ಹಾಸನ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಮೀಸಲಾಗಿರುವ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಗೆ ಆ ಜನಾಂಗದವರ ಹೊರತು ಬೇರೆ ಜನಾಂಗದವರು ಫಲಾನುಭಗಳಾಗುವಂತಿಲ್ಲ, ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಗಮನ ಹರಿಸಬೇಕೆಂದು ಶಾಸಕ ಶಿವಲಿಂಗೇಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಗಳಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಫಲಾನುಭವಿಗಳನ್ನು ಜನಸಂಖ್ಯಾ ಆಧಾರದಲ್ಲಿ ಅವಕಾಶ ನೀಡಿ ಆಯ್ಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒತ್ತಡ ಹಾಕದಿರಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈತರಿಗೆ ನೀಡುತ್ತಿರುವ ಬಿತ್ತನೆ ಬೀಜಗಳು ಮತ್ತು ಹನಿ ನೀರಾವರಿಗಾಗಿ ನೀಡುವ ಪೈಪುಗಳು ಗುಣಮಟ್ಟದ್ದಾಗಿಲ್ಲ ಹಾಗಾಗಿ ನಿರ್ದಿಷ್ಟ ಕಂಪನಿಗಳಿಂದಲೇ ಪಡೆಯುವಂತೆ ಅಧಿಕಾರಿಗಳು ರೈತರಿಗೆ ಒತ್ತಡ ಹಾಕದೆ ಗುಣಮಟ್ಟ ಪರೀಕ್ಷಿಸಿ ಪಡೆದುಕೊಳ್ಳುವ ಅವಕಾಶವನ್ನು ರೈತರಿಗೆ ನೀಡಬೇಕು. ಜಿಲ್ಲಾಸ್ಪತ್ರೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಿರುವ ಉಚಿತ ಚಿಕಿತ್ಸೆಗಳ ಬಗ್ಗೆ ಮಾಹಿತಿಯಿಲ್ಲ ಹಾಗಾಗಿ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಚಿಕಿತ್ಸೆ ಪಡೆಯಲು ಜಾತಿ ಪ್ರಮಾಣ ಪತ್ರ ಕಡ್ಡಾಯ ಮಾಡುವಂತೆ ಹಿಮ್ಸ್‌ನ ಅಧಿಕಾರಿಗಳಿಗೆ ಶಾಸಕ ಶಿವಲಿಂಗೇಗೌಡ ನಿರ್ದೇಶನ ನೀಡಿದರು.
ಫಲಾನುಭವಿಗಳ ಸಂಖ್ಯೆ ಹೆಚ್ಚಿಸಿ: ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ರಸ್ತೆ ಬದಿಗಳಲ್ಲಿ ಕೃಷಿ ಹೊಂಡ ನಿರ್ಮಿಸುವುದನ್ನು ತಪ್ಪಿಸಬೇಕು. ಗಂಗಾ ಕಲ್ಯಾಣ ಯೋಜನೆ, ಹನಿ ನಿರಾವರಿ ಯೋಜನೆಯನ್ನು ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ತಲುಪಿಸಬೇಕು. ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರುದ್ಯೋಗಿ ಯುವಕರಿಗಿರುವ ಟ್ಯಾಕ್ಸಿ ಯೋಜನೆಯಲ್ಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಲಾತಂಡಗಳಿಗೆ ಪ್ರೋತ್ಸಾಹ: ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಲಭ್ಯವಿರುವ ಅನುದಾನವನ್ನು ಎಲ್ಲಾ ತಾಲೂಕುಗಳಿಗೆ ಸಮವಾಗಿ ಹಂಚಬೇಕು. ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಅವರನ್ನು ಗುರುತಿಸಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿಗಳು ನಿರ್ವಹಿಸಬೇಕು. ಜನಪದ ಕಲೆಗಳನ್ನು ಗುರುತಿಸಿ ಜೀವ ತುಂಬುವ, ಕಲಾ ತಂಡಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಿ.ಎ ಪರಮೇಶ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಪಿಡಿಒಗಳಿಗೆ ಜವಾಬ್ದಾರಿ: ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಧಿಕಾರಿಗಳು ಜಂಟಿ ಪರಿಶೀಲನೆ ಮಾಡಿ ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಪಿಡಿಒಗಳಿಗೆ ನೀಡಬೇಕು. ಕಾಲಕಾಲಕ್ಕೆ ಕುಡಿಯುವ ನೀರಿನ ಗುಣಮಟ್ಟ ಪರಿಶೀಲಿಸಬೇಕು. ಸ್ವತ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯಗಳನ್ನು ಪಡೆದಿರುವ ಫಲಾನುಭವಿಗಳು ಕಡ್ಡಾಯವಾಗಿ ಅವುಗಳನ್ನು ಬಳಸುವಂತೆ ಅರಿವು ಮೂಡಿಸಿ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವುದರ ಜತೆಗೆ ಶಿಸ್ತು ಕ್ರಮ ಜರುಗಿಸಲಾಗುವುದು.
-ಆರ್.ಗಿರೀಶ್, ಜಿಲ್ಲಾಧಿಕಾರಿ