Advertisement
ಮಹಾನಗರ: ಬ್ರಿಟಿಷರ ಕಾಲದಲ್ಲಿ ಜೈಲಿಗೆ ಹೋದವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಿರ್ಮಾಣಗೊಂಡ ವಿದ್ಯಾದೇಗುಲವಿದು. ಶತಮಾನ ದಾಟಿದ ಈ ಕನ್ನಡ ಶಾಲೆಯಲ್ಲೀಗ 62 ಮಂದಿ ಮಕ್ಕಳು ಓದುತ್ತಿದ್ದಾರೆ. ನಗರದ ಹೃದಯಭಾಗವಾದ ಹಂಪನಕಟ್ಟೆಯಲ್ಲಿದೆ ಸರಕಾರಿ ಅಭ್ಯಾಸಿ ಪ್ರೌಢಶಾಲೆ. 1906ರಲ್ಲಿ ಪ್ರಾಥಮಿಕ ಶಾಲೆಯಾಗಿ ಆರಂಭವಾದ ಈ ಶಾಲೆಗೀಗ 113 ವರ್ಷ. ಬ್ರಿಟಿಷರು ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ಮಂಗಳೂರು, ಕಾಸರಗೋಡು ಭಾಗದಲ್ಲಿಯೂ ನಡೆದಿದ್ದವು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲಿಗೆ ಹೋದವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರಕಾರಿ ಅಭ್ಯಾಸಿ ಶಾಲೆಯನ್ನು ಆರಂಭಿಸಲಾಗಿತ್ತು.
2006ರಲ್ಲಿ ಸರಳವಾಗಿ ಶಾಲೆಯಲ್ಲಿ ಶತಮಾನೋತ್ಸವವನ್ನು ಆಚರಿಸಲಾಗಿದೆ. ಶಾಲೆ ಆರಂಭವಾದಾಗ 1ರಿಂದ 5ನೇ ತರಗತಿವರೆಗೆ ಇದ್ದರೆ, ಬಳಿಕ ಪ್ರಾಥಮಿಕ ಶಾಲೆಯನ್ನು ಸಂಪೂರ್ಣ ಮುಚ್ಚಿ 1964ರಲ್ಲಿ ಪ್ರೌಢಶಾಲೆಯನ್ನು ಆರಂಭಿಸಲಾಗಿದೆ. ಪ್ರಸ್ತುತ 8, 9, 10 ನೇ ತರಗತಿಗಳಿಗೆ ಬೋಧನೆ ನಡೆಯುತ್ತಿದೆ. ಆದರೆ ಪ್ರಾಥಮಿಕ ಶಾಲೆ ಮುಚ್ಚಿರುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಮಕ್ಕಳ ಕೊರತೆಯಿಂದ ಆಗಿರಬಹುದು ಎನ್ನುತ್ತಾರೆ ಶಾಲೆಯ ಶಿಕ್ಷಕರು. ಆರಂಭಿಕ ಹಂತದಲ್ಲಿ ಹಂಪನಕಟ್ಟೆ, ಪೊಲೀಸ್‌ಲೇನ್, ಅತ್ತಾವರ, ಬಲ್ಮಠ , ಮಲ್ಲಿಕಟ್ಟೆ ಸೇರಿದಂತೆ ವಿವಿಧೆಡೆಗಳಿಂದ ಈ ಶಾಲೆಗೆ ಮಕ್ಕಳು ಆಗಮಿಸುತ್ತಿದ್ದರು. ನಗರ ಬೆಳೆಯುತ್ತಿದ್ದಂತೆ ಶಾಲೆಗಳ ಸಂಖ್ಯೆಯೂ ಹೆಚ್ಚಾಯಿತು. ಪ್ರಸ್ತುತ ಈ ಶಾಲೆಯ 2 ಕಿಮೀ ವ್ಯಾಪ್ತಿಯಲ್ಲಿ ಅತ್ತಾವರ, ಹೊಯ್ಗೆಬಜಾರ್, ಬಂದರು, ರಥಬೀದಿ, ಬಲ್ಮಠ ಮುಂತಾದೆಡೆಗಳಲ್ಲಿ ಶಾಲೆಗಳು ಆರಂಭವಾಗಿರುವುದರಿಂದ ಮಕ್ಕಳೂ ವಿವಿಧ ಶಾಲೆಗಳಿಗೆ ಹಂಚಿ ಹೋಗಿದ್ದಾರೆ.ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭೆ ಹೊಂದಿದ ಮಕ್ಕಳು ಇಲ್ಲಿದ್ದಾರೆ. ಶತಮಾನ ದಾಟಿದ ಈ ಶಾಲೆಗೆ ಸುಸಜ್ಜಿತವಾದ ಕ್ರೀಡಾಂಗಣದ ಕೊರತೆ ಕಾಣುತ್ತಿದೆ. ಬಿಎಡ್ ಕಾಲೇಜು ಮತ್ತು ಪ್ರೌಢಶಾಲೆ ಒಂದೇ ಆವರಣದಲ್ಲಿರುವುದರಿಂದ ಶಾಲೆಯ ಕ್ರೀಡಾಂಗಣವೂ ಕಿರಿದಾಗಿದೆ. ಸುಸಜ್ಜಿತ ಕ್ರೀಡಾಂಗಣ ಸಿಕ್ಕಲ್ಲಿ ಮಕ್ಕಳ ಕ್ರೀಡಾ ಪ್ರತಿಭೆ ಬೆಳಗಬಹುದು.
Related Articles
ಸರಕಾರಿ ಅಭ್ಯಾಸಿ ಪ್ರೌಢಶಾಲೆಯ ವ್ಯಾಪ್ತಿಯಲ್ಲಿ ಒಟ್ಟು 44 ಸೆಂಟ್ಸ್ ಮತ್ತು ಬಿಎಡ್ ಕಾಲೇಜು ಹೆಸರಲ್ಲಿ 70 ಸೆಂಟ್ಸ್ ಸೇರಿ ಒಟ್ಟು 1.14 ಎಕರೆ ಜಾಗ ಇದೆ. ಗುಣಮಟ್ಟದ ಶೌಚಾಲಯ, ಶಾಲಾ ಕಚೇರಿಗೆ ಕಂಪ್ಯೂಟರ್, ಮಕ್ಕಳಿಗೆ ಬೇಕಾದ ಲ್ಯಾಬ್ ವಸ್ತುಗಳು, ಆಟೋಟ ಸಲಕರಣೆಗಳು ಶಾಲೆಯಲ್ಲಿವೆ. ಪ್ರತಿ ದಿನ ಮಕ್ಕಳಿಂದಲೇ ಶಾಲೆಯ ಶುಚಿತ್ವದ ಕೆಲಸ ಮಾಡಿಸುವ ಮೂಲಕ ಸ್ವತ್ಛತೆಯ ಪಾಠವನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ಕಲಿಸುವುದು ಇಲ್ಲಿನ ವೈಶಿಷ್ಟ್ಯ. ಇಲ್ಲಿ ಕಲಿತ ಹಲವಾರು ಮಂದಿ ಗಲ್ಫ್ ರಾಷ್ಟ್ರ, ಯುಎಸ್‌ಎಯಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಹೆಮ್ಮೆಯಿಂದ ಮುಖ್ಯ ಶಿಕ್ಷಕರು ಹೇಳುತ್ತಾರೆ. ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ದಿ| ವಿಶ್ವನಾಥ ರಾವ್ ಅವರು ಒಎನ್‌ಜಿಸಿಯಲ್ಲಿ ಮುಖ್ಯ ಅಧಿಕಾರಿ ಹುದ್ದೆಯಲ್ಲಿದ್ದರು. ಇನ್ನೋರ್ವ ಹಳೆ ವಿದ್ಯಾರ್ಥಿ ಶಮೀರ್ ರಾಷ್ಟ್ರ ಮಟ್ಟದ ಫುಟ್ಬಾಲ್ ಸಾಧಕ ಎಂದು ಸ್ಮರಿಸಿಕೊಳ್ಳುತ್ತಾರೆ 1988ರಿಂದ ಇದೇ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕಿ ಲತಾ ಬಿ. ಪ್ರಸ್ತುತ ಮುಖ್ಯ ಶಿಕ್ಷಕಿ, 5 ಮಂದಿ ಶಿಕ್ಷಕರು, ಓರ್ವ ಪಿಟಿ ಶಿಕ್ಷಕ ಸೇರಿ ಒಟ್ಟು 7 ಮಂದಿ ಶಿಕ್ಷಕರು ಇಲ್ಲಿದ್ದಾರೆ.
Advertisement
ಶಾಲೆ ಆರಂಭವಾದಾಗ ಮುಖ್ಯೋಪಾಧ್ಯಾಯರಾಗಿದ್ದವರ ಬಗ್ಗೆ ತಿಳಿದಿಲ್ಲ. ಆಗಿನ ವಿದ್ಯಾರ್ಥಿಗಳ ಸಂಖ್ಯೆಯೂ ತಿಳಿದಿಲ್ಲ. ಪ್ರಸ್ತುತ ಶಾಲೆಯಲ್ಲಿ 62 ಮಂದಿ ವಿದ್ಯಾರ್ಥಿಗಳಿದ್ದಾರೆ. ವರ್ಷ ಕಳೆದಂತೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ನೋವೂ ಕಾಡುತ್ತಿದೆ. ಕನ್ನಡ ಶಾಲೆಗಳಿಗೆ ಮಕ್ಕಳು ಹೆಚ್ಚು ಬಂದರೆ ಮಾತ್ರ ಮಾತೃಭಾಷೆ ಉಳಿಯಲು ಕೊಡುಗೆ ನೀಡಿದಂತಾಗುತ್ತದೆ.-ಲತಾ ಬಿ., ಮುಖ್ಯ ಶಿಕ್ಷಕಿ ಸರಕಾರಿ ಅಭ್ಯಾಸಿ ಪ್ರೌಢಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಸ್ನೇಹಿ ಶಿಕ್ಷಕರು ಇಲ್ಲಿದ್ದಾರೆ. ಆ ಶಾಲೆಯ ಹಳೆ ವಿದ್ಯಾರ್ಥಿ ಎನ್ನಲು ನನಗೆ ಹೆಮ್ಮೆ ಇದೆ. ನಾನು ಆ ಶಾಲೆಯಲ್ಲಿ ಕಲಿಯುತ್ತಿರುವಾಗ ಅಂದರೆ ಸುಮಾರು 25-26 ವರ್ಷಗಳ ಹಿಂದೆ 300ಕ್ಕೂ ಹೆಚ್ಚು ಮಕ್ಕಳು ಅಲ್ಲಿ ಕಲಿಯುತ್ತಿದ್ದರು. ಈಗ ಮಕ್ಕಳ ಸಂಖ್ಯೆ ಗಣನೀಯ ಇಳಿಕೆ ಯಾಗಿದೆ. ಶಾಲೆಗೆ ಹೆಚ್ಚಿನ ಪ್ರೋತ್ಸಾಹವನ್ನು ಪ್ರತಿಯೊಬ್ಬರೂ ನೀಡಿದಲ್ಲಿ ಕನ್ನಡ ಶಾಲೆ ಉಳಿಯಲು ಸಾಧ್ಯವಾಗುತ್ತದೆ.
-ಶಮೀರ್, ಹಳೆ ವಿದ್ಯಾರ್ಥಿ, ರಾಷ್ಟ್ರೀಯ ಮಟ್ಟದ ಫುಟ್‌ಬಾಲ್ ಆಟಗಾರ - ಧನ್ಯಾ ಬಾಳೆಕಜೆ