Advertisement

ಮುಳಿ ಹುಲ್ಲು ಹೊದೆಸಿದ ಕಟ್ಟಡದಲ್ಲಿ ಆರಂಭವಾದ ಶಾಲೆಗೀಗ 144 ವರ್ಷ

09:47 AM Dec 05, 2019 | Lakshmi GovindaRaju |

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಶಾಲೆ ಆರಂಭ 1875
ಶಾಲಾಭಿವೃದ್ಧಿ ಹಳೆ ವಿದ್ಯಾರ್ಥಿ ಸಂಘ, ಊರವರ ಸಹಕಾರ

ಮೂಡುಬಿದಿರೆ: 1875ರಲ್ಲಿ ಪ್ರಾರಂಭವಾದ ಮಾರೂರು ಹೊಸಂಗಡಿ ಶಾಲೆಗೆ ಈಗ 144 ವರ್ಷ. ಪ್ರಾರಂಭದ ಕೆಲವು ವರ್ಷ ಮುಳಿ ಹುಲ್ಲು ಹೊದೆಸಿದ ಕಟ್ಟಡದಲ್ಲಿದ್ದ ಶಾಲೆಯನ್ನು ಊರವರು ಹೆಂಚಿನ ಕಟ್ಟಡವನ್ನಾಗಿಸಿದರು. 1938ರಲ್ಲಿ ಎಂ. ವೆಂಕಟ್ರಾಯ ಪೈ ಅವರಿಂದ ವರ್ಗಾವಣೆಯಾಗಿ, ಆಗಿನ ಜಿಲ್ಲಾ ಬೋರ್ಡ್‌ನ ಈ ಶಾಲೆಯ ಉಪಯೋಗಕ್ಕಾಗಿ ಒಂದು ಎಕ್ರೆ ಜಾಗವನ್ನು ನೀಡಲಾಗಿದೆ.

ಸುಸಜ್ಜಿತ ಸೌಲಭ್ಯಗಳು
ಕಿರಿಯ ಪ್ರಾಥಮಿಕ ಶಾಲೆಯಾಗಿದ್ದದ್ದು ಮುಂದೆ ಹಿರಿಯ ಪ್ರಾಥಮಿಕ ಅನಂತರ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದೆ. ಕೊಣಾಜೆ ಚಂದಯ್ಯ ಅವರು ಶಾಲೆಯ ಮೊದಲ ಮುಖ್ಯೋಪಾಧ್ಯಾಯರೆನ್ನಲಾಗುತ್ತಿದೆ. ಪ್ರಸಕ್ತವಾಗಿ ಯಮುನಾ ಅವರು ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಶವ ಆಚಾರ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು. ಮುಖ್ಯೋಪಾಧ್ಯಾಯಿನಿ ಸಹಿತ 5 ಮಂದಿ ಶಿಕ್ಷಕರು, ಓರ್ವ ಗೌರವ ಶಿಕ್ಷಕ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಒಟ್ಟು 62 ಮಂದಿ ಮಕ್ಕಳಿದ್ದಾರೆ.

ಅನಂತರಾಜ ಇಂದ್ರರು ಮುಖ್ಯೋಪಾಧ್ಯಾಯರಾಗಿದ್ದಾಗ, ಹೊಸಂಗಡಿ ಅರಮನೆ ಕೃಷ್ಣರಾಜ ಶೆಟ್ಟಿ ಅವರ ಹಿರಿತನದಲ್ಲಿ ಶಾಲೆಯ ಸೂರು ದುರಸ್ತಿ ಸಹಿತ ಅಭಿವೃದ್ಧಿ ಕಾರ್ಯ ನಡೆಸಲಾಗಿತ್ತು ಎಂದು ಹಳೆ ವಿದ್ಯಾರ್ಥಿ ಬಾಲಚಂದ್ರ ಭಂಡಾರಿ ನೆನಪಿಸಿಕೊಳ್ಳುತ್ತಾರೆ.

Advertisement

ಶಾಲೆಯಲ್ಲಿ ಎಲ್ಲ ತರಗತಿಗಳಿಗೆ ಕೊಠಡಿಗಳಿದ್ದು ಶುದ್ಧ ಕುಡಿಯುವ ನೀರು ಪೂರೈಕೆ ಇದೆ. ರಂಗಮಂದಿರ, 2018ರಲ್ಲಿ ಹಳೆವಿದ್ಯಾರ್ಥಿಗಳು ಮತ್ತು ಎಸ್‌ಡಿಎಂಸಿ ಸಹಕಾರದಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಉದ್ಯಾನವನದಲ್ಲಿ ತರಕಾರಿಗಳನ್ನೂ ಕೂಡ ಬೆಳೆಯಲಾಗುತ್ತದೆ. ಶೌಚಾಲಯ, ಸ್ನಾನಗೃಹ ನಿರ್ಮಿಸಿದ್ದು ಶಾಲೆಯ ವಾತಾವರಣ ನೈರ್ಮಲ್ಯದಿಂದ ಕೂಡಿದೆ. ಸುಣ್ಣ ಬಣ್ಣ ಹಚ್ಚಲಾಗಿದ್ದು ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿಗಳೂ ಕೈ ಜೋಡಿಸಿದ್ದಾರೆ. ಶಾಲಾ ಸ್ವತ್ಛತೆ ಚೆನ್ನಾಗಿದೆ. ಕಂಪ್ಯೂಟರ್‌ ಕೊಠಡಿ ಇದೆ. ಮಂಗಳೂರಿನ ಡಾ| ಮೀರಾ ಅವರು 50,000 ರೂ. ದೇಣಿಗೆ ನೀಡಿ ಶಾಲಾಭಿವೃದ್ಧಿಗೆ ಸಹಕರಿಸಿದ್ದಾರೆ. ಶತಮಾನ ಪೂರೈಸಿರುವ ಈ ಕನ್ನಡ ಶಾಲೆಯನ್ನು ಅಭಿವೃದ್ಧಿಗೊಳಿಸಿ, ಉಳಿಸಿ, ಗುಣಮಟ್ಟದ ಶಿಕ್ಷಣ ನೀಡಲು ಹಳೆ ವಿದ್ಯಾರ್ಥಿಗಳು ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.

ನೆನಪಲ್ಲಿ ಉಳಿವ ಶಿಕ್ಷಕರು, ಮುಖ್ಯಶಿಕ್ಷಕರು
ಪೆರಿಂಜೆ ರಾಮಯ್ಯ ಮಾಸ್ಟ್ರೆ, ಅನಂತರಾಜ ಇಂದ್ರ, ಹೆಸರಾಂತ ಅರ್ಥಧಾರಿ ಮಾರೂರು ಮಂಜುನಾಥ ಭಂಡಾರಿ, ಪಕ್ಕಳ ಮಾಸ್ಟ್ರೆ, ನಾಗರಾಜ ಇಂದ್ರ, ಸ್ಟೆಲ್ಲ ಟೀಚರ್‌, ವಿನಯಚಂದ್ರ ಅವರು ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಾಗಿದ್ದಾರೆ.

ಹೆಮ್ಮೆಯ ಹಳೆ ವಿದ್ಯಾರ್ಥಿಗಳು
ಈ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ನಾಗರಾಜ ಇಂದ್ರರೂ ಅವರ ತಾಯಿ ದಿ| ಧನವತಿ ಅಮ್ಮ (ಕೊಣಾಜೆ ಚಂದಯ್ಯ ಅವರ ಶಿಷ್ಯೆ), ದ.ಕ. ಜಿ.ಪಂ. ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್‌ ಮಜೆಮನೆ, ಹೊಸಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹರಿಪ್ರಸಾದ್‌ ಹೊಸಂಗಡಿ, ಗ್ರಾ.ಪಂ. ಮಾಜಿ ಸದಸ್ಯ ಶ್ರೀಪತಿ ಭಟ್‌ ಸಂಪಿಗೆದಡಿ ಮನೆ ಬಡೆಕೋಡಿ, ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ವಸೂಲಾತಿ ಅಧಿಕಾರಿಯಾಗಿದ್ದ ಎಂ.ಕೆ. ಭಂಡಾರಿ, ಮೋಹನದಾಸ ಭಂಡಾರ್ಕರ್‌, ಗೇರುಕಟ್ಟೆಯ ಉಪನ್ಯಾಸಕ ಮೋಹನ ಉಪಾಧ್ಯಾಯ, ಮೂಡುಬಿದಿರೆ ಪುರಸಭಾ ಮಾಜಿ ಸದಸ್ಯ ದಿನೇಶ್‌ ಕುಮಾರ್‌ ಹೊಸಮನೆ, ಉದ್ಯಮಿಗಳಾದ ಸುಶಾಂತ್‌ ಕರ್ಕೇರ, ಜಾವೇದ್‌ ಹೈದ್ರೋಸ್‌, ಹಮೀದ್‌ ಮಲ್ಲಾರ್‌ ಮನೆ, ರಾಘು ಪೂಜಾರಿ ಬೆಂಗಳೂರು, ಮಾಜಿ ಸೈನಿಕ ಡೆನಿಲ್‌ ಡಿ’ಸಿಲ್ವ, ವೇ|ಮೂ| ರಾಮದಾಸ ಆಸ್ರಣ್ಣ, ರಾಘವೇಂದ್ರ ಆಸ್ರಣ್ಣ ನಾಳ, ಮೀನುಗಾರಿಕೆ ಇಲಾಖೆಯಲ್ಲಿರುವ ಲಿಂಗಪ್ಪ ನಾಯ್ಕ ಬಡೆಕೋಡಿ, ಶ್ರೀಧರ ಪೇರಿಮನೆ ಮೊದಲಾದವರು ಈ ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳು.

ಶಾಲೆಯಲ್ಲಿ ಉತ್ತಮ ಮೂಲ ಸೌಕ ರ್ಯಗಳಿವೆ. ವ್ಯವಸ್ಥಿತ ಕೈತೋಟ, ಆಟದ ಮೈದಾನ ಇಲ್ಲಿದೆ. ಎಸ್‌ಡಿಎಂಸಿಯೊಂದಿಗೆ ಹಳೆವಿದ್ಯಾರ್ಥಿಗಳ ಸಹಕಾರವೂ ಇದೆ.
-ಯಮುನಾ, ಮುಖ್ಯೋಪಾಧ್ಯಾಯಿನಿ.

ಉನ್ನತ ಶೈಕ್ಷಣಿಕ ಪರಂಪರೆ ಹೊಂದಿರುವ ಈ ಶಾಲೆಯಲ್ಲಿ ಈಗ ಇಳಿ ಮುಖವಾಗುತ್ತಿರುವ ಮಕ್ಕಳ ಸಂಖ್ಯೆಯನ್ನು ಮತ್ತೆ ಹಿಂದಿನ ಸ್ಥಿತಿಗೇರಿಸಲು ಹಳೆವಿದ್ಯಾರ್ಥಿ ಸಂಘ ಪರಿಶ್ರಮಿಸುತ್ತಿದೆ.
-ಹರಿಪ್ರಸಾದ್‌, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ

–  ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next