ಶಿರಸಿ: ಈ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚು. ಜೊತೆಗೆ ಕಳೆದೆರಡು ವರ್ಷಗಳ ಹಿಂದೆ ಕುಡಿಯುವ ನೀರಿನ ಕೊರತೆ ಅನುಭವಿಸಿದ್ದ ಶಾಲೆಯಲ್ಲಿ ಈ ಬಾರಿ ನೀರೂ ಹೆಚ್ಚು. ಜಲ ಸಂಕಷ್ಟದಿಂದ ಈ ಶಾಲೆ ಬಚಾವ್. ಈ ಕಾರಣದಿಂದ ಸಾವಿರಾರು ಮಕ್ಕಳು ಏಕಕಾಲಕ್ಕೆ ಬಿಸಿಯೂಟ ಮಾಡಿದರೂ ಸಮಸ್ಯೆ ಆಗಿಲ್ಲ.
ಇಲ್ಲಿನ ಮಾರಿಕಾಂಬಾ ಪ್ರೌಢಶಾಲೆ ಬರೋಬ್ಬರಿ ಒಂದೂವರೆ ಸಾವಿರ ಮಕ್ಕಳನ್ನು ಹೊಂದಿರುವ ಮಾದರಿ ಸರಕಾರಿ ಪ್ರೌಢಶಾಲೆ. ಇಲ್ಲಿ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಮಕ್ಕಳ ಶೌಚಾಲಯಕ್ಕೆ, ಕೈ-ಕಾಲು ತೊಳೆಯಲು ನಿತ್ಯ 10ರಿಂದ 11 ಸಾವಿರ ಲೀಟರ್‌ಗೂ ಹೆಚ್ಚಿನ ನೀರಿನ ಬಳಕೆಯಾಗುತ್ತದೆ. ಆದರೆ ಇಂಗುಗುಂಡಿ ಪರಿಣಾಮ ಪ್ರೌಢಶಾಲೆಗೆ ನೀರಿನ ಕೊರತೆಯ ಬಿಸಿ ತಟ್ಟಿಲ್ಲ ಎಂಬುದು ವಿಶೇಷ.
ನಗರದ ಮಾರಿಕಾಂಬಾ ಪ್ರೌಢಶಾಲೆ ಒಂದೂವರೆ ಶತಮಾನದ ಇತಿಹಾಸ ಹೊಂದಿದೆ. ಗಿರೀಶ ಕಾರ್ನಾಡ್, ರಾಮಕೃಷ್ಣ ಹೆಗಡೆ ಅವರಂಥವರು ಕಲಿತ ಶಾಲೆ ಈ ಕಾರಣಕ್ಕೂ ರಾಜ್ಯದಲ್ಲಿಯೇ ಹೆಸರುವಾಸಿ. ಸರಕಾರಿ ವ್ಯವಸ್ಥೆಯಲ್ಲಿ ಇಂಥದ್ದೊಂದು ಪ್ರೌಢಶಾಲೆ ಇರುವುದು ಹೆಮ್ಮೆ.
ಮಲೆನಾಡಿನಲ್ಲಿರುವ ಇಂಥ ಶಾಲೆಯಲ್ಲಿ ಜಲ ಜಾಗೃತಿಗೂ ಮುಂದಾಗಿ ಕೂಡ ಗಮನ ಸೆಳೆದಿತ್ತು. ಶಾಲೆಗೆ ನೂತನ ಕಟ್ಟಡ ಬಂದಾಗ ಇಲ್ಲಿನ ತಾರಸಿಯಲ್ಲಿ ಬೀಳುವ ಮಳೆ ನೀರನ್ನು ಜೀವಜಲ ಕಾರ್ಯಪಡೆ ಸಹಾಯದ ಮೂಲಕ ಇಂಗಿಸಲಾಗಿತ್ತು. ಬಾವಿ ಪಕ್ಕದಲ್ಲಿ ಪ್ರತ್ಯೇಕ ಇಂಗು ಗುಂಡಿ ನಿರ್ಮಾಣ ಮಾಡಿ ನೇರವಾಗಿ ಅಲ್ಲಿಗೆ ನೀರು ಇಳಿಸಲಾಗಿದೆ. ಕಳೆದೆರಡು ಮಳೆಗಾಲದಲ್ಲಿ ಬಿದ್ದ ಮಳೆ ನೀರು ನೇರವಾಗಿ ಬಾವಿ ಪಕ್ಕ ಇಳಿಸಿದೆ. ಇಂಗುಗುಂಡಿ ಬಳಿ ಇರುವ 40ಅಡಿ ಬಾವಿಯಲ್ಲಿ 10ಅಡಿ ನೀರು ಸದಾ ಇರುವಂತಾಗಿದೆ. ಇನ್ನುಳಿದಂತೆ ಪ್ರೌಢಶಾಲೆ ಇನ್ನೊಂದು ಬದಿಗೆ ಇರುವ 25ಅಡಿ ಇನ್ನೊಂದು ಬಾವಿಯಲ್ಲಿ 15ಅಡಿ ನೀರು ತುಂಬಿಕೊಳ್ಳುತ್ತದೆ.
ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯಲ್ಲಿ ಮೂರು ನೀರಿನ ಟ್ಯಾಂಕ್‌ಗಳಿವೆ. 5ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನೀರನ್ನು ವಿದ್ಯಾರ್ಥಿಗಳ ಶೌಚಾಲಯಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಇನ್ನು 3ಸಾವಿರ ಲೀಟರ್‌ನ ಎರಡು ಟ್ಯಾಂಕ್‌ಗಳಿವೆ. ಇವುಗಳ ನೀರನ್ನು ಕೈಕಾಲು, ಊಟದ ಬಟ್ಟಲು ತೊಳೆದುಕೊಳ್ಳಲು ವಿದ್ಯಾರ್ಥಿಗಳು ಬಳಸುತ್ತಾರೆ. ಹೀಗಾಗಿ ನಿತ್ಯ ಈ ಮೂರು ಟ್ಯಾಂಕ್‌ಗಳ ನೀರು ಬಹುತೇಕ ಖಾಲಿಯಾಗುತ್ತದೆ. ಸುಮಾರು 10ಸಾವಿರಕ್ಕೂ ಹೆಚ್ಚಿನ ಲೀಟರ್ ನೀರು ನಿತ್ಯ ಬೇಕಾಗುತ್ತದೆ ಎನ್ನುತ್ತಾರೆ ಉಪ ಪ್ರಾಂಶುಪಾಲ ನಾಗರಾಜ ನಾಯ್ಕ.
•ರಾಘವೇಂದ್ರ ಬೆಟ್ಟಕೊಪ್ಪ