Advertisement
ನನಗೂ ಅನಿವಾರ್ಯವಾಗಿ ಸ್ಕೂಟರ್ ಕಲಿಯಲೇಬೇಕಾಯಿತು. ನಾನು ಹೆರಿಗೆ ರಜೆಯಲ್ಲಿರುವ ಸಂದರ್ಭದಲ್ಲಿ ನನಗೆ ಹೆಚ್ಚುವರಿ ಶಿಕ್ಷಕಿ ಎಂಬ ನೆಲೆಯಲ್ಲಿ ಬೇರೆ ಶಾಲೆಗೆ ವರ್ಗಾವಣೆಯಾಯ್ತು. ಮೊದಲಿದ್ದ ಶಾಲೆಯ ಕಡೆಗೆ ಐದು ನಿಮಿಷಕ್ಕೊಂದರಂತೆ ಬಸ್ಸುಗಳಿದ್ದವು. ಸ್ಕೂಟರಿನ ಬಗ್ಗೆ ಚಿಂತಿಸುವ ಅಗತ್ಯವೂ ನನಗಿರಲಿಲ್ಲ. ಹೊಸ ಶಾಲೆಯ ಕಡೆಗೆ ಅರ್ಧ ಗಂಟೆಗೊಂದು ಬಸ್ಸು. ಸಣ್ಣ ಮಗುವನ್ನು ಸಂಭಾಳಿಸಿ, ಮನೆಕೆಲಸ ಮುಗಿಸಿ ಹೊರಡುವಾಗ ಬಸ್ಸು ತಪ್ಪುತ್ತಿತ್ತು. ಮುಖ್ಯ ಶಿಕ್ಷಕರು, ‘ಸ್ವಲ್ಪ ಬೇಗ ಬರಲು ಪ್ರಯತ್ನಿಸಿ’ ಎಂದು ಆಗಾಗ ಹೇಳುತ್ತಿದ್ದರು. ತಡವಾಗಿ ಹೋಗುವುದು ನನಗೂ ಕಿರಿಕಿರಿಯೆನಿಸುತ್ತಿತ್ತು. ಬಸ್ಸು ತಪ್ಪಿದ ಮೇಲೆ ಮುಂದಿನ ಬಸ್ಸಿಗಾಗಿ ಕಾಯುವ ಸಮಯ ನನಗೆ ಮುಳ್ಳು ಚುಚ್ಚಿದಂತಾಗುತ್ತಿತ್ತು. ಒಮ್ಮೊಮ್ಮೆ ಟ್ಯಾಕ್ಸಿ ಸರ್ವಿಸ್ ಕಾರು ಸಿಗುತ್ತಿತ್ತು. ನನ್ನ ಶಾಲೆಯಿರುವ ಊರು ಕೊನೆಯ ಸ್ಟಾಪ್ ಆದ ಕಾರಣ ನಾನು ಅಥವಾ ಅಲ್ಲಿ ಇಳಿಯುವ ಯಾರನ್ನೇ ಆಗಲಿ ಡ್ರೈವರಿನ ಪಕ್ಕ ಕುಳಿತುಕೊಳ್ಳಿಸುತ್ತಿದ್ದರು. ಅವರು ಗೇರ್ ಬದಲಿಸುವಾಗ ನಮಗೆ ಇರಿಸುಮುರಿಸಾಗುತ್ತಿತ್ತು. ಇನ್ನು ಕೆಲವೊಮ್ಮೆ ಹಿಂದಿನ ಸೀಟೇನೋ ಸಿಗುತ್ತಿತ್ತು. ಆದರೆ, ಹೆಚ್ಚು ಜನರಿರುವ ಕಾರಣ ನಮ್ಮ ತೊಡೆಯ ಮೇಲೆ ಇನ್ನೊಬ್ಬ ಮಹಿಳೆಯನ್ನು ಕುಳಿತುಕೊಳ್ಳಿಸಬೇಕಿತ್ತು ಅಥವಾ ನಾನು ಅವರ ತೊಡೆಯಲ್ಲಿ ಕುಳಿತಿರಬೇಕಿತ್ತು. ಹೇಗಿದ್ದರೂ ಇಳಿಯುವಾಗ ಕಾಲು ಮರಗಟ್ಟಿದಂತಾಗಿ ನಡೆಯಲು ಕಷ್ಟವಾಗುತ್ತಿತ್ತು. ಇನ್ನು ಮನೆಯಿಂದ
Related Articles
Advertisement
ನನಗೆ ಮೂವರು ಮಕ್ಕಳು. ಸರ್ವಿಸ್ ಆಟೋಕ್ಕೆ ಕೈ ತೋರಿಸಿದರೆ ಕೆಲವರು ನಿಲ್ಲಿಸದೇ ಹೋಗುತ್ತಿದ್ದರು. ಮಕ್ಕಳು ಕುಳಿತರೆ ಅವರಿಗೆ ಸೀಟು ವೇಸ್ಟ್ ಆಗತ್ತದೆಂಬುದೇ ಕಾರಣ. ತಡವಾಗಿ ಹೊರಟಾಗ ಸುಲಭವಾಗಿ ದೊರೆಯದ ಆಟೋದಿಂದಾಗಿ ಮತ್ತಷ್ಟು ತಡವಾಗುತ್ತಿತ್ತು. ಆದರೆ, ಯಾವಾಗ ಸ್ಕೂಟರ್ ಬಂತೋ ನನಗೆ ರೆಕ್ಕೆ ಬಂದಂತಾಯಿತು. ನಾನು ವಾಹನಕ್ಕಾಗಿ ಕಾಯಬೇಕಿಲ್ಲ. ಇಕ್ಕಟ್ಟಿನಲ್ಲಿ ಕುಳಿತು ಪ್ರಯಾಣಿಸಬೇಕಾಗಿಲ್ಲ. ಅಸಭ್ಯ ವರ್ತನೆ ತೋರುವ ಸಹಪ್ರಯಾಣಿಕರ ಬಗ್ಗೆ ಭಯವಿಲ್ಲ. ನನ್ನದೇ ಸ್ವಾತಂತ್ರ್ಯದ ಸ್ವರ್ಗದಲ್ಲಿ ವಿಹರಿಸುವ ಖುಷಿ ನನ್ನದಾಯಿತು. ಒಂದು ನಿಮಿಷ ಅಥವಾ ಸೆಕೆಂಡಿನ ವ್ಯತ್ಯಾಸದಲ್ಲಿ ಬಸ್ಸು ತಪ್ಪುವಾಗ ಆಗುವ ಯಾತನೆಯನ್ನೂ ಅನುಭವಿಸಬೇಕಿಲ್ಲ. ಚಿಲ್ಲರೆ ಹಣವನ್ನು ಪರ್ಸ್ ಲ್ಲಿಟ್ಟುಕೊಳ್ಳಬೇಕಾಗಿಲ್ಲ. ನಾನು ಹೊರಗೆ ಹೊರಡುವ ಸಮಯವನ್ನು ಸಾರ್ವಜನಿಕ ವಾಹನ ನಿರ್ಧರಿಸದೇ ನಾನೇ ನಿರ್ಧರಿಸುವ ಸುಖವೇನು ಸಾಮಾನ್ಯದ್ದೆ? ಮಕ್ಕಳನ್ನು ಡ್ರಾಯಿಂಗ್, ಸಂಗೀತ, ನೃತ್ಯ ಮುಂತಾದ ತರಗತಿಗಳಿಗೆ ಸೇರಿಸಲು ನನ್ನ ವಾಹನದ ಸಹಕಾರದಿಂದಲೇ ಸಾಧ್ಯವಾಯಿತೆನ್ನಬಹುದು. ಸುತ್ತಮುತ್ತಲಿನ ಸುಂದರ ಪರಿಸರ ವೀಕ್ಷಿಸುತ್ತ್ತ, ಸ್ವಚ್ಛ ಗಾಳಿ ಸೇವಿಸುತ್ತ ಗ್ರಾಮೀಣ ಭಾಗದಲ್ಲಿರುವ ನನ್ನ ಶಾಲೆಯತ್ತ ಪ್ರಯಾಣಿಸುವಾಗ ಆಕಾಶವೊಂದೇ ನನ್ನ ಸ್ವಾತಂತ್ರ್ಯಕ್ಕೂ ಸಂತೋಷಕ್ಕೂ ಎಲ್ಲೆ ಎಂದೆನಿಸುತ್ತದೆ.
ಯಾರ ಮಕ್ಕಳು ಸಹಪಠ್ಯ ವಿಷಯಗಳ ತರಬೇತಿ ಪಡೆಯುತ್ತಾರೋ ಅವರೆಲ್ಲರ ಅಮ್ಮಂದಿರಲ್ಲೂ ಸ್ಕೂಟರ್ ಇದ್ದೇ ಇರುತ್ತದೆ. ನೃತ್ಯ, ಸಂಗೀತ ಮುಂತಾದ ತರಗತಿಗಳು ನಡೆಯುವಲ್ಲಿ ಮಕ್ಕಳನ್ನು ಕರೆತರುವವರು ಅಮ್ಮಂದಿರೇ. ಅದೂ ಸ್ಕೂಟರಿನಲ್ಲಿ. ವಾಹನ ಸೌಕರ್ಯದ ಕೊರತೆಯಿರುವ ಕಡೆಗಳಲ್ಲಂತೂ ದ್ವಿಚಕ್ರ ವಾಹನ ಚಾಲನೆ ಮಹಿಳೆಯರಿಗೆ ಅನಿವಾರ್ಯ ಎನಿಸಿಬಿಟ್ಟಿದೆ. ಆದರೆ, ಕೆಲವು ಮಹಿಳೆಯರು ದ್ವಿಚಕ್ರವಾಹನ ಚಾಲನೆ ಮಾಡುವಾಗ ಹೆಚ್ಚು ವೇಗವಾಗಿ ಹೋಗುವುದಿದೆ. ಕೆಲವರು ಗಂಡಸರಿಗಿಂತ ತಾವೇನೂ ಕಡಿಮೆಯಿಲ್ಲ ಎಂಬಂತೆ ಮೊಬೈಲಲ್ಲಿ ಮಾತನಾಡುತ್ತ ಚಾಲನೆ ಮಾಡುತ್ತಾರೆ. ಹೆಲ್ಮೆಟ್ ಧರಿಸದೇ ಹೋಗುತ್ತಾರೆ. ಇದರಿಂದ ಆಪತ್ತನ್ನು ಆಹ್ವಾನಿಸಿದಂತಾಗುತ್ತದೆ. ಸುರಕ್ಷತೆಯ ನಿಯಮಗಳನ್ನು ಕಡೆಗಣಿಸಿ ಚಾಲನೆ ಮಾಡುವುದು ಸಾಹಸವಲ್ಲ, ಅಪರಾಧ. ಹಿತಮಿತವಾದ ವೇಗದಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿ ಚಾಲನೆ ಮಾಡುವುದು ಅತ್ಯಗತ್ಯ. ಹಲವು ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಿ ಚಾಲನೆ ಮಾಡುತ್ತಾರೆ. ಅಂಥ ಸಂದರ್ಭ ಗಳಲ್ಲಿ ಸೀರೆಯ ಸೆರಗು ಅಥವಾ ಚೂಡಿದಾರದ ಶಾಲನ್ನು ಗಾಳಿಯಲ್ಲಿ ಹಾರದಂತೆ ಕಟ್ಟಿಕೊಳ್ಳುವುದು ಅಗತ್ಯ. ಹಾಗೆಯೇ ಸೀರೆ ಕಾಲಿಗೆ ತೊಡರಿ ತೊಂದರೆಯಾಗದಂತೆ ಎತ್ತಿಕಟ್ಟುವುದೂ ಅಗತ್ಯ. ಇಲ್ಲದಿದ್ದರೆ ಗಾಡಿಯ ಚಕ್ರಕ್ಕೆ ಬಟ್ಟೆ ಸಿಲುಕಿ ಚಾಲನೆ ಮಾಡುವವರು ನೆಲಕ್ಕೆಸೆಯಲ್ಪಡುವ ಅಥವಾ ಶಾಲು ಕುತ್ತಿಗೆಗೆ ಬಿಗಿಯಲ್ಪಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ವಾಹನ ಚಾಲನೆಯಲ್ಲಿ ಮಹಿಳೆಯರು ಅಗತ್ಯ ಸುರಕ್ಷಾ ಕ್ರಮಗಳನ್ನು ವಹಿಸಬೇಕು. ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಜಾಕೆಟ್ ಧರಿಸುವುದೂ ಉತ್ತಮ.
ಎಲ್ಲಿಗಾದರೂ ಹೋಗಬೇಕಾದರೆ ಗಂಡನ ಬಳಿ ಗೋಗರೆಯುವ ಕಷ್ಟವಾಗಲೀ, ಜನರು ತುಂಬಿ ತುಳುಕುವ ವಾಹನದಲ್ಲಿ ಉಸಿರುಗಟ್ಟಿ ಪ್ರಯಾಣಿಸುವ ಕಷ್ಟವಾಗಲೀ ಇಲ್ಲದಂತೆ ನನ್ನಂತಹ ಮಹಿಳೆಯರನ್ನು ಕಾಪಾಡುವ ಸ್ಕೂಟರ್ ನಮಗೆ ಕೊಟ್ಟದ್ದು ನಿಜಕ್ಕೂ ಸ್ವಾತಂತ್ರ್ಯವಲ್ಲವೆ?
ಜೆಸ್ಸಿ ಪಿ. ವಿ.