Advertisement

ಔಷಧ ಮಾರುವವರ ಹಾವಳಿ; ವೈದ್ಯರ ಸಲಹೆ ಪಡೆದೇ ಔಷಧ ಸೇವಿಸಿ

06:01 PM Jun 30, 2023 | Team Udayavani |

ಹೊನ್ನಾವರ: ಜಿಲ್ಲೆಯಲ್ಲಿ ನಕಲಿ ವೈದರ ಹಾವಳಿಗಿಂತ ಹೆಚ್ಚಾಗಿ ಟಾನಿಕ್‌, ಆರೋಗ್ಯವರ್ಧಕ ಔಷಧ ಎಂದು
ಮನೆ ಮನೆಗೆ ಹೋಗಿ ಮಾರುವವರ ಹಾವಳಿ ಹೆಚ್ಚಾಗಿದೆ. ಕೆಲ ನಿವೃತ್ತ ಶಿಕ್ಷಕರು, ಯಾವುದೇ ನಿರ್ದಿಷ್ಟ ಕೆಲಸವನ್ನು ಶ್ರಮಪಟ್ಟು ಮಾಡಲಾರದ ವಾಚಾಳಿಗಳು ಇಂತಹ ಔಷಧಗಳನ್ನು ಟಾನಿಕ್‌, ಆರೋಗ್ಯವರ್ಧಕ ಎಂದು ಮಾರಾಟ ಮಾಡುತ್ತಿದ್ದಾರೆ.

Advertisement

“ಡಾಕ್ಟರ್‌ ಹತ್ರ ಕೇಳಬೇಡಿ, ಅವರು ನಿಮ್ಮನ್ನು ಹೆದರಿಸುತ್ತಾರೆ. ಅವರ ಬಿಸ್ನೆಸ್‌ ಹಾಳಾಗಬಾರದು ಎಂದು ಈ ಔಷಧ ಸುಳ್ಳು ಎನ್ನುತ್ತಾರೆ. ಒಮ್ಮೆ ತೆಗೆದುಕೊಳ್ಳಿ ಡಯಾಬಿಟಿಸ್‌, ಹೃದಯ ಕಾಯಿಲೆ ಮಾತ್ರವಲ್ಲ ಕ್ಯಾನ್ಸರ್‌ ಕೂಡ ಗುಣವಾಗುತ್ತದೆ’ ಎಂದು ಹೇಳುತ್ತ ಔಷಧ ಮಾರುವವರ ಸಂಖ್ಯೆ ಹೆಚ್ಚಿದೆ. ನಿತ್ಯ ಪ್ರತಿ ತಾಲೂಕಿಗೆ ಓಮ್ನಿ ತುಂಬ ಇಂತಹ ಔಷಧಗಳು ಬರುತ್ತಿವೆ. ಇದನ್ನು ಮಾರುವವರಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುತ್ತದೆ. ಉತ್ತರ ಭಾರತದ ಕಂಪನಿಗಳು ಉತ್ತರ ಕನ್ನಡದಲ್ಲಿ ಬಡವರ ಜೀವವನ್ನು ಅಪಾಯಕ್ಕೊಡ್ಡುತ್ತಿವೆ. ಇದರ ಮಾರಾಟಕ್ಕೆ ಆರೋಗ್ಯ ಇಲಾಖೆ ನಿಯಮಾವಳಿ ಅಡಿ ಬರುತ್ತದೆಯೇ? ಇವುಗಳ ನಿಯಂತ್ರಣ ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.

ಈ ಕುರಿತು ತಾಲೂಕು ವೈದ್ಯಾಧಿಕಾರಿ ಉಷಾ ಹಾಸ್ಯಗಾರ ಹೇಳುವಂತೆ ನಕಲಿ ವೈದ್ಯರ ಮೇಲೆ ದೂರು ಬಂದರೆ ಪತ್ತೆ ಮಾಡಿ ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ನಕಲಿ ಔಷಧ ಮತ್ತು ಔಷಧದ ಹೆಸರಿನಲ್ಲಿ ನಕಲಿ ವಸ್ತುಗಳನ್ನು, ಟಾನಿಕ್‌ಗಳನ್ನು ನಿಯಂತ್ರಿಸಲು ಕಾನೂನಿನಲ್ಲಿ ನಮಗೆ ಯಾವುದೇ ಅವಕಾಶವಿಲ್ಲ. ಆರೋಗ್ಯ ಇಲಾಖೆ ಔಷಧ ನಿಯಂತ್ರಣ ಮತ್ತು ಗುಣಮಟ್ಟ ಇಲಾಖೆ ಇದನ್ನು ತಡೆಯಬೇಕಾಗುತ್ತದೆ.

ವಿದ್ಯಾವಂತರಾದವರು, ನಾಲಿಗೆ ಚುರುಕಿದ್ದವರು, ಜೀವನ ನಿರ್ವಹಣೆಗೆ ತೊಂದರೆ ಇಲ್ಲದವರು ಹಣದ ಆಸೆಗಾಗಿ ಇಂತಹ ಕೆಲಸ ಮಾಡುತ್ತಿರಬಹುದು. ಈ ಬಗ್ಗೆ ತಮ್ಮ ಬಳಿ ಯಾವುದೇ ದೂರು ಬಂದಿಲ್ಲ. ಯಾವ ನಿಯಮಾವಳಿ ಅಡಿ ಇಂತಹುದನ್ನು ತಡೆಯಬಹುದು ಎಂದು ತಿಳಿದು ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಾದ್ಯಂತ ಎಲ್ಲ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಎಲ್ಲಾ ತಾಲೂಕುಗಳಲ್ಲಿ ತಾಲೂಕು ಆಸ್ಪತ್ರೆ ಸುಸಜ್ಜಿತವಾಗಿದೆ. ಜಿಲ್ಲೆಯಲ್ಲೇ ಮೆಡಿಕಲ್‌ ಕಾಲೇಜಿದೆ. ಮಾತ್ರವಲ್ಲ ಪ್ರಧಾನ ಮಂತ್ರಿಗಳ ಆಯುಷ್ಮಾನ್‌ ಭಾರತ, ರಾಜ್ಯ ಸರಕಾರದ ವಿಮಾ ಯೋಜನೆ, ಯಶಸ್ವಿನಿ ಮಾತ್ರವಲ್ಲ ಧರ್ಮಸ್ಥಳ ಯೋಜನೆಯ ಉಚಿತ ಚಿಕಿತ್ಸೆ ನೀಡುವ ಆರೋಗ್ಯ ಸುರಕ್ಷಾ ಮೊದಲಾದ ಯೋಜನೆಗಳಿವೆ. ಇಷ್ಟೆಲ್ಲಾ ಸೌಲಭ್ಯಗಳು ಉಚಿತವಾಗಿ ಎಲ್ಲರಿಗೆ ಲಭ್ಯವಿರುವಾಗ ತಜ್ಞ ವೈದ್ಯರ ಚಿಕಿತ್ಸೆ ಸಿಗುತ್ತಿರುವಾಗ ಯಾಕೆ ನಕಲಿ ಔಷಧ, ಟಾನಿಕ್‌ ನೀಡುವವರ ಆರೋಗ್ಯವರ್ಧಕ, ರೋಗ ನಿವಾರಕವನ್ನು ದುಬಾರಿ ಹಣ ಕೊಟ್ಟು ಜನ ಕೊಳ್ಳುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.

Advertisement

ಇಂತಹ ಔಷಧಗಳು ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಸರಕಾರಿ ಆಸ್ಪತ್ರೆ ಔಷಧ ವಿಭಾಗದ ಮುಖ್ಯಸ್ಥರಾದ ಹೃದಯ ವೈದ್ಯ ಡಾ| ಪ್ರಕಾಶ ನಾಯ್ಕ ಮಾತನಾಡಿ, ವೈದ್ಯಕೀಯವನ್ನು ಹತ್ತಾರು ವರ್ಷ ಓದಿ ಬರುತ್ತಾರೆ. ವೈದ್ಯಕೀಯ ಔಷಧ ಶಾಸ್ತ್ರದ ತಜ್ಞರು ಸಿದ್ಧಪಡಿಸಿದ ಔಷಧಗಳು ಜಾಗತಿಕ ಮಟ್ಟದಲ್ಲಿ ತಪಾಸಣೆಗೆ ಒಳಪಟ್ಟು ಮಾನ್ಯತೆ ಪಡೆದಿರುತ್ತವೆ. ಬೇಕಾದಷ್ಟು ಔಷಧಗಳು, ಹೊಸ ಹೊಸ ಔಷಧಗಳು ಲಭ್ಯವಿವೆ. ಇವುಗಳನ್ನೆಲ್ಲ ವೈಜ್ಞಾನಿಕವಾಗಿ ಸಿದ್ಧಪಡಿಸಲಾಗುತ್ತದೆ. ತಜ್ಞ ವೈದ್ಯರಿಂದ ಇವುಗಳನ್ನು ಪಡೆಯಬೇಕು.

ವೈದ್ಯರು ಬರೆದ ಔಷಧ ಚೀಟಿ ಇಲ್ಲದೇ ಅಂಗಡಿಯವರು ಔಷಧ ಕೊಡಬಾರದು. ನೇರವಾಗಿ ಅಂಗಡಿಯವರಿಗೆ ಹೇಳಿ ಔಷಧ ಖರೀದಿಸುವುದು ತಪ್ಪು. ಈಗ ಸರಕಾರಿ ಆಸ್ಪತೆಯಲ್ಲಿ ಉಚಿತ ಔಷಧ, ಜನೌಷಧಕೇಂದ್ರದಲ್ಲಿ ಕಡಿಮೆ ಬೆಲೆಯಲ್ಲಿ ಔಷಧ ಸಿಗುತ್ತದೆ.

ಔಷಧ ಕೊಟ್ಟು ರೋಗಿಯನ್ನು ಗುಣಮುಖನನ್ನಾಗಿ ಮಾಡುವ ಟಾನಿಕ್‌ ಕೊಟ್ಟು ಬಲಪಡಿಸುವ ಜವಾಬ್ದಾರಿ ನಮಗಿರುತ್ತದೆ. ಹೀಗಿರುವಾಗ ದುಡ್ಡಿನ ಹಪಾಹಪಿತನಕ್ಕೆ ಬೇರೆಯವರ ಜೀವವನ್ನು ಅಪಾಯಕ್ಕೊಡ್ಡುವ ಹೆಸರಿಲ್ಲದ ಕಂಪನಿಯ, ಅರ್ಹತೆ ಇಲ್ಲದ ಮಾರಾಟಗಾರರಿಂದ ದುಬಾರಿ ದುಡ್ಡಿನಲ್ಲಿ ಖರೀದಿಸಿಸುವುದು ಜೀವಕ್ಕೆ ಅಪಾಯ ತಂದುಕೊಂಡಂತೆ. ತಿಳಿದವರೇ ಇಂತಹ ಔಷಧ
ಮಾರಾಟ ಮಾಡುವುದು, ಖರೀದಿಸುವುದು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿದೆಯಂತೆ. ಜನ ಜಾಗೃತರಾಗಬೇಕು. ಮರಳುಗೊಳಿಸುವ ಮಾತಿಗೆ ಜೀವ ಕಳೆದುಕೊಳ್ಳಬಾರದು ಎಂದು ಅವರು ಎಚ್ಚರಿಸಿದ್ದಾರೆ.

*ಜೀಯು

Advertisement

Udayavani is now on Telegram. Click here to join our channel and stay updated with the latest news.

Next