Advertisement

ರಾಮನವಮಿಯಂದು ಪ್ರಾರಂಭಗೊಂಡ ಶಾಲೆಯು ಊರ ಜನರಿಗೆ ಸಾಮರಸ್ಯದ ಕೇಂದ್ರ

09:56 AM Nov 29, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1917 ಶಾಲೆ ಸ್ಥಾಪನೆ
ಪ್ರಸ್ತುತ 120 ವಿದ್ಯಾರ್ಥಿಗಳು

ಕಾಪು : ಮನೆಗೊಂದು ಮಗು, ಊರಿಗೊಂದು ಶಾಲೆ ಎಂಬ ಕಲ್ಪನೆಯೊಂದಿಗೆ ಗ್ರಾಮೀಣ ಜನರ ಶೈಕ್ಷಣಿಕ ದಾಹವನ್ನು ತಣಿಸುವ ಉದ್ದೇಶದೊಂದಿಗೆ ಕರಂದಾಡಿ ರಾಮರಾಯ ಶ್ಯಾನುಭಾಗ್‌ ಅವರು ಮುತುವರ್ಜಿ ವಹಿಸಿ 1917ರಲ್ಲಿ ರಾಮನವಮಿಯಂದು ಸ್ಥಾಪಿಸಿದ ಮಜೂರು ಗ್ರಾಮದ ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯು ಕಾಪು ತಾಲೂಕಿನಲ್ಲಿ ಶತಮಾನ ಪೂರೈಸಿದ ಶಾಲೆಗಳ ಪಟ್ಟಿಯಲ್ಲಿ ಗುರುತಿಸಲ್ಪಡುತ್ತಿದೆ.

1917ರಲ್ಲಿ ಕರಂದಾಡಿ ರಾಮರಾಯರಿಂದ ಸ್ಥಾಪನೆಗೊಂಡ ಶಾಲೆ ಬಳಿಕ ಲಕ್ಷ್ಮೀ ನಾಗಪ್ಪಯ್ಯ ಶ್ಯಾನುಭಾಗ್‌ ಅವರ ಸಂಚಾಲಕತ್ವದಲ್ಲೂ ಹಂತ ಹಂತವಾಗಿ ಮೇಲ್ದರ್ಜೆಗೇರುತ್ತಾ ಬಂದಿದೆ. 1960ರಲ್ಲಿ ಶಾಲೆ ಪರಭಾರೆಗೊಂಡಾಗ ಹೇರೂರು ಕಲ್ಲುಗುಡ್ಡೆ ಟಿ. ಸೀತಾರಾಮ ಶೆಟ್ಟಿ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೈಕ್ಷಣಿಕ ಪ್ರೋತ್ಸಾಹ ನೀಡಿದ್ದು, ಅವರ ಬಳಿಕ ಟಿ. ಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲೂ ಶಾಲೆ ಅಭಿವೃದ್ಧಿಯ ಪಥದತ್ತ ಸಾಗಿದೆ.

ಪ್ರತಿ ಸೋಮವಾರ ಭಜನೆ
ಸರಾಸರಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದ ಕರಂದಾಡಿ ಶಾಲೆಯಲ್ಲಿ ಪ್ರಸ್ತುತ 120 ಮಂದಿ ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆಯುತ್ತಿದ್ದಾರೆ. ಇವರಿಗಾಗಿ ಸರಕಾರದಿಂದ ನಿಯೋಜಿಸಲ್ಪಟ್ಟ ಇಬ್ಬರು ಶಿಕ್ಷಕರು ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶತಮಾನೋತ್ಸವ ಸಮಿತಿಯ ಮೂಲಕವಾಗಿ 6 ಮಂದಿ ಗೌರವ ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಉಡುಪಿ ಶ್ರೀ ಕೃಷ್ಣ ಮಠದ ವತಿಯಿಂದ ಪ್ರತೀ ದಿನ ಮಕ್ಕಳಿಗೆ ಚಿಣ್ಣರ ಸಂತರ್ಪಣೆ, ಚಿಣ್ಣರ ಮಾಸೋತ್ಸವದಲ್ಲಿ ಪಾಲ್ಗೊಳ್ಳುವಿಕೆ, ಪ್ರತೀ ಸೋಮವಾರ ಭಜನಾ ಕಾರ್ಯಕ್ರಮ, ಭಾರತ್‌ ಸೇವಾದಳ ಚಟುವಟಿಕೆ, ಯೋಗ ತರಬೇತಿ, ಶಾಲಾ ಸಂಸತ್ತು, ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ, ಉಚಿತ ಪುಸ್ತಕ, ಸಮವಸ್ತ್ರ ಸಹಿತ ಶೈಕ್ಷಣಿಕ ಸವಲತ್ತುಗಳ ವಿತರಣೆಯಾಗುತ್ತಿದೆ.

ಹೆಮ್ಮೆಯ ಹಳೆ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕರು
ತ್ರಿಭಾಷಾ ವಿದ್ವಾನ್‌ ಡಾ| ಯು.ಪಿ. ಉಪಾಧ್ಯಾಯ, ಮಂಗಳೂರು ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎಂ.ಬಿ. ಪುರಾಣಿಕ್‌, ಸಮಾಜರತ್ನ ಕೆ. ಲೀಲಾಧರ ಶೆಟ್ಟಿ, ಸಾರಿಗೆ ಉದ್ಯಮಿ ದಿ| ಶೌಕತ್‌ ಅಲಿ, ವಿಜಯಾ ಬ್ಯಾಂಕ್‌ ನಿವೃತ್ತ ಡಿಜಿಎಂ ಜಯಕರ ಶೆಟ್ಟಿ, ಕರ್ನಾಟಕ ಬ್ಯಾಂಕ್‌ ಡಿಜಿಎಂ ಸತೀಶ್‌ ಶೆಟ್ಟಿ, ನಿವೃತ್ತ ಯೋಧರಾದ ಸದಾನಂದ ಶೆಟ್ಟಿ, ಶ್ರೀನಿವಾಸ ಉಪಾಧ್ಯಾಯ, ಮಣಿಪಾಲ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ| ಅಬ್ದುಲ್‌ ರಝಾಕ್‌, ಸಿಎ ಅಂಡೆಮಾರುಗುತ್ತು ಸತೀಶ್‌ ಶೆಟ್ಟಿ, ಸಿಎ ಅನಂತ ಕೃಷ್ಣ ರಾವ್‌, ಡಾ| ಅಕºರ್‌ ಆಲಿ, ಸಾಹಿತಿ ಪ್ರಜ್ಞಾ ಮಾರ್ಪಳ್ಳಿ ಸಾಧಕ ಹಳೆ ವಿದ್ಯಾರ್ಥಿಗಳು.ರಾಮಯ್ಯ ಶೆಟ್ಟಿ ಅವರು ಸ್ಥಾಪಕ ಮುಖ್ಯೋಪಾಧ್ಯಾಯರಾಗಿದ್ದು, ವೈ. ವ್ಯಾಸ ರಾವ್‌, ಶಿವ ರಾವ್‌, ಪದ್ಮನಾಭ ಶ್ಯಾನುಭೋಗ್‌, ಸಿ. ಕೃಷ್ಣ ಐತಾಳ್‌, ಅನಂತಪ್ಪ ಕಿಣಿ, ಮಾಂಟ್ರಾಡಿ ಗೋವಿಂದ ರಾವ್‌, ವೈ. ವಿ. ನಾರಾಯಣ ರಾವ್‌, ದಾಮೋದರ ಐತಾಳ್‌, ನಿರ್ಮಲ್‌ ಕುಮಾರ್‌ ಹೆಗ್ಡೆ ಸಂಸ್ಥೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

1977ರಲ್ಲಿ ಪಂಜಿತ್ತೂರುಗುತ್ತು ನಾರಾಯಣ ಶೆಟ್ರ ಅಧ್ಯಕ್ಷತೆಯಲ್ಲಿ ಶಾಲೆ ತನ್ನ ವಜ್ರ ಮಹೋತ್ಸವವನ್ನು ಆಚರಿಸಿದ್ದು, 2017ರಲ್ಲಿ ಶತಮಾನೋತ್ಸವವನ್ನು ಆಚರಿಸಲಾಗಿದೆ. ಪ್ರಸ್ತುತ ಪ್ರಸನ್ನ ಪದ್ಮರಾಜ ಹೆಗ್ಡೆ ಅವರು ಶಾಲಾ ಸಂಚಾಕರಾಗಿದ್ದು, ಶಾಲೆಯ ಬೆಳವಣಿಗೆಯ ದೃಷ್ಟಿಯಿಂದ ಗ್ರಾಮದ ಹಿರಿಯರು ಮತ್ತು ಹಳೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ವಿದ್ಯಾ ವಿದಾತ ಎಜುಕೇಶನ್‌ ಟ್ರಸ್ಟ್‌ ರಚನೆಗೆ ಯೋಜನೆ ರೂಪಿಸಲಾಗಿದೆ.

ಗ್ರಾಮೀಣ ಭಾಗದ ಸಾವಿರಾರು ಮಂದಿ ಇಲ್ಲಿ ಶಿಕ್ಷಣಾಭ್ಯಾಸ ಪಡೆದಿದ್ದು, ಉತ್ತಮ ಸಾಧಕರಾಗಿ ಮೂಡಿ ಬಂದಿದ್ದಾರೆ. ಇತೀ¤ಚಿನ ವರ್ಷಗಳಲ್ಲಿ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಯಾಗುತ್ತಿದ್ದು, ಹಳೆವಿದ್ಯಾರ್ಥಿಗಳು ಮತ್ತು ಶತಮಾನೋತ್ಸವ ಸಮಿತಿಯ ಮೂಲಕ 5 ಮಂದಿ ಗೌರವ ಶಿಕ್ಷಕರನ್ನು ನೇಮಿಸಿಕೊಂಡು, ಅವರಿಗೆ ವೇತನ ನೀಡುತ್ತಿದ್ದಾರೆ.
-ಶಂಕರ ಬಿ., ಮುಖ್ಯ ಶಿಕ್ಷಕರು, ಕರಂದಾಡಿ ಶಾಲೆ

ನಾವು ಕಲಿತ ಶಾಲೆ ಶತಮಾನೋತ್ಸವ ಪೂರೈಸಿರುವುದನ್ನು ನೋಡಿದಾಗ ಹೆಮ್ಮೆಯಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ, ಬೆಳೆಸಲು ನಿರಂತರವಾಗಿ ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ಅದಕ್ಕೆ ಹಳೆ ವಿದ್ಯಾರ್ಥಿಗಳ ಪೂರ್ಣ ಸಹಕಾರದ ಅಗತ್ಯವಿದೆ. ಉತ್ತಮ ಶಿಕ್ಷಕರ ನೇಮಕ, ಕ್ರೀಡೆಗೆ ಪ್ರೋತ್ಸಾಹಿಸಲು ಕ್ರಿಕೆಟ್‌ ಅಕಾಡೆಮಿ ಸ್ಥಾಪನೆ, ಆಂಗ್ಲ ಮಾಧ್ಯಮ ಶಿಕ್ಷಣ ವ್ಯವಸ್ಥೆಗಳ ಜೋಡಣೆಗೆ ಅಭಿವೃದ್ಧಿ ಯೋಜನೆಗಳನ್ನು ಜೋಡಿಸಿಕೊಳ್ಳಲಾಗಿದೆ.
-ಕೆ. ಲೀಲಾಧರ ಶೆಟ್ಟಿ, ಹಳೆ ವಿದ್ಯಾರ್ಥಿ

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next