Advertisement

ಶಾಲಾ ಕಾಂಪೌಂಡ್‌ ಕೆಡವಿ 4 ವರ್ಷ ಕಳೆದರೂ ನಿರ್ಮಿಸಿಲ್ಲ

09:31 PM Jun 24, 2019 | Team Udayavani |

ಗುಡಿಬಂಡೆ: ನಾಲ್ಕು ವರ್ಷಗಳ ಹಿಂದೆ ಪಟ್ಟಣದ ಮುಖ್ಯ ರಸ್ತೆ ಅಗಲಿಕರಣ ವೇಳೆ ಸರ್ಕಾರಿ ಶಾಲೆಗಳ ಕಾಂಪೌಂಡ್‌ಗಳನ್ನು ಧ್ವಂಸ ಮಾಡಿದ ಅಧಿಕಾರಿಗಳು ಮತ್ತೆ ಶಾಲೆ ಕಾಂಪೌಂಡ್‌ ನಿರ್ಮಿಸಲು ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದ ನೂರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುವ ಪರಿಸ್ಥಿತಿ ಎದುರಾಗಿದೆ.

Advertisement

ಪಟ್ಟಣದಲ್ಲಿ 4 ವರ್ಷಗಳ ಹಿಂದೆ ಮುಖ್ಯ ರಸ್ತೆ ಅಗಲಿಕರಣ ಮಾಡಿದ್ದು, ಆ ವೇಳೆ ಸರ್ಕಾರಿ ಹಿರಿಯ ಬಾಲಕಿಯರ ಶಾಲೆ, ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಪ್ರೌಢ ಶಾಲೆ ಹಾಗೂ ಸರ್ಕಾರಿ ಬಾಲಕರ ಕಿರಿಯ ಪ್ರಾಥಮಿಕ ಶಾಲೆಗಳ ಕಾಂಪೌಂಡ್‌ ಮತ್ತು ಕೆಲ ಶಾಲಾ ಕೊಠಡಿಗಳನ್ನು ಕೆಡವಿದ್ದರು.

ಆದರೆ ನಾಲ್ಕು ವರ್ಷ ಕಳೆದರೂ ಇದುವರೆಗೂ ಯಾವುದೇ ಅಧಿಕಾರಿ, ಜನಪ್ರತಿನಿಧಿಯಾಗಲೀ ಶಾಲೆಗಳ ಸಮಸ್ಯೆಗಳನ್ನು ಕೇಳಲು ಮುಂದಾಗಿಲ್ಲ. ಶಾಲೆಗಳು ಮುಖ್ಯ ರಸ್ತೆಯಲ್ಲೇ ಇದ್ದು, ವಾಹನಗಳ ಸಂಚಾರದಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ.

ವಾಹನಗಳ ಶಬ್ದದಿಂದ ತೊಂದರೆ: ಮುಖ್ಯ ರಸ್ತೆಯಲ್ಲಿ ಬಸ್‌, ದ್ವಿಚಕ್ರ ವಾಹನ, ಲಾರಿ, ಟೆಂಪೋ, ಆಟೋ, ಟಿಪ್ಪರ್‌ಗಳು ನೂರಾರು ಸಂಖ್ಯೆಯಲ್ಲಿ ಓಡಾಡುತ್ತವೆ. ಅತಿಯಾದ ಶಬ್ದದಿಂದ ಯಾವಾಗಲೂ ಗದ್ದಲ, ಶಬ್ದವಿರುವುದರಿಂದ ವಿದ್ಯಾರ್ಥಿಗಳಿಗೆ ಪಾಠ ಕೇಳಲು ತೊಂದರೆ ಆಗುತ್ತಿದೆ.

ಧೂಳುಮಯ: ರಸ್ತೆಯಲ್ಲಿ ವಾಹನಗಳ ಸಂಚಾರದಿಂದಾಗಿ ಧೂಳು ನೇರವಾಗಿ ಶಾಲೆಯ ಕೊಠಡಿಗಳ ಒಳಗೆ ಬರುತ್ತಿದೆ. ಶಾಲೆಯಲ್ಲಿ ಅರ್ಧ ಗಂಟೆ ಕುಳಿತರೇ ಸಮವಸ್ತ್ರ ಹಾಗೂ ಬ್ಯಾಗ್‌ಗಳು ಧೂಳುಮಯ ಆಗಿರುತ್ತದೆ ಎಂದು ಮಕ್ಕಳು ಹೇಳುತ್ತಾರೆ.

Advertisement

ಸದಾ ಶಾಲಾವರಣ ಹಾಗೂ ಕೊಠಡಿಗಳು ಧೂಳಿನಿಂದ ಆವರಿಸಿದರುವುದರಿಂದ ಮಕ್ಕಳಿಗೆ ಆರೋಗ್ಯ ಸಮಸ್ಯೆ ಉದ್ಬವವಾಗಲು ಕಾರಣವಾಗುತ್ತಿದೆ. ಮುಖ್ಯ ರಸ್ತೆ ಪಕ್ಕದಲ್ಲೇ ಶಾಲೆಯ ಕೊಠಡಿಗಳಿವೆ. ಕಾಂಪೌಂಡ್‌ ಇಲ್ಲದಿರುವುದರಿಂದ ಓಡಾಡಬೇಕಾದರೆ ಭಯವಾಗುತ್ತದೆ ಎನ್ನುತ್ತಾರೆ ಮಕ್ಕಳು.

ಜನಪ್ರತಿನಿಧಿಗಳ ಸುಳ್ಳು ಭರವಸೆ: ಶಾಲೆಯಲ್ಲಿ ಯಾವುದೇ ಕಾರ್ಯಕ್ರಮಗಳು ಹಮ್ಮಿಕೊಂಡಾಗ ಜನಪ್ರತಿನಿಧಿಗಳು ಬರುತ್ತಾರೆ. ಕಾಂಪೌಂಡ್‌ ನಿರ್ಮಿಸುತ್ತೇವೆಂದು ಆಶ್ವಾಸನೆ ನೀಡುತ್ತಾರೆ. ಆದರೆ ಅವರ ಭರವಸೆ ಹುಸಿಯಾಗಿದೆ.

ಎಲ್‌ಕೆಜಿ ತರಗತಿ ಪ್ರಾರಂಭ: ಶಾಲೆಗಳಲ್ಲಿ ಸರಿಯಾದ ಕೊಠಡಿಗಳ ವ್ಯವಸ್ಥೆ, ಕಾಂಪೌಂಡ್‌ ವ್ಯವಸ್ಥೆ ಹಾಗೂ ಮುಖ್ಯವಾಗಿ ಆಟದ ಮೈದಾನ ಇಲ್ಲದಿದ್ದರೂ ಸಹ ಕೆಪಿಎಸ್‌ ಶಾಲೆಗಳೆಂದು ಘೋಷಣೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು, ಪೋಷಕರು ಸರ್ಕಾರ ಹಾಗೂ ಶಿಕ್ಷಣ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ.

ಶಾಲೆಗೆ ಕಾಂಪೌಂಡ್‌ ವ್ಯವಸ್ಥೆ ಇಲ್ಲದಿರುವುದರಿಂದ ಎಲ್‌ಕೆಜಿ ಮಕ್ಕಳು, ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಹಾಗೂ ಹೋಗುವಾಗ ರಸ್ತೆಯಲ್ಲಿ ತೆರಳುವ ವೇಳೆ ಹಾಗೂ ಆಟ ಆಡುವ ನೆಪದಲ್ಲಿ ಮುಖ್ಯ ರಸ್ತೆಗೆ ಬಂದರೆ ಸಂಭವಿಸಬಹುದಾದ ಅನಾಹುತಗಳಿಗೆ ಯಾರು ಹೊಣೆ ಎಂದು ಪೋಷಕರು, ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಸ್ಥಳೀಯ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೆಪಿಎಸ್‌ ಶಾಲೆಗಳಿಗೆ ಕಾಂಪೌಂಡ್‌ ವ್ಯವಸ್ಥೆ ಮಾಡಿಕೊಡಬೇಕೆಂದು ಪೋಷಕರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಅಧಿಕಾರಿಗಳು ಅನುದಾನವನ್ನು ಬೇಡದೇ ಇರುವ ಕಡೆ ಕಾಮಗಾರಿಗಳನ್ನು ಮಾಡಿ ಹಣ ವ್ಯಯ ಮಾಡುತ್ತಿದ್ದಾರೆ. ಆದರೆ 4 ವರ್ಷಗಳಿಂದ ಕಾಂಪೌಂಡ್‌ ಇಲ್ಲದೇ ಪ್ರತಿ ದಿನ ಕಿರುಕುಳ ಅನುಭವಿಸುತ್ತಿದ್ದರೂ ಈ ಬಗ್ಗೆ ಯಾವುದೇ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಅನೇಕ ಭಾರಿ ಅಧಿಕಾರಿಗಳಿಗೆ ಕಾಂಪೌಂಡ್‌ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಹಾಗೂ ಸಂಭವಿಸಬಹುದಾದ ಅನಾಹುತಗಳ ಎಚ್ಚರಿಸುತ್ತಿದ್ದರೂ ಪ್ರಯೋಜಗೆ ಆಗದಂತಾಗಿದೆ.

ಶಾಲೆಯ ಕಾಂಪೌಂಡ್‌ ಕೆಡವಿ ಸುಮಾರು 4 ವರ್ಷ ಕಳೆದರೂ ಇದುವರೆ ಕಾಂಪೌಂಡ್‌ ನಿರ್ಮಿಸಿಲ್ಲ. ಕಾಂಪೌಂಡ್‌ ನಿರ್ಮಿಸಲು ಯಾವೊಬ್ಬ ಅ ಧಿಕಾರಿಯೂ ಇತ್ತ ಗಮನ ಹರಿಸಿಲ್ಲ. ಶಾಲೆಯಲ್ಲಿ ಎಲ್‌ಕೆಜಿ ತರಗತಿಗಳು ಪ್ರಾರಂಭವಾಗಿವೆ. ಚಿಕ್ಕ ಮಕ್ಕಳು ಶಾಲೆಗೆ ಬರುತ್ತಾರೆ. ಶಾಲೆಗೆ ಹೊಂದಿಕೊಂಡಿರುವ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಕಾಂಪೌಂಡ್‌ ಇಲ್ಲದಿರುವುದರಿಂದ ಸಂಭವಿಸಬಹುದಾದ ಅಪಘಾತ, ಅನಾಹುತಗಳಿಗೆ ಯಾರು ಹೊಣೆ ?
-ಕೆ.ಎಂ.ಗಂಗನಾರಾಯಣ, ಪ್ರಭಾರಿ ಮುಖ್ಯೋಪಾಧ್ಯಾಯ, ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಗುಡಿಬಂಡೆ

ಶಾಲಾ ಕಾಂಪೌಂಡ್‌ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ. ಮಂಜೂರು ಆಗಿದೆ. ಈಗಾಗಲೇ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ಅವರು ಕಾಂಪೌಂಡ್‌ ನಿರ್ಮಾಣಕ್ಕೆ ಇಂಜಿನಿಯರ್‌ಗೂ ಸಹ ಸೂಚನೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಶಾಲಾ ಕಾಂಪೌಂಡ್‌ ನಿರ್ಮಾಣವಾಗಲಿದೆ.
-ಕೆ.ಎಂ.ಜಯರಾಮರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗುಡಿಬಂಡೆ

* ವೆಂಕಟೇಶ್‌ ಎನ್‌.ಗುಡಿಬಂಡೆ

Advertisement

Udayavani is now on Telegram. Click here to join our channel and stay updated with the latest news.

Next