಘೋಷಿಸಿತ್ತು. ಆದರೆ ಇವತ್ತಿನವರೆಗೂ ಆ ಯೋಜನೆ ಜಾರಿಗೆ ಬಂದಿಲ್ಲ. ಖಾಸಗಿ ಕಾಲೇಜುಗಳ ಡೊನೇಷನ್‌ ಹಾವಳಿ ಮತ್ತು ಶಿಕ್ಷಣ ಮಾರಾಟದ ವಸ್ತುವಾಗಿರುವ ಈ ಪರಿಸ್ಥಿತಿಯಲ್ಲಿ ರಾಜ್ಯದ ಹಿಂದುಳಿದ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರದ ನಿರ್ಲಕ್ಷ್ಯದಿಂದ ಶಿಕ್ಷಣ ವಂಚಿತರಾಗಿದ್ದಾರೆ. ಇಂತಹ ದಿನಗಳಲ್ಲಿ ಹೆಚ್ಚಾಗಿ ಬಸ್‌ಪಾಸ್‌ ಪಡೆಯುತ್ತಿರುವ ವಿದ್ಯಾರ್ಥಿಗಳು ಗ್ರಾಮಿಣ ಪ್ರದೇಶದವರೇ ಆಗಿದ್ದು, ಎಲ್ಲಾ ವರ್ಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಬೇಕಾಗಿದೆ.

Advertisement

ಹಳ್ಳಿಗಳಿಂದ ತಾಲೂಕು, ಪಟ್ಟಣಗಳಿಗೆ ಶಿಕ್ಷಣ ಪಡೆಯಲು ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಿಸುವುದರಿಂದ ಶಿಕ್ಷಣಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಕಳೆದ ವರ್ಷ ಹಣವಿಲ್ಲವೆಂಬ ನೆಪವೊಡ್ಡಿದ ರಾಜ್ಯ ಸರ್ಕಾರ ಈ ವರ್ಷವೂ ವಿದ್ಯಾರ್ಥಿಗಳ ಬೇಡಿಕೆ ಮೂಲೆಗುಂಪು ಮಾಡಿದೆ. ಕೇವಲ ಅಧಿಕಾರ ಉಳಿಸಿಕೊಳ್ಳುವ ಯೋಚನೆಯಲ್ಲಿರುವ ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳ ಕೂಗು ಕೇಳಿಸುತ್ತಿಲ್ಲ ಎಂಬುದು ಪ್ರಜ್ಞಾವಂತ ಆರೋಪವಾಗಿದೆ.

ವಿದ್ಯಾರ್ಥಿಗಳ ಬಸ್‌ಪಾಸ್‌ ಶುಲ್ಕಪಟ್ಟಿ: ಪ್ರಾಥಮಿಕ ಶಾಲೆಯ ಸಾಮಾನ್ಯ ವಿದ್ಯಾರ್ಥಿಗಳಿಗೆ 150ರೂ., ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ 150 ರೂ., ಪ್ರೌಢಶಾಲಾ ಬಾಲಕಿಯರಿಗೆ (ಸಾಮಾನ್ಯ) 550ರೂ., ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ 150 ರೂ., ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ (ಸಾಮಾನ್ಯ)750ರೂ., ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ 150 ರೂ., ಪಿಯುಸಿ, ಪದವಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ (ಸಾಮಾನ್ಯ) 1050 ರೂ., ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ 150 ರೂ., ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ 1350 ರೂ., ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ 150 ರೂ., ವೃತ್ತಿಪರ ಸಾಮಾನ್ಯ ವಿದ್ಯಾರ್ಥಿಗಳಿಗೆ 1550 ರೂ., ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ 150 ರೂ., ಐಟಿಐ ವಿದ್ಯಾರ್ಥಿಗಳಿಗೆ 12 ತಿಂಗಳಿಗೆ 1310 ರೂ., ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ 150 ರೂ. ಶುಲ್ಕ ನಿಗದಿಪಡಿಸಲಾಗಿದೆ.

 

● ಚಿ.ನಿ ಪುರುಷೋತ್ತಮ

Advertisement

Udayavani is now on Telegram. Click here to join our channel and stay updated with the latest news.

Next