ಹುಬ್ಬಳ್ಳಿ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದರೆ ತುಂಬಾ ತಾಪತ್ರಯ ಪಡಬೇಕಾಗುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಇಲಾಖೆಯಿಂದಲೇ ಅತ್ಯುತ್ತಮವಾದ ಶಾಲೆ ಸ್ಥಾಪಿಸಿದರೆ ಡೆಸ್ಕ್ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸಂಸ್ಥೆಯಿಂದ ಕೊಡಲಾಗುವುದು ಎಂದು ರೋಟರಿ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ಡಾ| ಮಹೇಶ ರಾಯ್ಕರ ಹೇಳಿದರು.
ಇಲ್ಲಿನ ಕಾರವಾರ ರಸ್ತೆಯ ಹಳೆಯ ಸಿಎಆರ್ ಮೈದಾನದ ಭವನದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವಿದ್ಯಾನಗರ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪೊಲೀಸ್ ಸಿಬ್ಬಂದಿಗೆ ಕೊಡೆಗಳ (ಛತ್ರಿ) ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿಯ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತಾಗಲು ಇಲಾಖೆ ವತಿಯಿಂದಲೇ ಶಾಲೆ ಸ್ಥಾಪನೆ ಮಾಡಿದರೆ ಅವರು ಅತ್ಯುತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು.
ಆ ನಿಟ್ಟಿನಲ್ಲಿ ಇಲಾಖೆಯು ತನ್ನ ಸಿಬ್ಬಂದಿಯ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದರು. ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಮಾತನಾಡಿ, ನನಗಿಂತಲೂ ಮಿಗಿಲಾದದ್ದು ಸಮಾಜದ ಸೇವೆ ಎಂಬ ಭಾವನೆಯೊಂದಿಗೆ ಪೊಲೀಸರು ಕರ್ತವ್ಯ ನಿರ್ವಹಿಸಬೇಕು.
ರೋಟರಿ ಸಂಸ್ಥೆಯಂತೆ ಸಮಾಜಕ್ಕೆ ಸೇವೆ ಸಲ್ಲಿಸುವುದೇ ಪೊಲೀಸರ ಧ್ಯೇಯವಾಗಿದೆ. ಪೊಲೀಸ್ ಸಿಬ್ಬಂದಿ ಮಳೆಗಾಲದಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗಲೆಂಬ ಉದ್ದೇಶದಿಂದ ರೋಟರಿ ಕ್ಲಬ್ ಸಿಬ್ಬಂದಿಗೆ 300 ಕೊಡೆಗಳನ್ನು ನೀಡುತ್ತಿರುವುದು ಉತ್ತಮ ಕಾರ್ಯ. ಸಂಸ್ಥೆ ಪೊಲೀಸರ ತೊಂದರೆ ಬಗ್ಗೆ ತಿಳಿದುಕೊಂಡಿದ್ದು ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವಿದ್ಯಾನಗರದ ಅಧ್ಯಕ್ಷೆ ಲೋರೇನ್ ಫ್ರಾನ್ಸಿಸ್, ಕಾರ್ಯದರ್ಶಿ ವಿನಯ ಜಾಧವ, ಡಿಸಿಪಿ ರೇಣುಕಾ ಸುಕುಮಾರ ಸೇರಿದಂತೆ ನಗರದ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್, ಪೊಲೀಸ್ ಸಿಬ್ಬಂದಿ ಮೊದಲಾದವರಿದ್ದರು. ಡಿಸಿಪಿ ಬಿ.ಎಸ್. ನೇಮಗೌಡ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಕ್ರೆಡಾಯ್‌ದ ಸ್ಥಳೀಯ ಶಾಖೆ ಅಧ್ಯಕ್ಷ ಪ್ರದೀಪ ರಾಯ್ಕರ ಅವರು ಪೊಲೀಸ್ ಸಿಬ್ಬಂದಿಗೆ 1500 ರೇನ್‌ಕೋಟ್ ಗಳನ್ನು ಜುಲೈ ಅಂತ್ಯದೊಳಗೆ ವಿತರಿಸುವುದಾಗಿ ಘೋಷಿಸಿದರು.