Advertisement

ಮುಳಿಹುಲ್ಲಿನ ಕಟ್ಟಡದಲ್ಲಿ ಆರಂಭವಾದ ಶಾಲೆಗೀಗ 104 ವರ್ಷ

09:00 AM Dec 01, 2019 | mahesh |

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1915 ಶಾಲೆ ಆರಂಭ
ಜಾತಿಮತ ಭೇದ‌ವಿಲ್ಲದ ಸಾಮರಸ್ಯ

ಮೂಡುಬಿದಿರೆ: 1915ರಲ್ಲಿ ಪ್ರಾರಂಭವಾದ ಈ ಶಾಲೆಗೂ ಪಾಲಡ್ಕ ಚರ್ಚ್‌ ಗೂ (2013) ವಿಸ್ತಾರವಾದ ಜಾಗವನ್ನು ದಾನ ಮಾಡಿದವರು ಕೇಮಾರು ಪರಾಡ್ಕರ್‌ ಕುಟುಂಬಸ್ಥರು. ಚರ್ಚ್‌ ಧರ್ಮಗುರು ವಂ| ಸಾಲ್ವದೊರ್‌ ಡಿ’ಸೋಜಾ ಅವರು ಚರ್ಚ್‌ ಹಿಂಭಾಗದಲ್ಲಿ ಮುಳಿಹುಲ್ಲಿನ ಕಟ್ಟಡದಲ್ಲಿ ಪ್ರಾರಂಭಿಸಿದ ಈ ಶಾಲೆಗೆ ಪಾಲಡ್ಕ ಮಾತ್ರವಲ್ಲ ಪುತ್ತಿಗೆ, ಕಡಂದಲೆ, ಮೊದಲಾದ ಗ್ರಾಮಗಳಿಂದಲೂ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದರು. ಅವರ ಕಾಲದಲ್ಲೇ ಹಂಚಿನ ಮಾಡು ಸಹಿತ ಕಟ್ಟಡ ರಚನೆಗೆ ನೆರವಾದವರು ಮುಂಡ್ರುದೆಗುತ್ತು, ಕಡಂದಲೆಗುತ್ತು, ಆನಡ್ಕದ ಜೈನ ಮನೆತನ, ಮಾಲ್ದಬೆಟ್ಟು ಗುತ್ತು ಮನೆತನದವರು. ಇಂದಿಗೂ ಜಾತಿಮತ ಭೇದವಿಲ್ಲದೆ ವಿಶೇಷ ಸಂದರ್ಭಗಳಲ್ಲಿ ಎಲ್ಲರೂ ಚರ್ಚ್‌, ಶಾಲೆಯ ಕೈಂಕರ್ಯಗಳಿಗಾಗಿ ಕೈ ಜೋಡಿಸುತ್ತಿರುವುದು ಸಾಮಾನ್ಯವಾಗಿ ಕಂಡುಬರುವ ಸಾಮರಸ್ಯದ ಸಂಗತಿ.

ಮಕ್ಕಳಿಗೆ ಉಚಿತ ಕೊಡುಗೆ
1966-80ರ ಕಾಲದಲ್ಲಿ ಇಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಈಗ ಈ ಎಲ್ಲ ಪ್ರದೇಶಗಳಲ್ಲಿ ಸುಮಾರು ಆರು ಶಾಲೆಗಳಿವೆ. ಆರಂಭದಲ್ಲಿ ಸಂಚಾಲಕರಾಗಿ ಮತ್ತು ಮುಖ್ಯಶಿಕ್ಷಕರಾಗಿ ವಂ| ಸಾಲ್ವದೋರ್‌ ಡಿ’ಸೋಜಾ ಸೇವೆ ಸಲ್ಲಿಸಿದ್ದರು. ಈ ಶಾಲೆ 1923ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. ಪ್ರಸ್ತುತ ವಿಕ್ಟೋರಿಯಾ ಕಡೋìಜಾ ಅವರು ಮುಖ್ಯೋಪಾಧ್ಯಾಯಿನಿ. ಉಳಿದಂತೆ 4 ಮಂದಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾರ್ಯನಿರ್ವಹಿಸುವ ಗೌರವ ಶಿಕ್ಷಕರಿದ್ದಾರೆ. ಒಟ್ಟು 98 ಮಕ್ಕಳಿದ್ದಾರೆ.

ಪ್ರಾರಂಭದ ವರ್ಷಗಳಲ್ಲಿಯೇ ಮಕ್ಕಳಿಗೆ ಸ್ಲೇಟ್‌, ಬಳಪ, ಪುಸ್ತಕ, ಆವಶ್ಯಕತೆ ಇದ್ದವರಿಗೆ ಉಚಿತ ಕೊಡುಗೆಗಳನ್ನು ನೀಡಿ ಮಕ್ಕಳನ್ನು ಬರಮಾಡಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಸುಸಜ್ಜಿತ ತರಗತಿ ಕೊಠಡಿಗಳು, ಕಂಪ್ಯೂಟರ್‌, ಕುಡಿಯುವ ನೀರಿನ ವ್ಯವಸ್ಥೆ, ರಂಗಮಂದಿರ, ಆಟದ ಬಯಲು, ಉದ್ಯಾನವನ, ಶಾಲಾ ಕೈತೋಟ ವ್ಯವಸ್ಥಿತವಾಗಿವೆ. ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ.

Advertisement

ಸ್ಥಾಪಕ ಸಂಚಾಲಕರ ಶಿಷ್ಯ ಕೇಶವ ಭಟ್‌, ಫ್ರಾನ್ಸಿಸ್‌ ಸಿಕ್ವೇರ, ಎಂ. ಸೂರ್ಯನಾರಾಯಣ ರಾವ್‌, ಬಿ. ವೆಂಕಟೇಶ ಬಾಳಿಗಾ, ಎಂ. ಆನಂದ ನಾಯಕ್‌, ಬೆಂಜಮಿನ್‌ ಬಬೋìಝಾ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟ ಇಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿರುವುದು ಉಲ್ಲೇಖನೀಯ.

ಶತಮಾನೋತ್ಸವ ಸೌಧ
ಶಾಲೆಗೆ 75 ವರ್ಷ ತುಂಬಿದಾಗ ನಡೆದ ಅಮೃತ ಮಹೋತ್ಸವ ಸಂದರ್ಭ ದೇಶ, ವಿದೇಶಗಳಲ್ಲಿರುವ ಊರ ವಿದ್ಯಾಭಿಮಾನಿಗಳ ಸಹಕಾರ ಸಂಚಯಿಸಿ ನೂತನ ಕಟ್ಟಡ ನಿರ್ಮಿಸಿದವರು ಸಾವೆರಾಪುರದ ಶಿಲ್ಪಿ ಎಂದೇ ಖ್ಯಾತರಾದ, ಬಡಬಗ್ಗರಿಗೆ ಬಹುಬಗೆಯಲ್ಲಿ ಪ್ರೋತ್ಸಾಹ ನೀಡಿದ ಚೇತನ, ಧರ್ಮಗುರುಗಳಾಗಿದ್ದ ಮಥಾಯಸ್‌ ಪಿರೇರ. ಈಗಿನ ಸಂಚಾಲಕ ವಂ| ಮೈಕಲ್‌ ಐವನ್‌ ರೊಡ್ರಿಗಸ್‌ ಅವರ ಹಿರಿತನದಲ್ಲಿ 2015ರಲ್ಲಿ ಶತಮಾನೋತ್ಸವ, ಶತಮಾನೋತ್ಸವ ಸೌಧ ನಿರ್ಮಾಣವಾಗಿದೆ. ಅವರು ಶಾಲಾಡಳಿತ ಮಂಡಳಿಯ ಸಹಕಾರದೊಂದಿಗೆ ಕನ್ನಡ ಶಾಲೆ ಹಾಗೂ ಶತಮಾನೋತ್ಸವದ ಬಳಿಕ ಪ್ರಾರಂಭವಾದ ಆಂಗ್ಲ ಮಾಧ್ಯಮ ಶಾಲೆಯ ಅಭಿವೃದ್ಧಿಯಲ್ಲಿ ಸಮಾನ ಚಿಂತನೆ ಹೊಂದಿದ್ದಾರೆ.ಇಲ್ಲಿನ ಶಿಕ್ಷಕರಾದ ಆ್ಯಂಡ್ರೂ ಡಿ’ಸೋಜಾ ಮತ್ತು ದೇವದಾಸ ಹೆಗ್ಡೆ ಅವರು ದ.ಕ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗಳಿಸಿ ಕೊಂಡಿದ್ದಾರೆ.

ಹಳೆ ವಿದ್ಯಾರ್ಥಿಗಳು
ಸರ್‌ ಎಂ. ವಿಶ್ವೇಶ್ವರಯ್ಯನವರ ಕಾರ್ಯದರ್ಶಿಯಾಗಿದ್ದ ಇರ್ವತ್ತೂರು ಮಂಜುನಾಥ ಪೈ, ಮಾಜಿ ಸಚಿವ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ, ಆಲ್ಫ್ರೆಡ್‌ ರೀಟಾ ಸಿಕ್ವೇರಾ ಪಾಲಡ್ಕ (ದೋಹ ಕತಾರ್‌), ಬಾಲಚಂದ್ರ ಪಿ.ನಾಯಕ್‌, ವಕೀಲರಾದ ಕೆ. ಆರ್‌. ಪಂಡಿತ್‌, ಶ್ಯಾಮ ಶೆಟ್ಟಿ, ಕೆಜಿಎಫ್‌ನಲ್ಲಿ ಎಂ.ಡಿ. ಯಾಗಿದ್ದ ಅನಂತ ಕೃಷ್ಣ ಶೆಟ್ಟಿಗಾರ್‌, ಆಲ್ಫ್ರೆಡ್‌ ಪ್ರವೀಣ್‌ ಸಿಕ್ವೇರಾ, ಶಶಿಧರ್‌ ಪಿ. ನಾಯಕ್‌, ನಾಟಕಕಾರ ಜೋಯ್‌ ಪಾಲಡ್ಕ, ನಟ ಪ್ರದೀಪ್‌ ಬಬೋìಝಾ, ಅವಿತ್‌ ಬಬೋìಝಾ ಇಲ್ಲಿ ಹಳೆ ವಿದ್ಯಾರ್ಥಿಗಳು.

ಎಲ್ಲರ ಸಹ ಕಾರದಿಂದ, ಏಕೈಕ ಅನುದಾನಿತ ಶಿಕ್ಷಕರಿದ್ದರೂ ಗೌರವ ಶಿಕ್ಷಕರೊಂದಿಗೆ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಲು ನಿರಂತರ ಪರಿಶ್ರಮಪಡುತ್ತಿದ್ದೇವೆ. ಆವರಣದಲ್ಲೇ ಆಂಗ್ಲ ಮಾಧ್ಯಮ ಶಾಲೆ ಇದ್ದರೂ ಕನ್ನಡ ಮಾಧ್ಯಮದ ಮಕ್ಕಳ ಸಂಖ್ಯೆ ನೂರರ ಗಡಿಗೆ ಹತ್ತಿರವೇ ಇದೆ.
-ವಿಕ್ಟೋರಿಯಾ ಮರಿಯಾ ಲೋಬೋ, ಮುಖ್ಯೋಪಾಧ್ಯಾಯಿನಿ

ಅನುದಾನಿತ ಶಾಲೆಗಳು ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಆಂಗ್ಲ ಮಾಧ್ಯಮಕ್ಕೆ ಹೋಗಲಾಗದ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರೋತ್ಸಾಹ ಕಡಿಮೆಯಾಗುತ್ತಿದೆ.
-ಆ್ಯಂಡ್ರೂ ಡಿ’ಸೋಜಾ, ಹಳೆ ವಿದ್ಯಾರ್ಥಿ

–  ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next