Advertisement

ಹುಲ್ಲಿನ ಗುಡಿಸಲಿನಲ್ಲಿ ಆರಂಭವಾದ ಶಾಲೆಗೀಗ 123 ವರ್ಷ

09:47 AM Dec 05, 2019 | Lakshmi GovindaRaju |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1896 ಶಾಲೆ ಸ್ಥಾಪನೆ
ಖಂಡಿಗೆ ಶಾಲೆಯೆಂದು ಪ್ರತೀತಿ

ಮಲ್ಪೆ: 1896ರಲ್ಲಿ ಬಲರಾಮಯ್ಯ ಅವರಿಂದ ಸ್ಥಾಪನೆಗೊಂಡ ಶಾಲೆ ಆರಂಭದಲ್ಲಿ ಹುಲ್ಲಿನ ಗುಡಿಸಲಿನಲ್ಲಿ ತರಗತಿಗಳು ನಡೆಯುತ್ತಿದ್ದವು. 1967ರಲ್ಲಿ ಹೆಂಚಿನ ಕಟ್ಟಡದೊಂದಿಗೆ 1ರಿಂದ 7ನೇ ತರಗತಿ ವಿಸ್ತರಣೆಗೊಂಡು ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟಿತ್ತು.

ದಿ. ಬಾಬುರಾವ್‌ ಅವರ ಮುಂದಾಳತ್ವದಲ್ಲಿ ಕಟ್ಟಡ ನಿರ್ಮಾಣಗೊಂಡು, 10 ಮಂದಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಇಬ್ಬರು ಅನುದಾನಿತ ಶಿಕ್ಷಕರು 5 ಮಂದಿ ಗೌರವ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯಲ್ಲಿ 72 ಮಂದಿ ವಿದ್ಯಾರ್ಥಿಗಳಿದ್ದಾರೆ. 2014ರಲ್ಲಿ ಮಳೆಗಾಳಿಗೆ ಕಟ್ಟಡ ಬಿದ್ದಾಗ ಶಾಲೆಯ ನೆರವಿಗೆ ಮುಂದೆ ಬಂದವರು ಶಾಲಾ ಹಳೆವಿದ್ಯಾರ್ಥಿ ಗೀತಾ ಆನಂದ ಕುಂದರ್‌ ಕೋಟ ಮಣೂರು ಅವರು. ಶಾಲೆಯ ಸರ್ವತೋಮುಖ ಅಭಿ ವೃದ್ಧಿಗೆ ಈಗಲೂ ನಿರಂತರ ನೆರವನ್ನು ನೀಡುತ್ತಾ ಬರುತ್ತಿದ್ದಾರೆ. 1998ರಲ್ಲಿ ಆಗಿನ ಸಂಚಾಲಕರಾಗಿದ್ದ ಟಿ. ಗೋಪಾಲಕೃಷ್ಣ ಹೆಗ್ಡೆ ಅವರ ನೇತೃತ್ವದಲ್ಲಿ ಶತಮಾನೋತ್ಸವ ನಡೆದಿದೆ.

ಸೌಕರ್ಯಗಳು
ತೋನ್ಸೆ ಗ್ರಾಮ ವ್ಯಾಪ್ತಿಗೆ ಒಳಪಟ್ಟ ಖಂಡಿಗೆ ಮಠ ಲಕ್ಷ್ಮೀಗಣಪತಿ ದೇವಸ್ಥಾನದಿಂದಾಗಿ ಈ ಊರಿಗೆ ಖಂಡಿಗೆ ಎಂದು ಹೆಸರು ಬಂದಿದೆ. ಹಾಗಾಗಿ ಈ ಶಾಲೆಯೂ ಖಂಡಿಗೆ ಶಾಲೆಯೆಂದು ಪ್ರತೀತಿಯನ್ನು ಪಡೆಯಿತು. ಕಟ್ಟಡ, ಆಟದ ಮೈದಾನ, ಕಂಪ್ಯೂಟರ್‌ ವ್ಯವಸ್ಥೆ, ಪುಸ್ತಕ ಭಂಡಾರ ಶ್ರೀ ಕೃಷ್ಣ ಪ್ರಸಾದ ಯೋಜನೆ, ಕ್ಷೀರ ಭಾಗ್ಯ, ಪ್ರತೀ ವರ್ಷ ಉಚಿತ ನೋಟ್‌ ಪುಸ್ತಕ ವಿತರಣೆ, ಶ್ರೀಕೃಷ್ಣ ಮಠ ಮತ್ತು ಮಲ್ಪೆ ಯಾಂತ್ರಿಕ ಮೀನುಗಾರರ ಸಹಕಾರ ಸಂಘದ ವತಿಯಿಂದ ಉಚಿತ ಸಮವಸ್ತ್ರ ವಿತರಿಸಲಾಗುತ್ತಿದೆ. ನ. 19ರಂದು ಕೆನರಾ ಬ್ಯಾಂಕ್‌ ನಿವೃತ್ತ ಅಧಿಕಾರಿಗಳ ಸಂಘ ಉಡುಪಿ ಘಟಕದಿಂದ ಕೈ ತೊಳೆಯುವ ನಳ್ಳಿ ನೀರಿನ ವ್ಯವಸ್ಥೆ ಹಾಗೂ ಶೌಚಾಲಯನ್ನು ಕೊಡುಗೆಯಾಗಿ ನೀಡಿದೆ.

Advertisement

ಉಚಿತ ಶಾಲಾ ವಾಹನದ ವ್ಯವಸ್ಥೆಯಿದ್ದು ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆತರುತ್ತಿದ್ದಾರೆ. ಗೌರವ ಶಿಕ್ಷಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಊರವರ ಸಹಕಾರ ಪಡೆಯಲಾಗುತ್ತಿದೆ.

ಇಲ್ಲಿ ಅಕ್ಷರ ಕಲಿತ ಪ್ರಮುಖರು
ಉದ್ಯಮಿ ಗೀತಾ ಆನಂದ ಕುಂದರ್‌ ಕೋಟ ಮಣೂರು, ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ಹಣಕಾಸು ಪ್ರಧಾನ ವ್ಯವಸ್ಥಾಪಕಿ ಜ್ಯೋತಿ ಡಿ. ಕುಂದರ್‌, ಮಕ್ಕಳ ತಜ್ಞ ಡಾ. ಭರತ್‌ರಾಜ್‌ ಮಂಗಳೂರು, ಯಕ್ಷಗಾನ ಗುರು, ಕಲಾವಿದ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಬಿ. ಕೇಶವ ರಾವ್‌, ರಾಜಕೀಯ ನಾಯಕ ಬಿ. ಪಿ. ರಮೇಶ್‌ ಪೂಜಾರಿ ಮುಂತಾದವರು.

ರುಕ್ಕೋಜಿರಾವ್‌, ಬಿ. ಬಾಬು ರಾವ್‌, ಪಿ. ಸೋಮಶೇಖರ್‌ ರಾವ್‌ ಮುಖ್ಯೋಪಾಧ್ಯಾಯರಾಗಿದ್ದರು. ಪ್ರಸ್ತುತ 1986ರಿಂದ ಬಿ. ರವೀಂದ್ರನಾಥ್‌ ರಾವ್‌ ಮುಖ್ಯ ಶಿಕ್ಷಕರಾಗಿ 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಹೊರ ರಾಜ್ಯದ ವಿದ್ಯಾರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಶಾಲೆ ಯಲ್ಲಿ ಆಡಳಿತ ಮಂಡಳಿ ಹಾಗೂ ಬಾಬುರಾವ್‌ ಮೆಮೋರಿಯಲ್‌ ಟ್ರಸ್ಟ್‌ ಅಧ್ಯಕ್ಷ ಬಿ.ಆರ್‌. ಶರತ್‌ ಅವರ ಸಹಕಾರ ದಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
-ಬಿ. ರವೀಂದ್ರನಾಥ್‌ ರಾವ್‌, ಮುಖ್ಯ ಶಿಕ್ಷಕರು

ನನ್ನ ಜೀವನವೆಂಬ ಪಾಠಶಾಲೆಗೆ ಭದ್ರ ಬುನಾದಿಯನ್ನು ಹಾಕಿದ ಈ ಶಾಲೆ ಭವಿಷ್ಯದ ಜೀವನಕ್ಕೆ ದಾರಿದೀಪವಾಗಿದೆ. ಇಲ್ಲಿ ನೀಡಿದಂತಹ ಶಿಕ್ಷಣ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲ ಶೈಕ್ಷಣಿಕ ಚಟುವಟಿಕೆ ನನ್ನಂಥ ಹಲವಾರು ವಿದ್ಯಾರ್ಥಿಗಳನ್ನು ರೂಪಿಸಿ ಸಮಾಜಕ್ಕೆ ನೀಡಿದೆ. ಇಂತಹ ಕನ್ನಡ ಮಾಧ್ಯಮ ಶಾಲೆ ಯನ್ನು ಉಳಿಸಬೇಕಾದುದು ಕರ್ತವ್ಯ.
-ಡಾ| ಸಂತೋಷ್‌ ಕುಮಾರ್‌, ಹಳೆ ವಿದ್ಯಾರ್ಥಿ

  ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next