ಮೈಸೂರು: ಬಿರುಕು ಬಿಟ್ಟ ಕಟ್ಟಡ, ಮಳೆಗಾಲದಲ್ಲಿ ಸೋರುವ ಚಾವಣಿ. ಆಗೊಮ್ಮೆ ಈಗೊಮ್ಮೆ ಉದುರಿ ಬೀಳುವ ಚಾವಣಿಯ ಗಾರೆ. ಇದು ಜಿಲ್ಲೆಯ 600ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಶೋಚನೀಯ ಸ್ಥಿತಿ.
ಜಿಲ್ಲೆಯಲ್ಲಿರುವ ಸರ್ಕಾರಿ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಗಳ ಪೈಕಿ 695 ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು, ಯಾವಾಗ ಬೇಕಾದರೂ ಕುಸಿದು ಬೀಳುವ ಹಂತಕ್ಕೆ ತಲುಪಿವೆ. ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಠ ಕೇಳುವಂತಾಗಿದೆ.
ಅರೆ ಮಲೆನಾಡು ಭಾಗವಾದ ಮೈಸೂರು ಜಿಲ್ಲೆಯ ಬಹುಪಾಲು ತಾಲೂಕುಗಳಲ್ಲಿ ಮಳೆಗಾಲ ಆರಂಭವಾಯಿತು ಎಂದರೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೆ ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಶಾಲಾ ಶಿಕ್ಷಕರು ಶಿಥಿಲ ಕಟ್ಟಡಗಳಲ್ಲಿ ಮಕ್ಕಳಿಗೆ ಪಾಠ ಹೇಳಲು ಹೆದರಿ ಕಟ್ಟಡದ ಹೊರಾಂಗಣದಲ್ಲೇ ತರಗತಿ ನಡೆಸುವಂತಾಗಿದೆ.
ಇಡೀ ಕಟ್ಟಡ ಬಿರುಕು: ಎಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಗ್ರಾಪಂ ವ್ಯಾಪ್ತಿಯ ಕೆ.ಎಡತೊರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 20 ವರ್ಷ ಹಿಂದೆ ನಿರ್ಮಿಸಿರುವ ಎರಡು ಕೊಠಡಿಗಳಿರುವ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಇಡೀ ಕಟ್ಟಡ ಬಿರುಕು ಬಿಟ್ಟಿದೆ. ಜತೆಗೆ ಕಟ್ಟಡದ ಚಾವಣಿಯ ಗಾರೆ ಆಗೊಮ್ಮೆ, ಈಗೊಮ್ಮೆ ಕುಸಿದು ಬೀಳುತ್ತಿರುವುದು ಮಾಮೂಲಾಗಿದೆ. ಈ ಎಲ್ಲಾ ಕಾರಣಗಳಿಂದ ಮಕ್ಕಳು ಕೊಠಡಿಯಲ್ಲಿ ಕುಳಿತು ಪಾಠ ಕೇಳಲು ಹಿಂದೇಟು ಹಾಕುವಂತಾಗಿದೆ.
ದುರಸ್ತಿಗೆ ಇಲಾಖೆ ಮೀನಮೇಷ: ಜತೆಗೆ ಇದೇ ತಾಲೂಕಿನ ಬೀಚನಹಳ್ಳಿ ಗ್ರಾಪಂನ ರಾಮೇನಹಳ್ಳಿ ಶಾಲೆಯ ಕಟ್ಟಡದ ಸ್ಥಿತಿಯೂ ಇದೇ ಆಗಿದೆ. 50ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿರುವ ಈ ಶಾಲೆಯಲ್ಲಿ ಕಾಂಪೌಂಡ್, ಶೌಚಾಲಯ ವ್ಯವಸ್ಥೆ ಇದ್ದರೂ ಸೂಕ್ತ ನಿರ್ವಹಣೆ ಇಲ್ಲದೇ ಶೌಚಾಗೃಹಗಳು ಬಳಸಲು ಯೋಗ್ಯವಾಗಿಲ್ಲ. ಜತೆಗೆ ಕಾಂಪೌಂಡ್ ಶಿಥಿಲಗೊಂಡು ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಒಟ್ಟಾರೆ ಎಚ್.ಡಿ.ಕೋಟೆ ತಾಲೂಕಿನ 100 ಶಾಲೆಗಳ ಕಟ್ಟಡಗಳ ಸ್ಥಿತಿ ಇದೆ ಆಗಿದ್ದು, ಕಟ್ಟಡಗಳ ದುರಸ್ತಿಗೆ ಇಲಾಖೆ ಮೀನಮೇಷ ಎಣಿಸುತ್ತಿದೆ.
ನಿರ್ಲಕ್ಷ್ಯದಲ್ಲಿ ಶತಮಾನದ ಶಾಲೆ: ರಾಜ್ಯಕ್ಕೆ ಮುಖ್ಯಮಂತ್ರಿಯೊಬ್ಬರನ್ನು ನೀಡಿದ್ದ ಹುಣಸೂರು ತಾಲೂಕಿನಲ್ಲಿ 140 ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿದ್ದು, ದುರಸ್ತಿ ಕಾರ್ಯ ನನೆಗುದಿಗೆ ಬಿದ್ದಿದೆ. ಹುಣಸೂರು ಪಟ್ಟಣದ ಹೃದಯ ಭಾಗದಲ್ಲಿರುವ, ನೂರು ವರ್ಷ ಹಳೆಯದಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 380ಕ್ಕೂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 13 ಕೊಠಡಿಗಳಿವೆ. ದುರಂತವೆಂದರೆ 13 ಕೊಠಡಿಗಳ ಪೈಕಿ 10 ಸಂಪೂರ್ಣ ಶಿಥಿಲವಾಗಿದ್ದು, ಇಂದೋ ನಾಳೆಯೋ ಕುಸಿದು ಬೀಳುವಂತಿವೆ. ಶಾಲೆಯ ಶಿಕ್ಷಕರು ಬೀಳುವಂತಿರುವ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ಹೇಳುತ್ತಾ ದಿನ ದೂಡುವಂತಾಗಿದೆ.
ಶಿಥಿಲ ಕೊಠಡಿ ದುರಸ್ತಿಗೆ 28 ಕೋಟಿ ಬೇಕು:
ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 695 ಶಾಲೆಗಳ 1,441 ಕೊಠಡಿ ಶಿಥಿಲಾವಸ್ಥೆಯಲ್ಲಿವೆ. ಇವುಗಳ ದುರಸ್ತಿಗೆ ಇಲಾಖೆ 28 ಕೋಟಿ 64 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.
-ಸತೀಶ್ ದೇಪುರ